Asianet Suvarna News Asianet Suvarna News

ಬೇಸಿಗೆಯಲ್ಲೇ ಹಾರಂಗಿ ಡ್ಯಾಂ ಬಹು​ತೇಕ ಭರ್ತಿ..!

*  ಮಳೆ ನೀರಿಗೆ 22 ವರ್ಷದಲ್ಲಿ 2ನೇ ಸಲ ರಾಮ​ನ​ಗ​ರದ ಕಣ್ವ ಜಲಾಶಯ ಪೂರ್ಣ
*  ಇಗ್ಗಲೂರು ಬ್ಯಾರೇಜ್‌, ಹಾರೋಬೆಲೆ, ಮಂಚನಬೆಲೆ ಜಲಾಶಯಗಳೂ ಭರ್ತಿ
*  ಕೆಆ​ರ್‌​ಎ​ಸ್‌ಗೆ 2 ಅಡಿ ನೀರು
 

Harangi Dam Almost Full During Summer grg
Author
Bengaluru, First Published May 20, 2022, 7:32 AM IST

ಬೆಂಗಳೂರು(ಮೇ.20):  ಕಳೆ​ದೊಂದು ವಾರ​ದಿಂದ ಬಿಡದೆ ಸುರಿ​ಯು​ತ್ತಿ​ರು​ವ ಮಳೆಯಿಂದಾಗಿ ಬೇಸಿಗೆ ಕಾಲ​ದಲ್ಲೇ ರಾಜ್ಯ​ದಲ್ಲಿ ಅನೇಕ ಕೆರೆ​ಕ​ಟ್ಟೆ​ಗಳು ಮಾತ್ರ​ವ​ಲ್ಲದೆ, ಅಣೆ​ಕ​ಟ್ಟು​ಗಳೂ ಮೈದುಂಬಿ​ವೆ. ಕೊಡ​ಗಿನ ಹಾರಂಗಿ ಜಲಾ​ಶಯ ಬೇಸಿ​ಗೆ​ಯಲ್ಲಿ ಇದೇ ಮೊದಲ ಭಾರಿಗೆ ಭರ್ತಿ​ಯಾಗುವ ಹಂತ ತಲು​ಪಿ​ದ​ರೆ, ರಾಮ​ನ​ಗರ ಜಿಲ್ಲೆಯ ಕಣ್ವ ಜಲಾ​ಶಯ 22 ವರ್ಷ​ದಲ್ಲಿ 2ನೇ ಬಾರಿಗೆ ತುಂಬಿ​ದೆ.

ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗುವ ಹಂತ ತಲು​ಪಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ನೀರು ಬಿಡಲು ನಿರ್ಧ​ರಿ​ಸ​ಲಾ​ಗಿದೆ. ಜಲಾಶಯಕ್ಕೆ 4,000 ಕ್ಯುಸೆಕ್‌ ಒಳ​ಹ​ರಿ​ವಿದ್ದು, 350 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿ​ದೆ. ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ ಆಗಿದ್ದು, ಜಲಾ​ಶ​ಯದಲ್ಲಿ 2849.60 ಅಡಿ ನೀರಿನ ಸಂಗ್ರ​ಹ​ವಿ​ದೆ. ಈ ಜಲಾ​ಶಯ ಬೇಸಿಗೆ​ಯಲ್ಲಿ ಭರ್ತಿ​ಯಾ​ಗು​ವ ಹಂತ ತಲು​ಪು​ತ್ತಿ​ರು​ವು​ದು ಇದೇ ಮೊದ​ಲು.

ಪ್ರವಾಸಿಗರ ಮೋಜು, ಮಸ್ತಿಗೆ ಬ್ರೇಕ್‌ : ಡ್ಯಾಂ ಹಿನ್ನೀರು ಪ್ರದೇಶಕ್ಕೆ ಕಂದಕ ನಿರ್ಮಾಣ

ಇನ್ನು ರಾಮ​ನ​ಗರ ಜಿಲ್ಲೆಯ ಚನ್ನಪಟ್ಟಣದ ಕಣ್ವ ಜಲಾ​ಶಯ, ಇಗ್ಗಲೂರಿನ ಬ್ಯಾರೇಜ್‌, ಮಾಗಡಿಯ ಮಂಚನಬೆಲೆ ಜಲಾ​ಶಯ ಹಾಗೂ ಕನಕಪುರ ತಾಲೂಕಿನ ಹಾರೋಬೆಲೆ ಜಲಾ​ಶ​ಯ​ಗ​ಳೂ ಭರ್ತಿ​ಯಾ​ಗಿವೆ. ಈ ಭಾಗದ ಕುಡಿಯುವ ನೀರು ಮತ್ತು ಕೃಷಿಗೆ ಈ ಜಲಾ​ಶ​ಯ​ಗಳೇ ಜೀವಾ​ಧಾರ. ಕಣ್ವ ಜಲಾ​ಶಯ ಕಳೆದ ಬೇಸಿ​ಗೆ​ಯಲ್ಲೂ ಭರ್ತಿ​ಯಾ​ಗಿತ್ತು. ಇದೀಗ ಮತ್ತೆ ಭರ್ತಿ​ಯಾ​ಗಿ​ರು​ವು​ದ​ರಿಂದ ಇಪ್ಪ​ತ್ತೆ​ರಡು ವರ್ಷ​ಗ​ಳಲ್ಲಿ 2ನೇ ಬಾರಿ ಭರ್ತಿ​ಯಾ​ದಂತಾ​ಗಿ​ದೆ.

ಕೆಆ​ರ್‌​ಎ​ಸ್‌ಗೆ 2 ಅಡಿ ನೀರು: 

ನಾಡಿನ ಪ್ರಮುಖ ಜಲಾ​ಶ​ಯ​ಗ​ಳ​ಲ್ಲೊಂದಾದ ಕೆಆ​ರ್‌​ಎ​ಸ್‌ಗೆ ಬುಧ​ವಾರ ರಾತ್ರಿ​ಯಿಂದೀ​ಚೆ​ಗೆ 2 ಅಡಿಗಳಷ್ಟುನೀರು ಹರಿದುಬಂದಿದೆ. ಅಣೆಕಟ್ಟೆಗೆ 16 ಸಾವಿರ ಕ್ಯುಸೆಕ್‌ ನೀರು ಒಳ​ಹ​ರಿ​ವಿದ್ದು, ಬೇಸ​ಗೆ​ಯಲ್ಲಿ ಇಷ್ಟೊಂದು ಪ್ರಮಾ​ಣ​ದಲ್ಲಿ ನೀರು ಹರಿದು ಬರು​ತ್ತಿ​ರು​ವು​ದು ಇದೇ ಮೊದ​ಲು. ಕೆಆರ್‌ಎಸ್‌ ಡ್ಯಾಂನ ಗರಿಷ್ಠ ಮಟ್ಟ124.80 ಅಡಿಗಳಾಗಿದ್ದು, ಸದ್ಯ 102.30 ಅಡಿಗಳಷ್ಟು ನೀರು ಸಂಗ್ರಹವಿದೆ. ಅದೇ ರೀತಿ ತುಮ​ಕೂರು ಜಿಲ್ಲೆಯ ಕುಣಿ​ಗಲ್‌ ತಾಲೂ​ಕಿನ ಮಾರ್ಕೋನಹಳ್ಳಿ ಜಲಾಶಯ ಕೋಡಿ ಬಿದ್ದಿದ್ದು, ರೈತ​ರ ಮೊಗ​ದಲ್ಲಿ ಮಂದ​ಹಾಸ ಮೂಡಿ​ಸಿ​ದೆ.

1.ಚನ್ನಪಟ್ಟಣದ ಇಗ್ಗಲೂರು ಬ್ಯಾರೇಜ್‌
2.ಚನ್ನಪಟ್ಟಣದ ಕಣ್ವ ಡ್ಯಾಂ
3.ಕನಕಪುರದ ಹಾರೋಬೆಲೆ ಜಲಾಶಯ
4.ಮಾಗಡಿಯ ಮಂಚನಬೆಲೆ ಜಲಾಶಯ
 

Follow Us:
Download App:
  • android
  • ios