ಬಿಎಂಟಿಸಿ ಸಿಬ್ಬಂದಿಗೆ ಗನ್ ಲೈಸೆನ್ಸ್ ಕೋರಿಕೆ: ಕಂಡಕ್ಟರ್ ಹಣದ ಬ್ಯಾಗ್‌ನಲ್ಲಿ ಬಂದೂಕು!
ಬಿಎಂಟಿಸಿ ಸಿಬ್ಬಂದಿಯ ಮೇಲೆ ಹಲ್ಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬಸ್ ಚಾಲಕರು ಮತ್ತು ನಿರ್ವಾಹಕರಿಗೆ ಸ್ವರಕ್ಷಣೆಗಾಗಿ ಗನ್ ಲೈಸೆನ್ಸ್ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕರ್ತವ್ಯ ನಿರ್ವಹಿಸುವಾಗ ತಮಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಅ.03): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ನ ಸಿಬ್ಬಂದಿಯ ಮೇಲೆ ಕಳೆದೆಡು ದಿನಗಳ ಹಿಂದೆ ಹೊರ ರಾಜ್ಯದ ವ್ಯಕ್ತಿಯೊಬ್ಬ ಸುಖಾ ಸುಮ್ಮನೇ ಚಾಕುವಿನಿಂದ ಚುಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಇದೀಗ ಬಸ್‌ನ ಕಂಡಕ್ಟರ್ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಇದರಿಂದಾಗಿ ಜೀವದ ಹಂಗು ತೊರೆದು ಬಿಎಂಟಿಸಿ ಬಸ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಜೀವ ರಕ್ಷಣೆಗಾಗಿ ಗನ್ ಲೈಸೆನ್ಸ್ ಕೊಡಬೇಕು ಎಂದು ಸರ್ಕಾರಕ್ಕೆ ಚಾಲಕ ಕಂ ನಿರ್ವಾಹ ಯೋಗೇಶ್ ಎನ್ನುವವರು ಪತ್ರ ಬರೆದಿದ್ದಾರೆ.
ಪ್ರತಿನಿತ್ಯ ಬೆಂಗಳೂರಿನಲ್ಲಿ ಭಾರೀ ವಾಹನ ದಟ್ಟಣೆ ಹಾಗೂ ಕಲುಷಿತ ಮಾಲಿನ್ಯದ ನಡುವೆ ಕರ್ತವ್ಯ ನಿರ್ವಹಿಸುತ್ತಾ ಈಗಾಗಲೇ ಬಿಎಂಟಿಸಿ ಬಸ್‌ನ ಚಾಲಕ ಮತ್ತು ನಿರ್ವಾಹಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಈ ನಡುವೆ ಡ್ರೈವರ್ ಮತ್ತು ಕಂಡಕ್ಟರ್ ಮೇಲೆ ಪ್ರಯಾಣಿಕರು ಸುಖಾ ಸುಮ್ಮನೆ ಕಾಲು ಕೆರೆದು ಜಗಳ ಮಾಡುವುದು ಹೆಚ್ಚಾಗುತ್ತಿದೆ. ಕೆಲವರು ಗುಂಪು ಕಟ್ಟಿಕೊಂಡು ಹಲ್ಲೆಯನ್ನೂ ಮಾಡುತ್ತಿದ್ದಾರೆ. ಜೊತೆಗೆ, ಸಂಸ್ಥೆಯ ಕನ್ನಡಿಗರ ನೌಕರರ ಮೇಲೆ ಅನ್ಯ ರಾಜ್ಯದ ಪ್ರಯಾಣಿಕರಿಂದ ಮಾರಣಾಂತಿಕ ಹಲ್ಲೆಯಾಗುತ್ತಿದೆ. ಹೀಗಾಗಿ, ಪ್ರತಿನಿತ್ಯ ಜೀವಕ್ಕೆ ರಕ್ಷಣೆ ಇಲ್ಲದೆ ಕುಟುಂಬದವರನ್ನು ಬಿಟ್ಟು ದಿನದ 24 ಗಂಟೆಗಳ ಕಾಲ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದೇವೆ. ಹೀಗಾಗಿ, ಬಿಎಂಟಿಸಿ ಬಸ್‌ನ ಎಲ್ಲ ಸಿಬ್ಬಂದಿಗೂ ಬಂದೂಕು ಇಟ್ಟುಕೊಳ್ಳಲು ಗನ್ ಲೈಸೆನ್ಸ್ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ: ಮಳೆಯಿಂದ ಟಿಕೆ ಹಳ್ಳಿ ಟ್ರಾನ್ಸ್‌ಫಾರ್ಮರ್ ಹಾನಿ
ಪತ್ರದಲ್ಲಿ ಏನಿದೆ?
ಈ ಮೇಲ್ಕಂಡ ವಿಷಯಕ್ಕೆ ಸಹಿ ಮಾಡಿರುವ ನಾನು ಶ್ರೀ ಯೋಗೇಶ್, ಚಾಲಕ-ಕಂ- ನಿರ್ವಾಹಕ, ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಪ್ರತಿ ದಿನ 24 ಗಂಟೆ ತಮ್ಮ ಜೀವದ ಹಂಗು ತೊರೆದು ಬೃಹತ್ ಬೆಂಗಳೂರು ಮಹಾನಗರದ ಸಂಚಾರಿ ದಟ್ಟಣೆಯಲ್ಲಿ ಹಾಗೂ ಕಲುಷಿತ ವಾಯುಮಾಲಿನ್ಯದಿಂದ ನಿರಂತರ ಕರ್ತವ್ಯ ನಿರ್ವಹಿಸುವ ಚಾಲಕ ಮತ್ತು ನಿರ್ವಾಹಕರು ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರುವುದಿಲ್ಲ. ಆದರೆ ಸಂಚಾರಿ ದಟ್ಟಣೆಯ ವಾಹನ ಸವಾರರ ಹಾಗೂ ಬಸ್ಸಿನ ಪ್ರಯಾಣಿಕರ ಜೊತೆಯಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ಗಲಾಟೆಯಾಗಿ ಅವರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗಿರುವುದು ಸರ್ವೆ ಸಮಾನ್ಯವಾಗಿದೆ. ಸಂಸ್ಥೆಯ ಕನ್ನಡಿಗರ ನೌಕರರ ಮೇಲೆ ಅನ್ಯ ರಾಜ್ಯದ ಪ್ರಯಾಣಿಕರಿಂದ ಮಾರಣಾಂತಿಕ ಹಲ್ಲೆಗೆ ಒಳಗಾಗುತ್ತಿದ್ದಾರೆ. ಉದಾಹಣೆಗೆ ದಿನಾಂಕ:01/10/2024 ರಂದು ಘಟಕ-13 ನಿರ್ವಾಹಕರಿಗೆ ಮಾರಣಾಂತಿಕ ಹಲ್ಲೆ ನೆಡೆದ ಘಟನೆಯೇ ಸಾಕ್ಷಿಯಾಗಿರುತ್ತದೆ. ಆದ್ದರಿಂದ ಇವರುಗಳ ಜೀವ ರಕ್ಷಣೆಗಾಗಿ ಗನ್ ಲೈಸನ್ಸ್ ಪಡೆಲು ಅನುಮತಿ ಕೊಡಿಸಬೇಕಾಗಿ ಸಮಸ್ತ ಸಾರಿಗೆ ಸಂಸ್ಥೆಯ ನೌಕರರ ಪರವಾಗಿ ತಮ್ಮಲ್ಲಿ ಮನವಿಮಾಡಿಕೊಳ್ಳುತ್ತೇನೆ.