ಉಡುಪಿ(ಏ.12): ಮಲ್ಪೆಯ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ (ಮ್ಯಾಕ್ಟ್)ನ ಬಬಿತಾ ಅವರು ಮನೆಯ ದುಬಾರಿ ಸಾಕುನಾಯಿಗಳಂತೆ ಬೀದಿನಾಯಿಗಳಿಗೂ ಆಹಾರ - ನೀರು ಕೊಟ್ಟು, ಅವುಗಳಿಗೂ ಬದುಕುವ ಅವಕಾಶ ನೀಡಿ ಎಂದು ಈ ಹಿಂದೆ ಅನೇಕ ಬಾರಿ ಕೇಳಿಕೊಂಡಿದ್ದರೂ ಅದಕ್ಕೆ ಕೇವಲ ಹತ್ತಿಪ್ಪತ್ತು ಮಂದಿ ಮಾತ್ರ ಸ್ಪಂದಿಸಿದ್ದರು.

ಈಗ ಕೊರೋನಾದಿಂದ ಲಾಕ್ ಡೌನ್ ಆದ ಮೇಲೆ ಅವರು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಅದೇ ಮನವಿ ಮಾಡಿದ್ದರು. ಜನರಿಗೆ ಅದೇನನ್ನಿಸಿತೋ, ಈಗ ಉಡುಪಿಯ 200ಕ್ಕೂ ಅಧಿಕ ಮಂದಿ 2500ಕ್ಕೂ ಅಧಿಕ ಬೀದಿ ನಾಯಿಗಳಿಗೆ ಊಟವಿಕ್ಕುತ್ತಿದ್ದಾರೆ.

ಎರಡೇ ತಿಂಗಳಲ್ಲಿ ಸಿದ್ಧವಾಗಲಿದೆ ಕೊರೋನಾ ಆಸ್ಪತ್ರೆ..! ಟಾಟಾ ಗ್ರೂಪ್‌ನಿಂದ ಕೆಲಸ ಸ್ಟಾರ್ಟ್

ಅಧಿಕಾರಿಗಳ ಲೆಕ್ಕದ ಪ್ರಕಾರ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 5000ಕ್ಕೂ ಹೆಚ್ಚು ಬೀದಿನಾಯಿಗಳಿವೆ. ಅವುಗಳೆಲ್ಲವೂ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ನಗರದ ಹೊಟೇಲು ಗೂಡಂಗಡಿ, ಮಲ್ಪೆ ಮೀನುಗಾರಿಕಾ ಬಂದರು, ಮಾರುಕಟ್ಟೆಗಳಿಂದ ಹೊರಗೆ ಚೆಲ್ಲಲಾಗುವ  ಚೂರುಪಾರು ಆಹಾರ ಪದಾರ್ಥಗಳನ್ನೇ ಅವಲಂಭಿಸಿವೆ. ಆದರೇ ಏಕ್ ದಮ್ ಊರಿಗೂರೇ ಲಾಕ್ ಡೌನ್ ಆಗಿ ಹೊಟೇಲು, ಮಾರುಕಟ್ಟೆಗಳೆಲ್ಲವೂ ಮುಚ್ಚಿರುವಾಗ ಈ ಬೀದಿನಾಯಿಗಳು ಅಕ್ಷರಶಃ ತುತ್ತು ಆಹಾರಕ್ಕಾಗಿ ಬೀದಿಬೀದಿ ಅಲೆದಾಡಬೇಕಾಯಿತು. ಹತ್ತಾರು ನಾಯಿಗಳು ಉಡುಪಿಯ ನಿರ್ಜನ ರಸ್ತೆಯಲ್ಲಿ ಬಾಯಿತೆರೆದು ಜೊಲ್ಲು ಸುರಿಸುತ್ತಾ ತಿರುಗಾಡುವುದು ಹೆದರಿಕೆ ಹುಟ್ಟಿಸುವಂತಿತ್ತು.

ಈ ನಾಯಿ ಪಾಡಿನ ಬಗ್ಗೆ ಪೂರ್ಣ ಅರಿವಿರುವ, ಬೀದಿನಾಯಿಗಳ ಬಗ್ಗೆ ವಿಪರೀತ ಕಾಳಜಿ ಬೆಳಸಿಕೊಂಡಿರುವ, ಅವುಗಳ ಪರವಾಗಿ ಕಾನೂನು ಹೋರಾಟಕ್ಕೂ ಇಳಿದಿರುವ ಬಬಿತಾ ಮಧ್ವರಾಜ್ ಲಾಕ್ ಡೌನ್ ಮಧ್ಯೆಯೂ ಕೈಯಲ್ಲಿ ಅನ್ನದ ಪಾತ್ರೆ ಹಿಡಿದು ಬೀದಿಗಿಳಿದರು.

ಕೊರೋನಾ ವಿರುದ್ಧ ಹೋರಾಡಿ ಗೆದ್ದ 10 ತಿಂಗಳ ಕಂದಮ್ಮ, ಈಗ ಸಂಪೂರ್ಣ ಗುಣಮುಖ

ಇದೀಗ ಅವರಿಗೆ ಜಿಲ್ಲೆಯಾದ್ಯಂತದಿಂದ ಬರೋಬರಿ 220 ಮಂದಿ ಪ್ರಾಣಿದಯಾಳುಗಳು ಸಾಥ್ ನೀಡುತ್ತಿದ್ದಾರೆ, ತಮ್ಮೂರಿನ ಬೀದಿಗಳಲ್ಲಿ ಹೊಟ್ಟೆಬೆನ್ನಿಗಂಟಿಸಿ ಓಡಾಡುತ್ತಿದ್ದ ನಾಯಿಗಳಿಗೆ ಹೊಟ್ಟೆ ತುಂಬಾ ಅನ್ನ, ಬಿರ್ಯಾನಿ, ಬಿಸ್ಕೇಟು, ಪೆಡಿಗ್ರಿ, ರೆಡಿಫುಡ್, ನೀರು ಕೊಟ್ಟು ಸಾಕುತ್ತಿದ್ದಾರೆ. ಮೊದಲೆಲ್ಲಾ ಮೋರಿಯಲ್ಲಿಯೋ ಚರಂಡಿಯಲ್ಲಿಯೋ ಸಿಗುತಿದ್ದ ಚೂರುಪಾರು ಆಹಾರವನ್ನು ಹತ್ತಾರು ನಾಯಿಗಳು ಕಿತ್ತು ತಿನ್ನುತಿದ್ದವು. ಈಗ ದಿನದ ಮೂರು ಹೊತ್ತು ಹೊಟ್ಟೆ ತುಂಬಾ ತಿಂದು ಖುಷಿಯಿಂದ ಬಾಲ ಅಲ್ಲಾಡಿಸುತ್ತಿವೆ. ಲಾಕ್ ಡೌನ್ ನಂತರವೂ ಇದು ಮುಂದುವರಿಯಬೇಕು ಎನ್ನುತ್ತಾರೆ ಬಬಿತಾ ಮಧ್ವರಾಜ್.

ಹೊಟ್ಟೆಗಿಲ್ಲದ ನಾಯಿಗಳು ವ್ಯಗ್ರವಾಗುತ್ತವೆ

ಇದುವರೆಗೆ ಬೀದಿನಾಯಿಗಳು ತಮ್ಮ ಆಹಾರವನ್ನು ಹೇಗೋ ತಾವೇ ಹುಡುಕಿಕೊಳ್ಳುತ್ತಿದ್ದವು, ಈಗ ಟೋಟಲ್ ಲಾಕ್ ಡೌನ್ ಆಗಿರುವಾಗ ಅವು ಬದುಕುವುದಕ್ಕೆ ಮನುಷ್ಯನ ಮೇಲೆ ಅವಲಂಭಿಸಿವೆ. ನಾವು ಈಗ ಅವುಗಳಿಗೆ ಆಹಾರ ಹಾಕದಿದ್ರೆ, ಹಸಿವೆಯಿಂದ ಅವು ತುಂಬಾ ವ್ಯಗ್ರವಾಗುತ್ತವೆ, ಹತಾಶೆಯಿಂದ ತಮ್ಮತಮ್ಮಲ್ಲೇ ಕಚ್ಚಾಡುತ್ತವೆ, ಕೊನೆಗೆ ಹಸಿವೆಯಿಂದ ಹಕ್ಕಿ, ಬೆಕ್ಕು, ದನಗಳ ಮೇಲೆ, ಕೊನೆಗೆ ಮನುಷ್ಯನ ಮೇಲೂ ದಾಳಿ ಮಾಡುತ್ತವೆ. ಇದು ಅವುಗಳ ನೈಸರ್ಗಿಕ ಗುಣ. ಆದ್ದರಿಂದ ಅವುಗಳನ್ನು ನಿಯಂತ್ರಿಸುವುದಕ್ಕಾದರೂ ಅವುಗಳಿಗೆ ಈಗ ಆಹಾರ ನೀಡಲೇಬೇಕು ಎನ್ನುತ್ತಾರೆ ಮ್ಯಾಕ್ಟ್ ಸಂಚಾಲಕಿ ಬಬಿತಾ ಮಧ್ವರಾಜ್. (98457 20254)

-ಸುಭಾಶ್ಚಂದ್ರ ವಾಗ್ಳೆ