Asianet Suvarna News Asianet Suvarna News

ಇಬ್ಬರು ಬಿಜೆಪಿ ಪ್ರಭಾವಿಗಳು ಜೆಡಿಎಸ್ ತೊರೆಯುವಂತೆ ಹಣ ಕೊಡಲು ಬಂದಿದ್ದರು : ಸ್ಫೋಟಕ ಮಾಹಿತಿ

ಸಂಸದ ವಿ. ಶ್ರೀನಿವಾಸಪ್ರಸಾದ್‌ ಅಲೆಮಾರಿಗಳ ರಾಜ ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌ ತಿರುಗೇಟು ನೀಡಿರು

H Vishwanath Slams Shrinivas Prasad snr
Author
First Published Dec 16, 2022, 5:49 AM IST

 ಮೈಸೂರು (ಡಿ. 16):  ಸಂಸದ ವಿ. ಶ್ರೀನಿವಾಸಪ್ರಸಾದ್‌ ಅಲೆಮಾರಿಗಳ ರಾಜ ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌ ತಿರುಗೇಟು ನೀಡಿರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಅಲೆಮಾರಿ ರಾಜಕಾರಣಿ ಎಂದು ಟೀಕಿಸಿರುವ ನೀವು ಎಷ್ಟುಪಕ್ಷಗಳನ್ನು ಬದಲಾಯಿಸಿದ್ದೀರಿ? ನೀವು ಒಂದೇ ಪಕ್ಷವನ್ನು ಎರಡೆರಡು ಬಾರಿ ಸೇರ್ಪಡೆಯಾಗಿದ್ದೀರಿ. ನೀವು ಅಲೆಮಾರಿಗಳ ರಾಜ ಎಂದು ಕುಟುಕಿದರು.

ನಾನು ಹಾಗೂ ಶ್ರೀನಿವಾಸಪ್ರಸಾದ್‌ ಹಳೆಯ ಸ್ನೇಹಿತರು, ಬಹು ಕಾಲದ ಒಡನಾಡಿಗಳು. ಅದೆಲ್ಲವನ್ನು ಮರೆತು ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರನ್ನು ನಾನು ಭೇಟಿ ಮಾಡಿದ್ದನ್ನೇ ಘೋರ ಅಪರಾಧ ಎಂಬಂತೆ ಶ್ರೀನಿವಾಸಪ್ರಸಾದ್‌ ಬಿಂಬಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಸರಿಯಲ್ಲ ಎಂದು ಅವರು ಕಿಡಿಕಾರಿದರು.

ಯಾರನ್ನು ಮೆಚ್ಚಿಸಲು?:

ಯಾರನ್ನು ಮೆಚ್ಚಿಸಲು ನನ್ನ ವಿರುದ್ಧ ಮುಗಿಬಿದ್ದಿದ್ದೀರಿ? ಸಂಸತ್‌ ಸದಸ್ಯರಾಗಿರುವ ನೀವು ನಿಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಗಮನ ನೀಡುವ ಬದಲು ಏಕಾಏಕಿ ನನ್ನ ವಿರುದ್ಧ ಏಕೆ ತಿರುಗಿ ಬಿದ್ದಿದ್ದೀರಿ? ಸದ್ಯದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗ್ತಿದೆ, ಆ ವೇಳೆ ನಂಜನಗೂಡು ಕ್ಷೇತ್ರದ ಶಾಸಕರಾಗಿರುವ ನಿಮ್ಮ ಅಳಿಯನಿಗೆ ಅವಕಾಶ ಸಿಗಲೆಂದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿ. ನರಸೀಪುರ ಕ್ಷೇತ್ರದಲ್ಲಿ ನಿಮ್ಮ ಮಗಳಿಗೆ ಟಿಕೆಟ್‌ ಸಿಗಲೆಂದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ನಿಮ್ಮ ಮತ್ತೊಬ್ಬ ಅಳಿಯನಿಗೆ ಟಿಕೆಟ್‌ ಕೊಡಿಸುವ ಸಲುವಾಗಿ ನನ್ನನ್ನು ಈ ರೀತಿ ಟೀಕಿಸಿದ್ದೀರಾ ಎಂದು ಅವರು ಪ್ರಶ್ನಿಸಿದರು.

ಶ್ರೀನಿವಾಸಪ್ರಸಾದ್‌ ಅವರೇ, ನೀವು ಹುಟ್ಟಿಬೆಳೆದ ಅಶೋಕಪುರಂಗೆ ನಿಮ್ಮ ಕೊಡುಗೆಯಾದರೂ ಏನು? ಯಾರಿಗೋ ಕಲ್ಲು ಹೊಡೆದರೇ ಅದು ಮತ್ತೆ ನಿಮಗೇ ಹೊಡೆಯತ್ತದೇ ಎಂಬುದನ್ನು ಮರೆಯಬೇಡಿ ಎಂದು ಅವರು ಕುಟುಕಿದರು.

ಕದ್ದುಮುಚ್ಚಿ ಭೇಟಿಯಾಗಿಲ್ಲ:

ನಾನು ಯಾವುದೇ ಕಾಂಗ್ರೆಸ್‌ ನಾಯಕರನ್ನು ಕದ್ದು ಮುಚ್ಚಿ ಭೇಟಿ ಮಾಡಿಲ್ಲ. ಎಲ್ಲಾ ಕಾಂಗ್ರೆಸ್‌ ನಾಯಕರನ್ನು ಬಹಿರಂಗವಾಗಿಯೇ ಭೇಟಿ ಮಾಡಿದ್ದೇನೆ. ಎಲ್ಲಾ ಕಾಂಗ್ರೆಸ್‌ ನಾಯಕರನ್ನು ಸೌಜನ್ಯಯುತವಾಗಿ ಭೇಟಿ ಮಾಡಿದ್ದೇನೆ. ನಾನು ಎಂದಾದರೂ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರುತ್ತೇನೆಂದು ಹೇಳಿದ್ದೀನಾ? ಎಂದು ಅವರು ಪ್ರಶ್ನಿಸಿದರು.

ಜೆಡಿಎಸ್‌ನಲ್ಲಿದ್ದ ನನ್ನನ್ನು ಬಿಜೆಪಿ ಹೆಬ್ಬಾಗಿಲಿಗೆ ಕರೆ ತಂದು ಕಡಿದವರು ಯಾರು? ನೀವೇ ಅಲ್ಲವೆ? ಮರೆತು ಬಿಟ್ಟಿರಾ ಶ್ರೀನಿವಾಸಪ್ರಸಾದ್‌ ಅವರೇ?. ಸ್ನೇಹಕ್ಕಾಗಿ ನನ್ನ ರಾಜಕೀಯ ಜೀವನವನ್ನು ಹಾಳು ಮಾಡಿದವರು ಯಾರು? ನನ್ನದು ಝಂಡಾ ಬದಲಾಗಿದೇ ಹೊರತು ಅಜೆಂಡಾ ಬದಲಾಗಿಲ್ಲ. ಅದು ನಿರಂತರ. ಆದರೆ, ನಿಮಗೂ ನೈತಿಕತೆ ಇದೆ. ಅದನ್ನು ಯಾಕೆ ಬಲಿ ಕೊಡುತ್ತಿದ್ದೀರಾ? ನಾನು ಅವಕಾಶವಾದಿ ರಾಜಕಾರಣಿ ಅಲ್ಲ. ಆದರೆ, ನೀವು ಎಷ್ಟೋ ಸಲ ಅವಕಾಶವಾದಿ ರಾಜಕಾರಣಿ ಆಗಿದ್ದೀರಿ ಎಂದು ಆರೋಪಿಸಿದರು.

ನನ್ನನ್ನು ಬಿಜೆಪಿಗೆ ಸೇರಲು ಮಧ್ಯಸ್ಥಿಕೆ ವಹಿಸಿದವರು ಇದೇ ಶ್ರೀನಿವಾಸಪ್ರಸಾದ್‌. ಆದರೆ, ನಾನು ಬಿಜೆಪಿ ಸೇರ್ಪಡೆಯಾದ ಬಳಿಕ ಯಡಿಯೂರಪ್ಪ ಆಗಲಿ, ಶ್ರೀನಿವಾಸಪ್ರಸಾದ್‌ ಸೇರಿದಂತೆ ಯಾವೊಬ್ಬ ಬಿಜೆಪಿ ನಾಯಕರು ನನ್ನ ನೆರವಿಗೆ ಬರಲಿಲ್ಲ. ನಾನು ಉಪಚುನಾವಣೆಯಲ್ಲಿ ಸೋತ ಬಳಿಕ ಎಂಎಲ್ಸಿ ಮಾಡಲು ನೆರವಾಗಿದ್ದು ಆರ್‌ಎಸ್‌ಎಸ್‌ ಮುಖಂಡ ಮುಕುಂದ ಅವರು. ಅವರಿಂದ ನಾನು ಎಂಎಲ್ಸಿ ಆದೆ ಎಂದು ಹೇಳಿದರು.

ನಾನು ಈಗಲೂ ಬಿಜೆಪಿಯಲ್ಲೇ ಇದ್ದೇನೆ. ಈಗಂತೂ ಯಾವ ಚುನಾವಣೆಯ ಯೋಚನೆ ಇಲ್ಲ. ಆದರೆ, ಚುನಾವಣೆ ಕಾಲಕ್ಕೆ ಏನಾಗುತ್ತದೇ ನೋಡೋಣ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

-- ಹಣ ಕೊಡಲು ಬಂದಿದ್ದರು- ಎಚ್‌. ವಿಶ್ವನಾಥ್‌ ಆರೋಪ​​--

ಬಿ.ಎಸ್‌. ಯಡಿಯೂರಪ್ಪ, ಅವರ ಮಗ ಬಿ.ವೈ. ವಿಜಯೇಂದ್ರ ಹಾಗೂ ಶ್ರೀನಿವಾಸಪ್ರಸಾದ್‌ ಅವರು ನನಗೆ ಹಣ ಕೊಡಲು ಬಂದಿದ್ದರು. ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಲು ಹಣದ ಆಮಿಷ ಒಡ್ಡಿದ್ದರು ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಆರೋಪಿಸಿದರು. ಆದರೆ, ಎಷ್ಟುಹಣ ಕೊಡಲು ಬಂದಿದ್ದರು? ನೀವು ಹಣ ಪಡೆದುಕೊಂಡಿರಾ ಎಂಬ ಪ್ರಶ್ನೆಗೆ ಎಚ್‌. ವಿಶ್ವನಾಥ್‌ ಅವರು ಸೂಕ್ತ ಉತ್ತರ ನೀಡಿಲ್ಲ. ಬದಲಿಗೆ ಈ ಬಗ್ಗೆ ಬಾಂಬೆ ಡೈರೀಸ್‌ ಪುಸ್ತಕ ನೋಡಿ. ಬಾಂಬೆ ಡೈರೀಸ್‌ನ ಮೊದಲ ಅಧ್ಯಾಯದಲ್ಲೇ ಈ ವಿಚಾರವಿದೆ ಎಂದರು. ಆದರೆ, ಬಾಂಬೆ ಡೈರೀಸ್‌ ಯಾವಾಗ ಬಿಡುಗಡೆ ಮಾಡುತ್ತೀರಾ ಎಂಬ ಪ್ರಶ್ನೆಗೂ ಸರಿಯಾದ ಉತ್ತರ ನೀಡಲಿಲ್ಲ.

Follow Us:
Download App:
  • android
  • ios