ಮಾಲೂರು (ಮಾ.19):  ಹಳೇ ವೈಷ್ಯಮದ ಹಿನ್ನೆಲೆಯಲ್ಲಿ ಇಲ್ಲಿನ ಜಿಮ್‌ ಒಂದರ ತರಬೇತುದಾರನನ್ನು ಹಾಡುಹಗಲೇ ರಸ್ತೆಯಲ್ಲಿ ಮಚ್ಚು-ಲಾಂಗ್‌ ಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಪಟ್ಟಣದ ಕೋಲಾರ ರಸ್ತೆಯ ಗಂಗಾಪುರ ಬಳಿ ಗುರುವಾರ ನಡೆದಿದೆ.

ಕೊಲೆ ಪ್ರಕರಣದ ಆರೋಪಿ:  ಮೃತನನ್ನು ಇಲ್ಲಿಯ ಎಓನ್‌-ಫೀಟ್ನೆಸ್‌ ಜಿಮ್‌ ತರಬೇತುದಾರ ಅರಳೇರಿ ಗ್ರಾಮದ ಗಿರೀಶ್‌(26)ಎಂದು ಗುರುತಿಸಲಾಗಿದೆ. ಎರಡು ವರ್ಷದ ಹಿಂದೆ ತಾಲೂಕಿನ ವರದಾಪುರದಲ್ಲಿ ಕ್ರಿಕೆಟ್‌ ಪಂದ್ಯಾವಳಿ ವೇಳೆ ನಡೆದ ಗಲಾಟೆಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಈತನ ಹೆಸರೂ ಇತ್ತು ಎನ್ನಲಾಗಿದೆ.

ಹಿಂದಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರದ ನ್ಯಾಯಾಲಯಕ್ಕೆ ಹಾಜರಾಗಿದ್ದ ಗಿರೀಶ್‌ ಬಳಿಕ ಮಾಲೂರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಸ್ನೇಹಿತ ಕಿರಣ್‌ ಎಂಬುವ ಜತೆ ಹಿಂತಿರುಗುತ್ತಿರುವಾಗ ಈ ದುರ್ಘನೆ ನಡೆದಿದೆ.

ಆಸ್ತಿಗಾಗಿ ಬೈಕ್‌ಗೆ ಕಾರು ಗುದ್ದಿಸಿ ತಂದೆಯನ್ನೇ ಕೊಂದ ಪಾಪಿ ಮಗ..! ...

ಕಣ್ಣಿಗೆ ಕಾರದಪುಡು ಎರಚಿ ಕೊಲೆ : ತಾಲೂಕಿನ ಗಂಗಾಪುರ ಬಳಿ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಗಿರೀಶನ ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚು-ಲಾಂಗ್‌ಗಳಿಂದ ಹಲ್ಲೆ ಮಾಡಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸ್ನೇಹಿತ ಕಿರಣ್‌ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಹೆಚ್ಚು ವಾಹನ ಸಂಚಾರ ಇರುವ ಕೋಲಾರ ರಸ್ತೆಯಲ್ಲೇ ಹಾಡುಹಗಲೇ ನಡೆದಿರುವ ಈ ಘಟನೆ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ.

ಘಟನೆಯ ಬಳಿಕ ಮಾಲೂರು ಠಾಣೆಗೆ ಆಗಮಿಸಿದ ಕಿರಣ್‌ ತನ್ನೆದುರೇ ನಡೆದ ಕೊಲೆ ಘಟನೆಯ ಬಗ್ಗೆ ದೂರು ನೀಡಿದ್ದಾನೆ. ಸುಮಾರು 5-6 ಮಂದಿಯ ಗುಂಪು ಈ ಕೃತ್ಯವೆಸಗಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಆರಂಭಿಸಿದ್ದಾರೆ.