ಮೈಸೂರು (ಅ.06) : ನೀವೇನು ‘ಜಂಬೂ’ ಸವಾರಿ ಮಾಡುತ್ತಿದ್ದೀರೋ? ಇಲ್ಲ ‘ಬಂಬೂ’ ಸವಾರಿ ಮಾಡಲು ಹೊರಟಿದ್ದೀರಾ ಎಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರು ಮೈಸೂರು ಜಿಲ್ಲಾಡಳಿತವನ್ನು ಪ್ರಶ್ನಿಸಿದರು.

ದಸರಾ ಜಂಬೂ ಸವಾರಿಯಲ್ಲಿ 2 ಸಾವಿರ ಜನಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಿರುವ ಜಿಲ್ಲಾಡಳಿತದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, 2 ಸಾವಿರ ಜನಕ್ಕೆ ದಸರಾ ಮಾಡುತ್ತೇವೆ ಎಂದರೆ 10 ಸಾವಿರ ಜನ ಸೇರುತ್ತಾರೆ. ಇದರಿಂದಾಗಿ ಕೊರೋನಾದ ಮಹಾಸ್ಫೋಟವಾಗುತ್ತೆ. ಅದನ್ನು ತಡೆಯುವ ಶಕ್ತಿ ಜಿಲಾಡಳಿತಕ್ಕೆ ಇದೆಯಾ? ಈಗಲೇ ಆಸ್ಪತ್ರೆಯಲ್ಲಿ ಹಾಸಿಗೆಯ ಸಮಸ್ಯೆ ಇದೆ. ಇನ್ನು ಕೊರೋನಾ ಮಹಸ್ಫೋಟವಾದರೆ ಹೊಣೆ ಯಾರು ಎಂದು ಕಿಡಿಕಾರಿದರು.

'ದಸರೆಗೆ ಹೋಗಬೇಕಂದ್ರೆ 5 ದಿನ ಮುಂಚೆ ಕೋವಿಡ್ ಟೆಸ್ಟ್ ಅಗತ್ಯ'

ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಥಳೀಯವಾಗಿ ಮಾಹಿತಿ ಇಲ್ಲ. ದಸರಾದ ವಾಸ್ತವ ಸ್ಥಿತಿ ತಿಳಿಸಬೇಕು. ಒಂದು ಕೋತಿ ಕುಣಿದರೂ ಸಾವಿರ ಜನ ಸೇರುತ್ತಾರೆ. ಹೀಗಿರುವಾಗ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿದರೆ ಪರಿಸ್ಥಿತಿ ಏನಾಗಬೇಡ. ಆದ್ದರಿಂದ ಚಾಮುಂಡಿಬೆಟ್ಟದಲ್ಲಿ ಚಾಮುಂಡಿ ಪೂಜೆ ನಡೆಯಲಿ. ಜಂಬೂಸವಾರಿ ದಿನ ಅಂಬಾರಿಗೆ ಕೇವಲ ಪುಷ್ಪಾರ್ಚನೆ ಮಾಡಲಿ ಎಂದು ಸಲಹೆ ನೀಡಿದರು.