'ಕೊರೋನಾ ವೈರಸ್ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ'

ಕೊರೋನಾ ಭಯ ಬೇಡ, ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ| ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮಾಹಿತಿ ವಿದೇಶದಿಂದ ಹಿಂದಿರುಗಿದವರ ಮೇಲೆ ನಿಗಾ| ಮಾಸ್ಕ್‌ಗಳ ಕೊರತೆ ಕುರಿತು ಪರಿಶೀಲನೆ| ಹೆಚ್ಚಿನ ದರಕ್ಕೆ ಮಾಸ್ಕ್‌ ಮಾರಾಟ ಮಾಡಿದರೆ ಕಠಿಣ ಕ್ರಮ| 

Haveri DC Krishna Bajapeyi Talks Over Coronavirus

ಹಾವೇರಿ(ಮಾ.15): ಕೊರೋನಾ ವೈರಸ್‌ ಬಗ್ಗೆ ಭಯಬೇಡ. ಕೊರೋನಾ ವೈರಸ್‌ ಹರಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲೆಯಲ್ಲಿ ಯಾವುದೇ ಕೊರೋನಾ ಪ್ರಕರಣಗಳು ಪತ್ತೆಯಾಗಿಲ್ಲ. ಸಾರ್ವಜನಿಕರಿಗೆ ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿ ಭಯಪಡಿಸಿದರೆ ಅಂತವರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಕೊರೋನಾ ಮುಂಜಾಗ್ರತೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು

ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಸಿಗರು ಹಾಗೂ ವಿದೇಶದಿಂದ ಹಿಂತಿರುಗಿದವರ ಮೇಲೆ ನಿಗಾ ವಹಿಸಲಾಗಿದೆ. ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಕೊರೋನಾ ಭೀತಿ: ವಾಟ್ಸಾಪ್‌ನಲ್ಲಿ ಸುಳ್ಳು ಸುದ್ದಿ ಹರಿಬಿಟ್ಟ ವೈದ್ಯ

ಒಂದು ವಾರದ ಅವಧಿಗೆ ಜಿಲ್ಲೆಯಾದ್ಯಂತ ಸರ್ಕಾರದ ಮಾರ್ಗಸೂಚಿಯಂತೆ ಮಾಲ್‌ಗಳು, ಚಿತ್ರಮಂದಿರಗಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ವಸ್ತುಪ್ರದರ್ಶನ, ಕ್ರೀಡಾಕೂಟ, ಮ್ಯಾರಾಥಾನ್‌, ಸಂಗೀತ ಸಂಜೆ ಹಾಗೂ ಹೆಚ್ಚು ಜನ ಸೇರುವ ಮದುವೆ, ಧಾರ್ಮಿಕ ಸಮಾರಂಭ, ಜಾತ್ರೆಗಳನ್ನು ರದ್ದುಪಡಿಸಿ ಆದೇಶಿಸಲಾಗಿದೆ. ಮದುವೆ ಕಾರ್ಯಕ್ರಮಗಳಿಗೆ ಯಾವುದೇ ನಿರ್ಬಂಧವಿಲ್ಲ, ಆದರೆ ಹೆಚ್ಚು ಜನ ಸೇರದಂತೆ ನಿರ್ಬಂಧಿಸಿ ಮದುವೆ ಕಾರ್ಯಕ್ರಮಗಳನ್ನು ಮಾಡಬಹುದು. ಸ್ವಿಮಿಂಗ್‌, ಜಿಮ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ತಿಳಿಸಿದರು.

ಒಂದರಿಂದ ಆರನೇ ತರಗತಿ ಹಾಗೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 7 ರಿಂದ 9ನೇ ತರಗತಿ ಪರೀಕ್ಷೆಗಳನ್ನು ಮಾ. 23ರೊಳಗೆ ಮುಗಿಸಬೇಕು. 7 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಗತಿಗಳನ್ನು ಸ್ಥಗಿತಗೊಳಿಸಿ ಪರೀಕ್ಷೆಗೆ ಮಾತ್ರ ಹಾಜರಾಗುವಂತೆ ಕ್ರಮವಹಿಸಲು ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗೆ ಯಾವುದೇ ತೊಂದರೆ ಇಲ್ಲ. ಎಲ್ಲ ಪಠ್ಯಕ್ರಮದ ಶಾಲೆಗಳು ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಮಾರಕ ಕೊರೋನಾ : ಭಾರತದಷ್ಟು ಕಾಳಜಿ ಅಮೆರಿಕದಲ್ಲೂ ಇಲ್ಲ!

ವಿದೇಶಿ ಪ್ರಯಾಣದಿಂದ ಜಿಲ್ಲೆಗೆ ಹಿಂತಿರುಗಿದ ಪ್ರಯಾಣಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸ್ವಯಂ ಪ್ರೇರಣೆಯಿಂದ ತಪಾಸಣೆಗೆ ಒಳಗಾಗಬೇಕು. ಯಾವುದೇ ದೇಶದಿಂದ ಹಿಂದಿರುಗಿದ ವ್ಯಕ್ತಿಗಳನ್ನು ಅವರ ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಿ(ಐಸೋಲೆಷನ್‌) ನಿಗಾ ವಹಿಸಲಾಗಿದೆ. ವಿದೇಶದಿಂದ ಈವರೆಗೆ ಜಿಲ್ಲೆಗೆ ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ, ಸವಣೂರು ತಾಲೂಕಿನ ಒಟ್ಟಾರೆ 10 ಜನ ಜಪಾನ, ನೇಪಾಳ, ಮಲೇಶಿಯಾ, ಬಹರೋನ್‌, ದುಬೈನಿಂದ ಹಿಂತಿರುಗಿದ್ದಾರೆ. ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ಯಾರಲ್ಲೂ ಕೊರೋನಾ ವೈರಸ್‌ನ ಪಾಸಿಟಿವ್‌ ಲಕ್ಷಣವಿಲ್ಲ. ಆದಾಗ್ಯೂ ಆರೋಗ್ಯ ಇಲಾಖೆಯ ನಿಯಮದಂತೆ 14 ದಿನಗಳವರೆಗೆ ಅವರ ಮನೆಯಲ್ಲೇ ಇರಿಸಿ ನಿತ್ಯವು ನಿಗಾವಹಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಎಲ್ಲ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಹಾವೇರಿ ಬಸ್‌ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ಹೆಲ್ಪ್‌ ಡೆಸ್ಕ್‌ಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಘಟಕದಲ್ಲಿ 249102 ಸಂಖ್ಯೆಯ ಸಹಾಯವಾಣಿ ಸ್ಥಾಪಿಸಲಾಗಿದೆ. ಸಾರ್ವಜನಿಕರು ಕೊರೋನಾ ಕುರಿತಂತೆ ಮಾಹಿತಿಯನ್ನು ವಿನಿಮಿಯ ಮಾಡಿಕೊಳ್ಳಬಹುದು. ಅನಗತ್ಯವಾದ ಪ್ರಯಾಣಗಳನ್ನು ಸಾಧ್ಯವಾದಷ್ಟು ಮುಂದೂಡುವಂತೆ ಮನವಿ ಮಾಡಿಕೊಂಡರು.

ಮೊಕದ್ದಮೆ ದಾಖಲು: 

ಜಿಲ್ಲೆಯಲ್ಲಿ ಕೊರೋನಾ ದೃಢಪಟ್ಟಿದೆ ಎಂದು ವಾಟ್ಸಾಪ್‌ನಲ್ಲಿ ಸುಳ್ಳು ಸುದ್ದಿ ಹರಡಿದ ಕುರಿತಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ವರದಿ ಸಲ್ಲಿಸದ್ದಾರೆ. ಸುಳ್ಳು ಸುದ್ದಿ ಹರಡಿದ ವ್ಯಕ್ತಿಯ ಮೇಲೆ ಮೊಕದ್ದಮೆ ದಾಖಲು ಮಾಡಿ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾಸ್ಕ್‌ಗಳ ಕೊರತೆ ಕುರಿತಂತೆ ಪರಿಶೀಲನೆ ಮಾಡಲಾಗುವುದು. ಹೆಚ್ಚಿನ ದರದಲ್ಲಿ ಮಾಸ್ಕ್‌ಗಳ ಮಾರಾಟ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು. ಆರೋಗ್ಯವಂತರು ಮಾಸ್ಕ್‌ ಧರಿಸುವ ಅಗತ್ಯವಿಲ್ಲ. ಆಸ್ಪತ್ರೆಯಲ್ಲಿ ಕೆಲಸಮಾಡುವರು ಮಾತ್ರ ಮಾಸ್ಕ್‌ ಧರಿಸಬೇಕು ಎಂದು ತಿಳಿಸಿದರು.

ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಈ ರೋಗ ಹರಡುತ್ತದೆ. ಕಾಲಕಾಲಕ್ಕೆ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಹೆಚ್ಚು ಜನ ಇರುವೆಡೆ ಸೇರಬಾರದು. ಸಾಧ್ಯವಾದಷ್ಟು ಪ್ರವಾಸ, ವಿದೇಶಿ ಪ್ರವಾಸದಿಂದ ದೂರ ಉಳಿಯಬೇಕು. ಜನದಟ್ಟಣೆಯಿಂದ ದೂರ ಉಳಿಯುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಜಿ. ದೇವರಾಜ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ರಾಜ್ಯ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಸಹಾಯಕ ವಿಭಾಗೀಯ ನಿಯಂತ್ರಣಾಧಿಕಾರಿ ಮುಜುಂದಾರ, ಜಿಲ್ಲಾ ಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಜಗದೀಶ ಪಾಟೀಲ, ಡಾ. ಸಂತೋಷ್‌ ಹಾಲುಂಡಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios