Asianet Suvarna News Asianet Suvarna News

ಯಾದಗಿರಿ: ಭಾರೀ ಮಳೆಗೆ ರೈತರ ಜೀವನಾಡಿ ಹತ್ತಿಕುಣಿ ಡ್ಯಾಂ ಭರ್ತಿ..!

ಜಲಾಶಯ ಭರ್ತಿಯಾಗಿರುವುದರಿಂದ ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ, ಹೊನಗೇರಾ, ಕಟಗಿ ಶಹಾಪೂರ, ದಸರಾಬಾದ್ ಭಾಗದ ರೈತರು ಸುಮಾರು 5300 ಎಕರೆ ಜಮೀನಿನಲ್ಲಿ ಹಿಂಗಾರು ಬೆಳೆಗಳಾದ ಶೇಂಗಾ, ಜೋಳ, ಸಜ್ಜೆ ಹಾಗೂ ಭತ್ತ ಬೆಳೆಯಲು ಅನುಕೂಲವಾಗಿದೆ.

Hattikuni Dam Fill in Yadgir grg
Author
First Published Sep 5, 2024, 12:41 PM IST | Last Updated Sep 5, 2024, 12:41 PM IST

ಯಾದಗಿರಿ(ಸೆ.05):  ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ತಾಲೂಕಿನ ಹತ್ತಿಕುಣಿ ಭಾಗದ ರೈತರ ಜೀವನಾಡಿಯಾಗಿರುವ ಹತ್ತಿಕುಣಿ ಜಲಾಶಯ ಭರ್ತಿಯಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದಟ್ಟ ಅರಣ್ಯದ ಮಧ್ಯೆ ಇರುವ ಜಲಾಶಯ ಭರ್ತಿಯಾಗಿರುವುದರಿಂದ ಸೋಮವಾರ ಬೆಳಿಗ್ಗೆ 10 ಗಂಟೆಗೆ ಜಲಾಶಯ ಸಹಾಯಕ ಇಂಜಿನಿಯರ್ ಕಾವೇರಿ ರೆಡ್ಡಿ ದಡದಲ್ಲಿರುವ ಶಕ್ತಿ ಮಾತಾ ತಾಯಮ್ಮದೇವಿ, ತೂಬಿಗೆ ಹಾಗೂ ಗೇಟ್‌ಗಳಿಗೆ ಪೂಜೆ ಸಲ್ಲಿಸಿ, ಮೂರು ಗೇಟ್‌ಗಳನ್ನು ತೆರೆಯಲಾಯಿತು. ನೀರನ್ನು ಹಾಗೂ ಅಲ್ಲಿರುವ ನಿಸರ್ಗ ಸೌಂದರ್ಯ ವೀಕ್ಷಣೆ ಮಾಡಲು ಸಹಸ್ರಾರು ಜನರೇ ಅಲ್ಲಿ ಸೇರಿದ್ದರು.

ಜಲಾಶಯ ಭರ್ತಿಯಾಗಿರುವುದರಿಂದ ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ, ಹೊನಗೇರಾ, ಕಟಗಿ ಶಹಾಪೂರ, ದಸರಾಬಾದ್ ಭಾಗದ ರೈತರು ಸುಮಾರು 5300 ಎಕರೆ ಜಮೀನಿನಲ್ಲಿ ಹಿಂಗಾರು ಬೆಳೆಗಳಾದ ಶೇಂಗಾ, ಜೋಳ, ಸಜ್ಜೆ ಹಾಗೂ ಭತ್ತ ಬೆಳೆಯಲು ಅನುಕೂಲವಾಗಿದೆ.

ನೀರಾವರಿ ಇಲಾಖೆ ಹುದ್ದೆಗೆ ನಕಲಿ ದಾಖಲೆ ಅಕ್ರಮ: ಕನ್ನಡಪ್ರಭ ಬಯಲಿಗೆಳೆದ ಹಗರಣ

ಜಿಲ್ಲೆಯ ಪ್ರವಾಸೋಧ್ಯಮ ಕ್ಷೇತ್ರಗಳಲ್ಲಿ ಒಂದಾಗಿರುವ ಹತ್ತಿಕುಣಿ ಜಲಾಶಯ ಪಕ್ಕದಲ್ಲಿಯೇ ತೋಟಗಾರಿಕೆ ಇಲಾಖೆಯ 40 ಎಕರೆ ತೋಟವಿದ್ದು, ಜಲಾಶಯ ಸುತ್ತ ನಿಸರ್ಗ ಬೆಟ್ಟವೇ ಇರುವುದರಿಂದ ತಾಲೂಕಿನಿಂದ ಹಾಗೂ ಬೇರೆ ಭಾಗಗಳಿಂದ ಜನರು ತಮ್ಮ ಕುಟುಂಬಗಳೊಂದಿಗೆ ಜಲಾಶಯಕ್ಕೆ ಭೇಟಿ ನೀಡಿ, ತಮ್ಮ ಮಕ್ಕಳೊಂದಿಗೆ ಕೆಲ ಗಂಟೆಗಳ ಕಾಲ ಅಲ್ಲಿಯೇ ತಂಗಿ ತೆರಳುತ್ತಾರೆ.

ಈಗಾಗಲೇ ಅಲ್ಲಿ ಮಾಜಿ ಶಾಸಕ ದಿ. ನಾಗನಗೌಡ ಕಂದಕೂರ ಅವಧಿಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಒಂದು ಕೋಟಿ ರು.ಗಳ ಕಾಮಗಾರಿ ಕೈಗೊಳ್ಳಲಾಗಿದೆ, ಇದು ಕೂಡ ಪ್ರವಾಸಿಗರು ಸಮಯ ಕಳೆಯಲು ಸಹಾಯಕವಾಗಿದೆ.
ರಜಾ ದಿನಗಳಲ್ಲಿ ಜಿಲ್ಲೆಯ ಹಾಗೂ ಬೇರೆ ಜಿಲ್ಲೆಗಳ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಿಕ್‌ನಿಕ್‌ಗೆಂದು ಜಲಾಶಯಕ್ಕೆ ಪ್ರತಿವರ್ಷ ಭೇಟಿ ನಿಡುತ್ತಾರೆ. ಜಿಲ್ಲಾಡಳಿತ ಇಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿ, ಜಲಾಶಯದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದರೆ ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಬೋಟಿಂಗ್‌ನಲ್ಲಿ ಸಂಚಾರ ಮಾಡಿ ಸಂತೋಷದಿಂದ ನಿಸರ್ಗವನ್ನು ವೀಕ್ಷಿಸಿ ತೆರಳಬಹುದು. ಸರ್ಕಾರಕ್ಕೆ ಕೂಡ ಹೆಚ್ಚಿನ ಆದಾಯ ಬರುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ.

Latest Videos
Follow Us:
Download App:
  • android
  • ios