ಮೈಸೂರು (ಅ.22):  ಪಕ್ಷಾಂತರದಿಂದಾಗಿ ಕಳೆದ ಸಮ್ಮಿಶ್ರ ಸರ್ಕಾರ ಪತನಗೊಂಡಿಲ್ಲ. ತಮ್ಮ ಪಕ್ಷದ ನಾಯಕರ ವಿರುದ್ಧ ಶಾಸಕರು ದಂಗೆ ಎದ್ದಿದ್ದೆ ಇದಕ್ಕೆ ಕಾರಣ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಅಭಿಪ್ರಾಯಪಟ್ಟರು.

ತನುಮನು ಪ್ರಕಾಶನ ಹಾಗೂ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಕರ್ತ ಐತಿಚಂಡ ರಮೇಶ್‌ ಉತ್ತಪ್ಪ ಅವರು ಮಂಡ್ಯ ಲೋಕಸಭಾ ಚುನಾವಣೆ ಕುರಿತು ಮತ ಭಿಕ್ಷೆ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಳೆದ ಸಮ್ಮಿಶ್ರ ಸರ್ಕಾರ ಪತನಗೊಂಡಿದ್ದು ಏಕೆ ಎಂಬ ಬಗ್ಗೆಯೂ ಬರೆಯಬೇಕು. ಈ ಕುರಿತು ಸೂಕ್ತ ವಿಶ್ಲೇಷಣೆ ನೀಡುವುದಕ್ಕಾಗಿಯೇ ದಿ ಬಾಂಬೆ ಡೇಸ್‌ ಪುಸ್ತಕ ಬರೆಯುತ್ತಿದ್ದೇನೆ. ನನಗೆ ಸಾಹಿತ್ಯ ಕೋಟಾದಡಿ ವಿಧಾನ ಪರಿಷತ್‌ ಸ್ಥಾನ ನೀಡಿರುವುದಕ್ಕೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಹಾಕಲಾಗಿದೆ. ನಾನು ಕಾಗಕ್ಕ, ಗೂಬಕ್ಕನ ಕಥೆ ಬರೆದಿಲ್ಲ. ರಾಜಕೀಯದ ಹುಟ್ಟು ಸೇರಿದಂತೆ ಗಹನ ವಿಚಾರ ಸಾಹಿತ್ಯ ರೂಪಕ್ಕೆ ಇಳಿಸಿರುವುದು ಸಾಹಿತ್ಯ ರಚನೆಯಲ್ಲವೇ ಎಂದು ಅವರು ಪ್ರಶ್ನಿಸಿದರು.

'ಯತ್ನಾಳ್‌ ತಿರುಕನ ಕನಸು ಕಾಣಬೇಡಿ, ಸವಾಲ್‌ ಹಾಕ್ತೇನೆ, ನೀವು ಸಿಎಂ ಆಗೋದಿಲ್ಲ'

ಪ್ರಜಾಪ್ರಭುತ್ವದ ಉಸಿರಾದ ರಾಜಕೀಯ ಮಲಿನವಾಗದಂತೆ ನೋಡಿಕೊಳ್ಳಬೇಕಾದರೆ ರಾಜಕೀಯದ ಕುರಿತು ಹೆಚ್ಚು ಸಾಹಿತ್ಯ ರಚನೆಯಾಗಬೇಕು. ಶಿಶು ಸಾಹಿತ್ಯ, ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಶರಣ ಸಾಹಿತ್ಯವಿದೆ. ಅಂತೆಯೇ ರಾಜಕೀಯ ಸಾಹಿತ್ಯ ಏಕಿಲ್ಲ? ರಾಜಕೀಯ ವ್ಯವಸ್ಥೆಯಿಂದಲೇ ಅನುದಾನ ಪಡೆದು ಆಯೋಜಿಸುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕೂಡ ಒಂದು ಗೋಷ್ಠಿಯಾಗಿ ರಾಜಕೀಯ ವಿಚಾರ ಪ್ರಸ್ತಾಪಿಸುವುದಿಲ್ಲ. ಅಲ್ಲದೆ ಸಮಾಜದಲ್ಲಿ ಈ ರೀತಿ ಹಾಸುಹೊಕ್ಕಾದ ರಾಜಕೀಯ ವಿಚಾರದ ಬಗ್ಗೆ ಸಾಹಿತ್ಯ ರಚನೆಗೆ ವೇದಿಕೆಯಾಗಿ ರಾಜಕೀಯ ಅಕಾಡೆಮಿ ಸ್ಥಾಪಿತವಾಗಬೇಕು. ಇತರೆ ಸಾಹಿತ್ಯ ಪ್ರಕಾರದಂತೆಯೇ ರಾಜಕೀಯದ ಕುರಿತೂ ಸಾಹಿತ್ಯ ರಚನೆಯಾಗಬೇಕು. ಮಂಡ್ಯ ಲೋಕಸಭಾ ಚುನಾವಣೆಯು ಸತ್ತುಹೋದ ಅಂಬರೀಶ್‌ ಅವರನ್ನು ಸಶಕ್ತನನ್ನಾಗಿಸಿತು ಎಂದರು.

ಸುಮಲತಾ ಅವರ ಗೆಲುವಿಗೆ ರಾಜಕಾರಣಿಗಳು ಆಡಿದ ಮಾತೇ ಕಾರಣವಾಯಿತು. 1977ರಲ್ಲಿ ಕಾಂಗ್ರೆಸ್‌ ಪತನಕ್ಕೆ ಕಾರಣವಾದ ತುರ್ತು ಪರಿಸ್ಥಿತಿ ಹಾಗೂ ಚಿಕ್ಕಮಗಳೂರಿನಲ್ಲಿ ನಡೆದ ವೀರೇಂದ್ರಪಾಟೀಲ್‌ ಮತ್ತು ಇಂದಿರಾಗಾಂಧಿ ನಡುವಿನ ಚುನಾವಣೆ ವಿಚಾರವೂ ದಾಖಲಾಗಬೇಕು ಎಂದರು.

ಮೈಸೂರು ವಿವಿ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ನಿರಂಜನ ವಾನಳ್ಳಿ ಪುಸ್ತಕ ಕುರಿತು ಮಾತನಾಡಿದರು. ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಸಿ.ಕೆ. ಮಹೇಂದ್ರ, ತನು ಮನು ಪ್ರಕಾಶನ ಮಾಲೀಕ ಮಾನಸ ಇದ್ದರು.