ಹಾಸನ [ಸೆ.12]:  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ನಾಲಾಯಕ್‌ ಅಧ್ಯಕ್ಷ ಎಂದು ಜರಿದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯನವರೇ ನೇರ ಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ ಅವರು, ಯಾವುದೇ ಪಕ್ಷದಲ್ಲಿ ಇದ್ದರು ಒಳ ಪಿತೂರಿ ರಾಜಕೀಯ ಮಾಡುವವರು. ಅವರಿಂದ ನಾವು ಪಾಠ ಕಲಿಯಬೇಕಿಲ್ಲ. ಎಚ್‌.ವಿಶ್ವನಾಥ್‌, ಬೈರತ್ತಿ ಬಸವರಾಜು ಸೇರಿದಂತೆ ಹಲವು ನಾಯಕು ಕಾಂಗ್ರೆಸ್‌ ತೊರೆಯಲು ಸಿದ್ದರಾಮಯ್ಯರೇ ಕಾರಣ ಎಂದು ಆರೋಪಿಸಿದರು.

ಸಿಎಂ ಆಗಿದ್ದು ಹೇಗೆಂದು ತಿಳಿದಿದೆ:

ಸಿದ್ದರಾಮಯ್ಯ ಪಕ್ಷೇತರರಾಗಿ ಗೆದ್ದು ಕನ್ನಡ ಪ್ರಾಧಿಕಾರ ಅಧ್ಯಕ್ಷರಾಗಿ ನಂತರ ಜೆಡಿಎಸ್‌ ಪಕ್ಷ ಸೇರಿದರು. ಬಳಿಕ ಜೆಡಿಎಸ್‌ನಿಂದ ಹೊರಹಾಕಿದಾಗ, ಕಾಂಗ್ರೆಸ್‌ ಬಾಗಿಲು ತಟ್ಟಿಹೇಗೆ ರಾಜ್ಯದ ಸಿಎಂ ಆಗಿ ಅಧಿಕಾರ ಹಿಡಿದಿದರು ಎಂಬುವರು ಎಲ್ಲರಿಗೂ ಗೊತ್ತು. ದ್ವೇಷ ರಾಜಕೀಯ ಮಾಡೋ ಅವರಿಂದ ಬಿಜೆಪಿ ನಾಯಕರು ಬುದ್ಧಿ ಕಲಿಯಬೇಕಿಲ್ಲ. ಕಾಂಗ್ರೆಸ್‌ನಲ್ಲಿ ರಾಷ್ಟ್ರೀಯ ಅಧ್ಯಕ್ಷರನ್ನು ಆಯ್ಕೆ ಮಾಡಿಲ್ಲ ಎಂದು ತಿರುಗೇಟು ನೀಡಿದರು.

ನೈತಿಕತೆಯಿಲ್ಲ:

ಬಿಜೆಪಿ ಬಗ್ಗೆ ಮಾತನಾಡೋ ನೈತಿಕತೆ ಸಿದ್ದರಾಮಯ್ಯ ಅವರಿಗಿಲ್ಲ . ಸಿದ್ದರಾಮಯ್ಯ ನಾಯಕತ್ವದಲ್ಲಿ 5 ವರ್ಷ ಆಡಳಿತ ಮಾಡಿದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ರಾಜ್ಯದ ಜನತೆ ನಿರ್ಲಕ್ಷ್ಯ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷ 120ರಿಂದ 70 ಸ್ಥಾನಕ್ಕೆ ಕುಸಿದಿದ್ದು, ಇದಕ್ಕೆ ಸಿದ್ದರಾಮಯ್ಯ ಅವರ ದುರಾಡಳಿತವೇ ಕಾರಣ. ಅವರ ಸರ್ಕಾರದ ಅವಧಿಯಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತರ ಕೊಲೆಯಾಗಿತ್ತು ಎಂದು ಟೀಕಾಪ್ರಹಾರ ನಡೆಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರ ಮೇಲೆ ಐಟಿ ರೈಡ್‌ ಮಾಡಿಸಿದ್ದು ಸಿದ್ದರಾಮಯ್ಯ ಅವರೇ ಎಂದು ಡಿಕೆಶಿ ತಾಯಿ ಹಿಂದೆಯೇ ಆರೋಪ ಮಾಡಿದ್ದರು. ಕಾಂಗ್ರೆಸ್‌ ನಾಯಕರಿಂದ ಶಿವಕುಮಾರ್‌ ಅವರನ್ನು ತುಳಿಯಲು ಹುನ್ನಾರ ಮಾಡಲಾಗಿದೆ ಎಂದು ಹಲವು ಬಾರಿ ಆರೋಪಗಳು ಅವರದೇ ಪಕ್ಷದ ನಾಯಕರಿಂದ ಕೇಳಿ ಬಂದಿದೆ. ನಾನೇ ಪ್ರಶ್ನಾತೀತಾ ನಾಯಕ ಎಂದು ಹೇಳಿಕೊಂಡು ತಿರುಗಾಡುತ್ತಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಮತಗಳಿಂದ ಗೆಲುವು ಪಡೆದರು. ಇಡಿ ಅಧಿಕಾರಿಗಳು ಅವರ ಆಡಳಿತ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಡಿಕೆಶೀ ಬಂಧನದ ಹಿಂದೆ ಬಿಜೆಪಿಯ ಯಾವುದೇ ಕೈವಾಡವಿಲ್ಲ ಎಂದರು.