Raichur: ನಾಳೆಯಿಂದ ತಿಂಥಿಣಿಯಲ್ಲಿ ಹಾಲುಮತ ಸಂಸ್ಕೃತಿ ವೈಭವ
- ನಾಳೆಯಿಂದ ತಿಂಥಿಣಿಯಲ್ಲಿ ಹಾಲುಮತ ಸಂಸ್ಕೃತಿ ವೈಭವ
- ರಾಯಚೂರು ಜಿಲ್ಲೆಯ ತಿಂಥಿಣಿಯಲ್ಲಿ 3 ದಿನ ಯಾರ‍್ಯಕ್ರಮ
- ಕುರುಬ ಸಮುದಾಯದ ಶ್ರೀಗಳು ಭಾಗಿ
ಬೆಂಗಳೂರು (ಜ.11) : ರಾಯಚೂರು ಜಿಲ್ಲೆಯ ತಿಂಥಿಣಿ ಬ್ರಿಜ್‌ನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಜ.12 ರಿಂದ 14 ರವರೆಗೆ 16 ನೇ ವರ್ಷದ ‘ಹಾಲುಮತ ಸಂಸ್ಕೃತಿ ವೈಭವ-2023’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ, ಶಿವಾನಂದಪುರಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಕನಕ ಜಯಂತ್ಯುತ್ಸವದಲ್ಲಿ ಹಾಲುಮತ ಸಮಾಜದ ಒಗ್ಗಟ್ಟು ಪ್ರದರ್ಶನ
ಜ.12 ರಂದು ಬೆಳಗ್ಗೆ 7 ಗಂಟೆಗೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಭಾರಿ ಅಧ್ಯಕ್ಷ ಸುಬ್ರಹ್ಮಣ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಹಾಲುಮತ ಕಲಾ ಪ್ರಕಾರಗಳ ಮತ್ತು ಕಲಾವಿದರ ಸಮಾವೇಶ ನಡೆಯಲಿದೆ. ನಿರಂಜನಾನಂದಪುರಿ ಸ್ವಾಮೀಜಿ ಸಮ್ಮುಖದಲ್ಲಿ ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದು ಮಾಜಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಂಸದ ಭಗವಂತರಾಯ ನಾಯಕ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾತ್ರಿ 8.30 ಕ್ಕೆ ‘ಸಿದ್ದಪುರುಷ ಗೂಳ್ಯದ ಗಾದಿಲಿಂಗ ತಾತ’ ನಾಟಕ ಪ್ರದರ್ಶನವಿದೆ ಎಂದು ತಿಳಿಸಿದರು.
ಜ.13 ರಂದು ಬೆಳಗ್ಗೆ 11.30 ಕ್ಕೆ ಕರ್ನಾಟಕ ಪ್ರದೇಶ ಯುವ ಮತ್ತು ಮಹಿಳಾ ಜಿಲ್ಲಾ ಘಟಕಗಳ ಅಧ್ಯಕ್ಷರ ಪದಗ್ರಹಣ ಸಮಾರಂಭ ಆಯೋಜಿಸಿದ್ದು, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟಿಸಲಿದ್ದಾರೆ. ಜ.14 ರಂದು ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಹಾಲುಮತ ಭಾಸ್ಕರ ಪ್ರಶಸ್ತಿ’ಯನ್ನು ಹುಲಿಜಂತಿಯ ಅಡಿವೆಪ್ಪ ಮಹಾರಾಯರು, ‘ಕನಕರತ್ನ ಪ್ರಶಸ್ತಿ’ಗೆ ಗದಗದ ಪ್ರೊ.ಸಿದ್ದಣ್ಣ ಜಕಬಾಳ ಮತ್ತು ‘ಸಿದ್ದಶ್ರೀ ಪ್ರಶಸ್ತಿ’ಯನ್ನು ರಾಯಚೂರಿನ ಚಿನ್ನಮ್ಮ ಅವರಿಗೆ ಪ್ರದಾನ ಮಾಡಲಾಗುವುದು’ ಎಂದು ವಿವರಿಸಿದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ವೆಂಕಟೇಶಮೂರ್ತಿ, ಸಂಚಾಲಕ ಸಾಂಬಸದಾಶಿವರೆಡ್ಡಿ ಮತ್ತಿತರರು ಹಾಜರಿದ್ದರು.
ಕುಲಶಾಸ್ತ್ರೀಯ ಅಧ್ಯಯನದ ವರದಿ ಅಂಗೀಕರಿಸಲು ಆಗ್ರಹ
ಹಾಲುಮತ ಅಕಾಡೆಮಿ ಸ್ಥಾಪನೆಗೆ ಆಗ್ರಹ
ಜಾನಪದ ಅಕಾಡೆಮಿ, ನಾಟಕ ಅಕಾಡೆಮಿ ಮೂಲಕ ಸರ್ಕಾರ ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಡೊಳ್ಳು ಕುಣಿತ, ಗೊರವರ ಕುಣಿತ, ಪೂಜಾ ಕುಣಿತ, ಕರಡಿ ಕುಣಿತದಂತಹ ಹಲವಾರು ನೃತ್ಯ ಪ್ರಕಾರಗಳು ಹಾಲುಮತ ಧರ್ಮದಲ್ಲಿ ಬೆಸೆದುಕೊಂಡಿವೆ. ರಾಜ್ಯ ಸರ್ಕಾರ ಇವುಗಳನ್ನು ಕಡೆಗಣಿಸಿದ್ದು ಕೂಡಲೇ ಪ್ರತ್ಯೇಕ ಅಕಾಡೆಮಿ ಸ್ಥಾಪಿಸಬೇಕು ಎಂದು ಮಾಜಿ ಸಚಿವ ಎಚ್.ಎಂ. ರೇವಣ್ಣ ಒತ್ತಾಯಿಸಿದರು.