ವರದಿ :  ಕೃಷ್ಣ ಎನ್‌. ಲಮಾಣಿ

 ಹೊಸಪೇಟೆ (ಮಾ.15):  ಹನುಮನ ಜನ್ಮಸ್ಥಳ ಅಂಜನಾದ್ರಿ ಸೇರಿದಂತೆ ಕಿಷ್ಕಿಂಧೆಯ ಮಹತ್ವ, ಚರಿತ್ರೆಗಳ ಬಗ್ಗೆ ಪ್ರಚುರಪಡಿಸುವ ಸಲುವಾಗಿ ಶ್ರೀ ಹನುಮದ್‌ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ವತಿಯಿಂದ ದೇಶಾದ್ಯಂತ ಹನುಮದ್‌ ರಥಯಾತ್ರೆ ನಡೆಯಲಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕಾಶಿ ಎಂದೇ ಖ್ಯಾತರಾಗಿರುವ ಹಂಪಿಯಿಂದ ಶ್ರೀರಾಮಚಂದ್ರ ಪಾದುಕೆಯುಳ್ಳ ಶ್ರೀ ಹನುಮದ್‌ ರಥಯಾತ್ರೆ ಇಂದಿನಿಂದ  ಆರಂಭವಾಗಿ  12 ವರ್ಷಗಳ ಬಳಿಕ ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳವನ್ನು ತಲುಪಿ ಸಮಾಪ್ತಿಗೊಳ್ಳಲಿದೆ.

ಆಂಜನೇಯ ಜನ್ಮ ಪಡೆದ ಎನ್ನಲಾದ ಕಿಷ್ಕಿಂದೆಯ ನಾಡಿನಿಂದ ಇಡೀ ರಾಷ್ಟ್ರಕ್ಕೆ ಹನುಮನ ಜನ್ಮಸ್ಥಳದ ಬಗ್ಗೆ ಪ್ರಚುರಪಡಿಸಲು ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ನೇತೃತ್ವದ ಶ್ರೀಹನುಮದ್‌ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ .40 ಲಕ್ಷ ವೆಚ್ಚದಲ್ಲಿ ವಿಶೇಷ ರಥ ನಿರ್ಮಿಸಲಾಗಿದೆ. ಈ ರಥದಲ್ಲಿ ಅಯೋಧ್ಯೆಯಿಂದ ತರಲಾಗಿರುವ ಶ್ರೀರಾಮನ ಪವಿತ್ರ ಪಾದುಕೆ ಇಟ್ಟು ಪೂಜಿಸಲಾಗುತ್ತಿದೆ. ಒಟ್ಟು 3 ಪಾದುಕೆಗಳನ್ನು ಅಯೋಧ್ಯೆಯಿಂದ ತರಲಾಗಿದ್ದು, ಒಂದು ಪಾದುಕೆ ಹನುಮದ್‌ ಟ್ರಸ್ಟ್‌ ಕಚೇರಿಯಲ್ಲಿಟ್ಟಿದ್ದರೆ, ಇನ್ನೊಂದು ಆನೆಗೊಂದಿಯ ಹನುಮ ದೇಗುಲದಲ್ಲಿಟ್ಟು ಪೂಜಿಸಲಾಗುತ್ತಿದೆ.

ಹಂಪಿಯಿಂದ ಆರಂಭ:

ರಥಯಾತ್ರೆಯ ದಾರಿಯುದ್ದಕ್ಕೂ ರಾಮನ ಮಹಿಮೆ, ಹನುಮ ಭಕ್ತಿ ಸಾರಲಾಗುತ್ತದೆ. ರಥದಲ್ಲಿ ರಾಮ, ಲಕ್ಷ್ಮಣ, ಹನುಮ, ವಾಲಿ-ಸುಗ್ರೀವ, ಶಿವ ಮುಂತಾದ ದೇವರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ರಾತ್ರಿ ಸಮಯದಲ್ಲಿ ದೀಪಾಲಂಕಾರದಿಂದ ರಥ ಕಂಗೊಳಿಸಲಿದೆ. ಹಂಪಿಯಿಂದ ಹೊರಡಲಿರುವ ಹನುಮದ್‌ ರಥಯಾತ್ರೆ, ಕಮಲಾಪುರ ಮಾರ್ಗವಾಗಿ ಅಂಜನಾದ್ರಿ ತಲುಪಲಿದೆ. ಬಳಿಕ ಅಲ್ಲಿಂದ ಒಂದು ವರ್ಷದ ವರೆಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಈ ಸಮಯದಲ್ಲಿ ರಾಮಭಜನೆ, ಕೀರ್ತನೆ, ವಿಶೇಷ ಪೂಜೆಯೊಂದಿಗೆ ಭಕ್ತರು ರಾಮನ, ಹನುಮನ ಮಹಿಮೆ ಸಾರಲಿದ್ದಾರೆ ಎಂದು ಗೋವಿಂದಾನಂದ ಸರಸ್ವತಿ ಸ್ವಾಮೀಜಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಆಂಜನೇಯ ಸ್ವಾಮಿಯ ಈ ಮಂತ್ರವನ್ನು 108 ಬಾರಿ ಜಪಿಸಿದರೆ ಕಾರ್ಯಸಿದ್ಧಿಯಾಗುವುದು ..

12 ವರ್ಷ ಪರ್ಯಟನೆ:  ರಾಜ್ಯದಲ್ಲಿ ಒಂದು ವರ್ಷ ಹನುಮದ್‌ ರಥಯಾತ್ರೆ ಪರ್ಯಟನೆ ಮಾಡಲಿದೆ. ಬಳಿಕ ತಮಿಳುನಾಡು, ಆಂಧ್ರಪ್ರದೇಶಗಳಲ್ಲೂ ತಲಾ ಒಂದು ವರ್ಷ ಮತ್ತು ಕೇರಳದಲ್ಲಿ ಆರು ತಿಂಗಳು ಸಂಚರಿಸಲಿದೆ. ಬಳಿಕ ಉತ್ತರ ಭಾರತ ಪ್ರವೇಶಿಸಲಿದ್ದು, ಅಯೋಧ್ಯೆಗೆ ತಲುಪುವ ಹೊತ್ತಿಗೆ ಆರು ವರ್ಷ ಕಳೆದಿರುತ್ತದೆ. ಬಳಿಕ ವಿವಿಧೆಡೆ ಸಂಚರಿಸುವ ಹನುಮದ್‌ ರಥಯಾತ್ರೆ ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳ ತಲುಪಲಿದೆ.

ಈ ಭವ್ಯ ರಥದ ಮೇಲೆ ಶ್ರೀ ಹನುಮಂತದೇವರ ಚಿತ್ರಗಳು, ಕಿಷ್ಕಿಂದೆಯ ಚರಿತ್ರೆ, ಅಂಜನಾದ್ರಿ ಪರ್ವತವನ್ನು ಬಿಡಿಸಲಾಗಿದೆ. ಹನುಮನ ಮಹಿಮೆ ಸಾರಲಾಗಿದೆ.

215 ಮೀ. ಎತ್ತರದ ಹನುಮಂತ ದೇವರ ವಿಗ್ರಹ, ಶ್ರೀ ರಾಮಾಯಣ ಕಿಷ್ಕಿಂದ ಗ್ರಾಮ ನಿರ್ಮಾಣದ ಹಿನ್ನೆಲೆಯಲ್ಲಿ 12 ವರ್ಷ ಇಡೀ ಭಾರತದಲ್ಲಿ ಸಂಚರಿಸಲಿದ್ದು, ಹರಿದ್ವಾರದ ಕುಂಭ ಮೇಳದಲ್ಲಿ ಸಮಾಪ್ತಿಯಾಗಲಿದೆ.

- ಗೋವಿಂದಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಹನುಮದ್‌ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌