ಹಾಸನದ ಚನ್ನರಾಯಪಟ್ಟಣ ಬಳಿ ಕಾರೊಂದು ನಿಯಂತ್ರಣ ತಪ್ಪಿ ಹೇಮಾವತಿ ನಾಲೆಗೆ ಉರುಳಿಬಿದ್ದ ಪರಿಣಾಮ ತಾಯಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧರ್ಮಸ್ಥಳದಿಂದ ದೇವನಹಳ್ಳಿಗೆ ತೆರಳುತ್ತಿದ್ದ ಕುಟುಂಬದ ಇತರ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನ: ಜಿಲ್ಲೆಯಲ್ಲಿ ದಾರುಣ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕಾರೊಂದು ನಿಯಂತ್ರಣ ತಪ್ಪಿ ನಾಲೆಗೆ ಪಲ್ಟಿಯಾದ ಪರಿಣಾಮ ತಾಯಿ ಮತ್ತು ಮಗು ಮೃತಪಟ್ಟಿರುವ ಘಟನೆ ಚನ್ನರಾಯಪಟ್ಟಣ–ಹಿರೀಸಾವೆ ಮಾರ್ಗದ ಎನ್‌ಹೆಚ್ 75ರಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಲ್ಲವನಘಟ್ಟ ಗ್ರಾಮದ ಸಮೀಪ ಈ ದುರ್ಘಟನೆ ಸಂಭವಿಸಿದೆ. ಧರ್ಮಸ್ಥಳದಿಂದ ದೇವನಹಳ್ಳಿ ಕಡೆಗೆ ತೆರಳುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೇಮಾವತಿ ನಾಲೆಗೆ ಉರುಳಿ ಬಿದ್ದಿದೆ. ಕಾರು ಪಲ್ಟಿಯಾದ ಪರಿಣಾಮ ಒಳಗಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಯಿ ಮತ್ತು ಮಗು ಬಲಿ

ಅಪಘಾತದಲ್ಲಿ ಪ್ರಿಯಾಂಕ (20) ಹಾಗೂ ಅವರ ಒಂದೂವರೆ ವರ್ಷದ ಮಗು ವೈಭವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ . ತಾಯಿ ಮತ್ತು ಮಗುವಿನ ಸಾವು ಕುಟುಂಬ ಸದಸ್ಯರು ದುಃಖದ ಕಡಲಲ್ಲಿ ಮುಳುಗುವಂತೆ ಮಾಡಿದೆ.

ಕಾರುದಲ್ಲಿ ಪ್ರಯಾಣಿಸುತ್ತಿದ್ದ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಧರ್ಮಸ್ಥಳದಿಂದ ದೇವನೂರಿನತ್ತ ಪ್ರಯಾಣ

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಕುಟುಂಬ ಧರ್ಮಸ್ಥಳದಿಂದ ದೇವನಹಳ್ಳಿ ಪ್ರಯಾಣಿಸುತ್ತಿತ್ತು. ವೇಗ ಮತ್ತು ಚಾಲಕನ ನಿಯಂತ್ರಣ ತಪ್ಪಿರುವುದು ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಈ ದುರ್ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ರಸ್ತೆ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಯೋಚಿಸುಚಂತೆ ಮಾಡಿದೆ. ಚಾಲಕರು ವೇಗ ನಿಯಂತ್ರಣದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಅತ್ಯಗತ್ಯ ಎಂಬುದನ್ನು ಈ ಘಟನೆ ಸಾರಿ ಹೇಳಿದೆ.