ಹಾಸನದಲ್ಲಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ನಿಶ್ಚಿತಾರ್ಥವಾಗಿದ್ದ ಯುವಕ ರಾಕೇಶ್ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅತಿಯಾದ ವೇಗದಿಂದ ಸಂಭವಿಸಿದ ಈ ಮುಖಾಮುಖಿ ಡಿಕ್ಕಿಯಿಂದಾಗಿ, ಆಗಸ್ಟ್‌ನಲ್ಲಿ ಮದುವೆಯಾಗಬೇಕಿದ್ದ ರಾಕೇಶ್ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ.

ಹಾಸನ (ಫೆ.19): ಮದುವೆ ಮನೆಯಲ್ಲಿ ಸಡಗರವಿರಬೇಕಾದ ಜಾಗದಲ್ಲಿ ಈಗ ನೀರವ ಮೌನ ಆವರಿಸಿದೆ. ಹಸೆಮಣೆ ಏರಬೇಕಾಗಿದ್ದ ಯುವಕನೊಬ್ಬ ವಿಧಿಯಾಟಕ್ಕೆ ಬಲಿಯಾಗಿರುವ ದಾರುಣ ಘಟನೆ ಹಾಸನದಲ್ಲಿ ನಡೆದಿದೆ. ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ನಿಶ್ಚಿತಾರ್ಥವಾಗಿದ್ದ ಯುವಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ವಿವರ:

ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಮೃತರನ್ನು ಗುಡ್ಡೇನಹಳ್ಳಿ ನಿವಾಸಿ ರಾಕೇಶ್ (29) ಮತ್ತು ವಲ್ಲಬಾಯಿ ರಸ್ತೆಯ ನಿವಾಸಿ ಮಯೂರ (24) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಇಬ್ಬರೂ ತಮ್ಮ ತಮ್ಮ ಬೈಕ್‌ಗಳಲ್ಲಿ ಸಂಚರಿಸುತ್ತಿದ್ದಾಗ ಅತಿಯಾದ ವೇಗದಿಂದಾಗಿ ನಿಯಂತ್ರಣ ತಪ್ಪಿ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಇಬ್ಬರೂ ಯುವಕರು ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಬರಸಿಡಿಲು:

ಮೃತರಲ್ಲಿ ಒಬ್ಬರಾದ ರಾಕೇಶ್ ಅವರಿಗೆ ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿತ್ತು. ಬರುವ ಆಗಸ್ಟ್ 23 ರಂದು ವಿವಾಹ ಮಹೋತ್ಸವ ನಡೆಸಲು ಕುಟುಂಬಸ್ಥರು ನಿಶ್ಚಯಿಸಿದ್ದರು. ಮದುವೆಗೆ ಬೇಕಾದ ತಯಾರಿಗಳು ಆರಂಭವಾಗಿದ್ದವು, ಮಗನ ಮದುವೆ ಕಂಡು ಸಂಭ್ರಮಿಸಬೇಕಾಗಿದ್ದ ಪೋಷಕರಿಗೆ ಈ ಸಾವು ಭರಿಸಲಾಗದ ಆಘಾತ ನೀಡಿದೆ. 'ಆಗಸ್ಟ್‌ನಲ್ಲಿ ಮಗನ ಮದುವೆ ಮಾಡಬೇಕು ಅಂದುಕೊಂಡಿದ್ವಿ, ಆದರೆ ಈಗ ಮಗನ ಹೆಣದ ಮುಂದೆ ಕೂರುವಂತಾಯಿತಲ್ಲಾ' ಎಂದು ಕುಟುಂಬಸ್ಥರು ಹಾಕುತ್ತಿರುವ ಆಕ್ರಂದನ ಮುಗಿಲು ಮುಟ್ಟಿದೆ.

ಮತ್ತೋರ್ವ ಮೃತ ಯುವಕ ಮಯೂರ ಕೇವಲ 24 ವರ್ಷದವನಾಗಿದ್ದು, ವಲ್ಲಬಾಯಿ ರಸ್ತೆಯಲ್ಲಿ ಶೋಕ ಮಡುಗಟ್ಟಿದೆ. ಇಬ್ಬರೂ ಯುವಕರು ಅಕಾಲಿಕವಾಗಿ ಸಾವನ್ನಪ್ಪಿರುವುದು ಇಡೀ ಕುಟುಂಬಗಳನ್ನು ಸಂಕಷ್ಟಕ್ಕೆ ಈಡು ಮಾಡಿದೆ.

ಪೊಲೀಸ್ ತನಿಖೆ:

ವಿಷಯ ತಿಳಿಯುತ್ತಿದ್ದಂತೆಯೇ ಹಾಸನ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅತಿಯಾದ ವೇಗ ಮತ್ತು ಅಜಾಗರೂಕ ಚಾಲನೆಯೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.