ಬ್ಯಾಡಗಿ: ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ
ಮಧ್ಯಾಹ್ನದ ಬಳಿಕ ಅಂಗಡಿ ಬಂದ್ ಮಾಡಿದ ವ್ಯಾಪಾರಸ್ಥರು| ರಸ್ತೆಗಿಳಿಯದೇ ಸಹಕರಿಸಿದ ಸಾರ್ವಜನಿಕರು| ತಾಲೂಕಾಡಳಿತದ ನಿರ್ಧಾರ ಲೆಕ್ಕಿಸದೆ ಕೆಲ ಮದ್ಯದಂಗಡಿಗಳು ಕಾರ‍್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪ|
ಬ್ಯಾಡಗಿ(ಜು.23): ತಾಲೂಕಿನಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕಾಡಳಿತ ಜಾರಿ ಮಾಡಿದ್ದ ಮಧ್ಯಾಹ್ನ 3 ಗಂಟೆಯ ಬಳಿಕ ಲಾಕ್‌ಡೌನ್ ಆದೇಶಕ್ಕೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ಪ್ರಕರಣ ಹೆಚ್ಚಾಗುತ್ತ ಸಾಗಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಗ್ರೀನ್‌ಜೋನ್‌ಲ್ಲಿದ್ದ ತಾಲೂಕಿನಲ್ಲಿ ಮೂವತ್ತಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಟ್ರಾವೆಲ್ ಹಿಸ್ಟರಿಯಿಲ್ಲದವರಿಗೂ ಸೋಂಕು ದೃಢಪಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಿಸಿದ ಹಿನ್ನೆಲೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತಹಸೀಲ್ದಾರ್ ಶರಣಮ್ಮ ಲಾಕ್ಡೌನ್ನಂತಹ ಕಠಿಣ ನಿರ್ಧಾರ ಕೈಗೊಂಡಿದ್ದರು.
ಬ್ಯಾಡಗಿ: ಮಧ್ಯಾಹ್ನ 3 ಗಂಟೆ ಬಳಿಕ ಲಾಕ್‌ಡೌನ್ ಜಾರಿ
ಅಂಗಡಿ ಮುಗ್ಗಟ್ಟು ಬಂದ್:
ಬೆಳಗ್ಗೆಯಿಂದ ವ್ಯಾಪಾರ ವಹಿವಾಟು ನಡೆಸಿದ ವ್ಯಾಪಾರಸ್ಥರು ಮಧ್ಯಾಹ್ನದ ಬಳಿಕ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಸ್ಥಗಿತಗೊಳಿಸುವ ಮೂಲಕ ತಾಲೂಕಾಡಳಿತದ ನಿರ್ಧಾರಕ್ಕೆ ಕೈಜೋಡಿಸಿದರು. ಇದರ ನಡುವೆ ಸಾರ್ವಜನಿಕರೂ ರಸ್ತೆಗಿಳಿಯದೇ ಸಹಕರಿಸಿದ ಪರಿಣಾಮ ಲಾಕ್‌ಡೌನ್ ಯಶಸ್ವಿಯಾಯಿತು.
ಮದ್ಯದಂಗಡಿಗಳು ಓಪನ್ ಆಕ್ಷೇಪ:
ತಾಲೂಕಾಡಳಿತದ ನಿರ್ಧಾರವನ್ನು ಲೆಕ್ಕಿಸದೆ ಕೆಲ ಮದ್ಯದಂಗಡಿಗಳು ಕಾರ‍್ಯನಿರ್ವಹಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು. ನಾಳೆಯಿಂದ ಮದ್ಯದಂಗಡಿಗಳನ್ನು ಸ್ಥಗಿತಗೊಳಿಸಿ ತಾಲೂಕಾಡಳಿತದ ನಿರ್ಧಾರಕ್ಕೆ ಕೈಜೋಡಿಸಬೇಕು ಎಂದು ನ್ಯಾಯವಾದಿ ಸುರೇಶ ಛಲವಾದಿ ಆಗ್ರಹಿಸಿದ್ದಾರೆ.