ಗುಬ್ಬಿ: ಲೋಕಸಭಾ ಚುನಾವಣೆಗೆ ಅಗತ್ಯ ಸಿದ್ಧತೆ
ಲೋಕಸಭಾ ಚುನಾವಣೆ ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಗುಬ್ಬಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಜಂಬಗಿ ರೇಣುಕ ಪ್ರಸಾದ್ ದಿಲೀಪ್ ತಿಳಿಸಿದರು.
ಗುಬ್ಬಿ : ಲೋಕಸಭಾ ಚುನಾವಣೆ ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಗುಬ್ಬಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಜಂಬಗಿ ರೇಣುಕ ಪ್ರಸಾದ್ ದಿಲೀಪ್ ತಿಳಿಸಿದರು.
ಅವರು ಬುಧವಾರ ಆಡಳಿತ ಸೌಧದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗುಬ್ಬಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 1,82,322 ಮತದಾರರಿದ್ದು ಅವರಲ್ಲಿ 90,641 ಪುರುಷ ಹಾಗೂ 91,671 ಮಹಿಳಾ ಹಾಗೂ 10 ಇತರೆ ಮತದಾರರು ಇದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 199 ಮತಗಟ್ಟೆ ಸ್ಥಾಪಿಸಲಾಗಿದೆ. ಅವುಗಳಲ್ಲಿ 1 ವಲ್ನರಬಲ್ ಮತಗಟ್ಟೆ, 47 ಕ್ರಿಟಿಕಲ್ ಮತಗಟ್ಟೆಗಳು ಇವೆ ಎಂದು ಹೇಳಿದರು.
ಅಂಕಸಂದ್ರ, ಕುಂದರನಹಳ್ಳಿ ಹಾಗೂ ಕಲ್ಲೂರು ಕ್ರಾಸ್ ಗಳಲ್ಲಿ ಒಟ್ಟು 3 ತಪಾಸಣಾ ಕೇಂದ್ರ ತೆರೆದಿದ್ದು, ಅವುಗಳ ಉಸ್ತುವಾರಿಗಾಗಿ 3 ಎಸ್‌ಎಸ್‌ಟಿ, 3 ಎಫ್ಎಸ್‌ಟಿ, 1 ವಿವಿಟಿ, 1 ವಿಎಸ್‌ಟಿ, 1 ಅಕೌಂಟಿಂಗ್ ತಂಡ ರಚಿಸಲಾಗಿದೆ. ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಏಕಗವಾಕ್ಷಿ ಕೇಂದ್ರ ತೆರೆಯಲಾಗಿದೆ.
ಈಗಾಗಲೇ 238 ಕಂಟ್ರೋಲ್ ಯೂನಿಟ್ ಹಾಗೂ 238 ಬ್ಯಾಲೆಟ್ ಯೂನಿಟ್, 258 ವಿವಿ ಪ್ಯಾಟುಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳಿಂದ ಪಡೆದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭದ್ರತಾ ಕೊಠಡಿ ಸ್ಥಾಪಿಸಿ, ಪೊಲೀಸ್ ಬಂದೋಬಸ್ತಿನಲ್ಲಿ ನಿಗಾ ಇರಿಸಲಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಬಿ.ಆರತಿ ಮಾತನಾಡಿ, ಸಾರ್ವಜನಿಕರು ಮಾಹಿತಿ ಪಡೆಯಲು ಅನುಕೂಲವಾಗುವಂತೆ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. 08131- 222234 ಅಥವಾ ಚುನಾವಣಾ ಆಯೋಗದ ಸಹಾಯವಾಣಿ ಸಂಖ್ಯೆ 1950ಕ್ಕೆ ಕರೆಮಾಡುವ ಜೊತೆಗೆ ಸಿ- ವಿಜಲ್ ಆಪ್ ಹಾಗೂ ಎಲೆಕ್ಟ್ -1ಆಪ್ ಮೂಲಕ ಮಾಹಿತಿ ಹಾಗೂ ದೂರನ್ನು ಸಲ್ಲಿಸಬಹುದಾಗಿದೆ ಎಂದರು.