ಬೆಂಗಳೂರು(ಮೇ.16):  ನನ್ನ ಹುಟ್ಟು ಹಬ್ಬದ ದಿನ ಮನೆ ಬಳಿ ಬರಬೇಡಿ, ನೀವು ಇದ್ದಲ್ಲಿಯೇ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿ ಎಂದು ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್‌ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಮನವಿ ಮಾಡಿಕೊಂಡಿದ್ದಾರೆ. 

ಮೇ. 18 ರಂದು ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಇಡೀ ಜಗತ್ತು ಕೊರೋನಾ ಮಹಾಮಾರಿ ಉಪಟಳದಿಂದ ಕಳೆದ ಮೂರು ತಿಂಗಳಿಂದ ಗರಬಡಿದು ಕುಳಿತಿದೆ. ಇದಕ್ಕೆ ನಮ್ಮ ದೇಶವೂ, ನಮ್ಮ ರಾಜ್ಯವೂ ಹೊರತಾಗಿಲ್ಲ. ಈ ರೋಗವು ಸಾಂಕ್ರಾಮಿಕವಾದುದರಿಂದಲೂ ಮತ್ತು ಇದಕ್ಕೆ ಮದ್ದು ಶೋಧಿಸಲ್ಪಡದೇ ಇರುವುದರಿಂದಲೂ ಅನಿವಾರ್ಯವಾಗಿ ನಾವು ಲಾಕ್‌ಡೌನ್‌ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದೆ.ಹಾಗಾಗಿ ದೇವಸ್ಥಾನಗಳಿಂದ ಹಿಡಿದು ಚಲನಚಿತ್ರ ಮಂದಿರದವರೆಗೆ, ಮದುವೆ ಸಮಾರಂಭಗಳಿಂದ ಹಿಡಿದು ಸಾವಿನ ಅಂತ್ಯಕ್ರಿಯೆವರೆಗೂ ನಿರ್ಬಂಧಗಳನ್ನ ಹೇರಲಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಗುಣಗಾನ ಮಾಡಿದ ದೇವೇಗೌಡ!

ಈಗಾಗಲೇ ರಾಜ್ಯ ಹಾಗೂ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಜನರು ಹೆಚ್ಚು ಸಂಖ್ಯೆಯಲ್ಲಿ ಸೇರುವುದು ಬೇಡ. ಕೊರೋನಾದಿಂದ ರಾಜ್ಯ ದೇಶ, ಕಂಗೆಟ್ಟಿದೆ. ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟುವುದೋ ಎಂಬ ಆತಂಕ ನನಗೆ ಇದೆ. ಜನರು ಸೇರಿ ಇನ್ನಷ್ಟು ತೊಂದರೆಗೀಡಾಗುವುದು ಬೇಡ. ನೀವು ಇರುವಲ್ಲಿಂದಲೇ ನನ್ನ ಹುಟ್ಟುಹಬ್ಬಕ್ಕೆ ಶುಭಹಾರೈಸಿ ಎಂದು ದೇವೇಗೌಡ ಅವರು ಮನವಿ ಮಾಡಿಕೊಂಡಿದ್ದಾರೆ.