Grama vastavya: ಗ್ರಾಮಸ್ಥರಿಗೆ ರೇಶನ್ ಇಲ್ಲ; ಆಧಾರ್ ಕಾರ್ಡೂ ಇಲ್ಲ!
- ರೇಶನ್, ಆಧಾರ್ ಕಾರ್ಡ್ ಇಲ್ಲ, ವನ್ಯಪ್ರಾಣಿಗಳ ಹಾವಳಿ ಹೆಚ್ಚಳ...
- ಕೆದಕಲ್ ಗ್ರಾಪಂನಲ್ಲಿ ತಹಸೀಲ್ದಾರ್ ಗ್ರಾಮ ವಾಸ್ತವ್ಯ
- ಅಧಿಕಾರಿಗಳ ಮುಂದೆ ಸಮಸ್ಯೆ ತರೆದಿಟ್ಟಗ್ರಾಮಸ್ಥರು
ಸುಂಟಿಕೊಪ್ಪ (ಜ.22) : ಪರಿಶಿಷ್ಟಪಂಗಡ ಮತ್ತು ಜಾತಿಯ ಕುಟುಂಬದವರಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಇನ್ನೂ ಲಭಿಸಿಲ್ಲ, ದೇವರಕಾಡು ಜಾಗ ಒತ್ತುವರಿಯಾಗುತ್ತಿದೆ, ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಬೆಳೆಗಾರರು ಹೈರಾಣಾಗಿದ್ದಾರೆ, ಕಸ ವಿಲೇವಾರಿಗೆ ಜಾಗವಿಲ್ಲ... ಹೀಗೆ ಗ್ರಾಮಸ್ಥರು ತಮ್ಮೂರಿಗೆ ಬಂದಿದ್ದ ಅಧಿಕಾರಿಗಳ ಮುಂದೆ ಗ್ರಾಮದ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಶನಿವಾರ ಕೆದಕಲ್ ಗ್ರಾಮ ಪಂಚಾಯಿತಿ ಸಮುದಾಯಭವನದಲ್ಲಿ ಕೆದಕಲ್ ಗ್ರಾ.ಪಂ. ಅಧ್ಯಕ್ಷೆ ವಿಸ್ಮಿತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
Grama Vastavya: ಜನರಿಗೆ ಮತ್ತೆ 10 ಕೆ.ಜಿ ಪಡಿತರ ಅಕ್ಕಿ: ಸಚಿವ ಅಶೋಕ್
ಕುಶಾಲನಗರ ತಾಲೂಕು ತಹಸೀಲ್ದಾರ್ ಪ್ರಕಾಶ್ ಮಾತನಾಡಿ, ಸರ್ಕಾರದ ಪ್ರತಿಯೊಂದು ಯೋಜನೆಗಳಿಗೂ ಜನರ ಮನೆ ಮನೆಗೆ ತಲುಪಬೇಕು, ಸಮರ್ಪಕವಾಗಿ ಅನುಷ್ಠಾನವಾಗಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದಷ್ಟುಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಾಗುವುದು ಎಂದರು.
ಸಮಸ್ಯೆಗಳನ್ನು ತೆರೆದಿಟ್ಟಗ್ರಾಮಸ್ಥರು: ಕೆದಕಲ್ ವಿಭಾಗದಲ್ಲಿ ಬಹಳಷ್ಟುಪರಿಶಿಷ್ಟಪಂಗಡ ಮತ್ತು ಜಾತಿಯವರು ತೋಟದ ಲೈನ್‌ಮನೆಗಳಲ್ಲಿ ವಾಸವಾಗಿದ್ದಾರೆ. ಅವರುಗಳಿಗೆ ಇದುವರೆಗೆ ಮತದಾರರ ಚೀಟಿ, ಪಡಿತರ ಕಾರ್ಡು, ಆಧಾರ ಕಾರ್ಡ್ ಲಭಿಸಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ತಹಸೀಲ್ದಾರ್ ಪ್ರಕಾಶ್, ನೀವುಗಳನ್ನು ನನ್ನ ಕಚೇರಿಗೆ ಬನ್ನಿ ಆಧಾರ್ ಕಾರ್ಡ್ ಕೊಡಿಸುತ್ತೇನೆ. ನಂತರದ ದಿನಗಳಲ್ಲಿ ವೋಟರ್ ಹಾಗೂ ಪಡಿತರ ಕಾರ್ಡ್ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಕೆದಕಲ್ ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಒನ್ ಕೇಂದ್ರ ಇನ್ನೂ ತೆರೆದಿಲ್ಲ ಆದ್ದರಿಂದ ಗ್ರಾಮಸ್ಥರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ರೈ ಹೇಳಿದರು.
ಕೆದಕಲ್ ಗ್ರಾಮ ಪಂಚಾಯಿತಿ ವಿಭಾಗದಲ್ಲಿ ಕಾಡಾನೆ, ಕಾಡೆಮ್ಮೆ ಹಾಗೂ ಮಂಗಗಳ ಉಪಟಳದಿಂದ ಬೆಳೆಗಾರರು ಹೈರಾಣಾಗಿದ್ದಾರೆ. ಮೊದಲೇ ಬೆಳೆ ಇಳುವರಿ ಕಡಿಮೆಯಾಗಿದೆ. ಕಾಫಿ ಹಣ್ಣುಗಳನ್ನು ಮಂಗಗಳು ತಿಂದು ನಾಶಪಡಿಸುತ್ತಿದೆ. ಕಾಡಾನೆ, ಕಾಡೆಮ್ಮೆಗಳು ತೋಟದಲ್ಲಿ ಅಡ್ಡಾಡುವುದರಿಂದ ಕಾಫಿ ಗಿಡದ ರಂಬೆಗಳು ನಾಶವಾಗುತ್ತಿದೆ. ಅರಣ್ಯ ಇಲಾಖೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಯಂಕನ ಗೋಫಿನಾಥ್, ಪುಲ್ಲೇರ ಕಾಶಪ್ಪ, ತಿಮ್ಮಯ್ಯಸಮಸ್ಯೆ ತೋಡಿಕೊಂಡರು.
ಕೆದಕಲ್ ಶ್ರೀ ಭದ್ರಕಾಳೇಶ್ವರಿ ದೇವಾಲಯದ ದೇವರವನ ಒತ್ತುವರಿಯಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಯವರು ಏನು ಕ್ರಮ ಕೈಗೊಂಡಿದ್ದಾರೆ. ಮರಗಳನ್ನು ಕಡಿದು ರಸ್ತೆ ಮಾಡಲಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು, ಪಂಚಾಯಿತಿಗೆ ಮಾಹಿತಿ ಇಲ್ಲ. ಮೀಸಲು ಅರಣ್ಯ ಪ್ರದೇಶದಲ್ಲಿ ಈ ರೀತಿ ಚಟುವಟಿಕೆ ನಡೆಸುವುದು ಸಾಧ್ಯವೆ ಎಂದು ಪುಲ್ಲೇರ ಕಾಳಪ್ಪ, ತಿಮ್ಮಯ್ಯ ಗೋಪಿನಾಥ್ ಆಕ್ರೋಶ ವ್ಯಕ್ತಪಡಿಸಿದರು. ದೇವರವನದ ಜಾಗದ ಗಡಿ ಗುರುತು ಮಾಡಿ ದೇವಾಲಯ ಸಮಿತಿಗೆ ಅರಣ್ಯ ಇಲಾಖೆ ವರದಿ ನೀಡಬೇಕೆಂದು ಅವರು ಆಗ್ರಹಿಸಿದರು.
ತಹಸೀಲ್ದಾರರು, ದೇವರಜಾಗ ಒÜತ್ತುವರಿ, ಮರ ಕಡಿತಲೆ, ರಸ್ತೆ ನಿರ್ಮಾಣದ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಸ್ಮಿತಾ, ಉಪಾಧ್ಯಕ್ಷ ಪೊನ್ನಪ್ಪ, ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ, ಕಂದಾಯ ಪರಿವೀಕ್ಷಕರಾದ ಪ್ರಶಾಂತ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
Grama Vastavya: ಮಾಚನಾಳ ತಾಂಡಾ ಅಭಿವೃದ್ಧಿಗೆ 1 ಕೋಟಿ ವಿಶೇಷ ಅನುದಾನ: ಸಚಿವ ಅಶೋಕ ಘೋಷಣೆ
ಸಭೆಯಲ್ಲಿ ಕೆದಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಸ್ಮಿತಾ, ಉಪಾಧ್ಯಕ್ಷ ಪೊನ್ನಪ್ಪ, ಗ್ರಾ.ಪಂ. ಸದಸ್ಯರಾದ ಪುಷ್ಪಾ, ಪಾರ್ವತಿ, ಆನಂದ, ಶಿವಕುಮಾರ್, ತಾಲೂಕು ಪಂಚಾಯಿತಿ ಅಧಿಕಾರಿ ರಾಜಶೇಖರ, ಆಹಾರ ಇಲಾಖೆ ನಿರೀಕ್ಷಕರಾದ ಸ್ವಾತಿ, ಉಪತಹಸೀಲ್ದಾರ್ ಶಿವಪ್ಪ, ಅರಣ್ಯ ಇಲಾಖೆ ಅಧಿಕಾರಿ ದೇವಯ್ಯ, ಶಿಕ್ಷಣ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಪಿಡಿಒ ರಾಜಶೇಖರ, ಕಾರ್ಯದರ್ಶಿ ಸುನೀತಾ, ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ಗ್ರಾಮಲೆಕ್ಕಿಗರಾದ ನಸೀಮಾ, ನಾಗೇಂದ್ರ, ಜಯಂತ್ ಹಾಗೂ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.