ಹರ್ಷ ಕೊಲೆ ಪ್ರಕರಣದ ಆರೋಪಿಗಳು ಬಳ್ಳಾರಿ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳಿಗಾಗಿ ಒತ್ತಾಯಿಸಿ, ನಿರಾಕರಿಸಿದಾಗ ಹಳೆಯ ವಿಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೈಲಿನ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಬಳ್ಳಾರಿ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ಇಬ್ಬರು ಆರೋಪಿಗಳಿಗೆ ಐಷಾರಾಮಿ ಸೌಲಭ್ಯ ನೀಡಲು ತಿರಸ್ಕಾರ ಮಾಡಿದ್ದರಿಂದ ಜೈಲಿನ ಹಳೆಯ ಪೋಟೋ ಹಾಗೂ ವಿಡಿಯೋವನ್ನು ವೈರಲ್ ಮಾಡಿರುವ ಬಗ್ಗೆ ಆರೋಪ ಕೇಳಿಬಂದಿದೆ.
ಪ್ರಕರಣದಲ್ಲಿ ಬಂಧಿತರಾಗಿರುವ 10 ಜನ ಆರೋಪಿಗಳ ಪೈಕಿ ಇಬ್ಬರು ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಈ ಆರೋಪಿಗಳು ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಇದಾದ ಬಳಿಕ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಕಲ್ಪಿಸುವಂತೆ ಆರೋಪಿಗಳು ಜೈಲಿನ ಅಧಿಕಾರಿಗಳಿಗೆ, ಸಿಬ್ಬಂದಿಗೆ ನಿತ್ಯ ಒತ್ತಡ ಹೇರುವುದರೊಂದಿಗೆ ಬಳ್ಳಾರಿ ಜೈಲಿನಿಂದ ಶಿವಮೊಗ್ಗ ಜೈಲಿಗೆ ವರ್ಗಾವಣೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಅದು ಈಡೇರದ ಹಿನ್ನೆಲೆ ಜೈಲಿನಲ್ಲಿ ಈ ಹಿಂದೆ ನಡೆದ ಘಟನೆಗಳ ವಿಡಿಯೋ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈ ಕುರಿತು ಜೈಲಿನ ಅಧೀಕ್ಷಕಿ ಲತಾ ಪ್ರತಿಕ್ರಿಯಿಸಿ, ಜೈಲಿನಲ್ಲಿರುವ ಇಬ್ಬರು ಆರೋಪಿಗಳು ಹಳೆಯ ವಿಡಿಯೋ, ಪೋಟೋಗಳನ್ನು ವೈರಲ್ ಮಾಡಿಸಲು ಮುಂದಾಗಿದ್ದರೆಂದು ತಿಳಿದುಬಂದಿದೆ. 2018, 2019ರಲ್ಲಿ ಸೇರಿ ಹಳೆಯ ವಿಡಿಯೋಗಳನ್ನು ಈಗ ಹರಿಬಿಡಲಾಗುತ್ತಿದೆ. ವಿಡಿಯೋದಲ್ಲಿರುವ ಕೈದಿಗಳು ಈಗಾಗಲೇ ಬಿಡುಗಡೆಯಾಗಿದ್ದಾರೆ. ಅಲ್ಲದೆ, ಸೌಲಭ್ಯಕ್ಕಾಗಿ, ಬೇರೆ ಜೈಲಿಗೆ ಸ್ಥಳಾಂತರಿಸುವಂತೆ ನಿತ್ಯ ಒತ್ತಡ ಹೇರುತ್ತಿದ್ದು, ಅದು ಈಡೇರದ ಹಿನ್ನೆಲೆ ವಿಡಿಯೋ, ಫೋಟೋಗಳನ್ನು ಹರಿಬಿಟ್ಟು ಅಧಿಕಾರಿಗಳು, ಸಿಬ್ಬಂದಿಗೆ ಬ್ಲಾಕ್ ಮೇಲ್ ಮಾಡುವ ತಂತ್ರ ಮಾಡುತ್ತಿದ್ದಾರೆ. ಈ ಕುರಿತು ಮೇಲಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.


