ಹಾಸನ (ಫೆ.04):  ಎದುರಾಳಿಗೆ ಅಧ್ಯಕ್ಷ ಸ್ಥಾನ ತಪ್ಪಿಸುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರನ್ನು ಅಪಹರಣ ಮಾಡಿರುವ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮ ಹೋಬಳಿಯ ಮಡೆನೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.

ಮಡೆನೂರು ಗ್ರಾಮ ಪಂಚಾಯ್ತಿಯ ನೂತನ ಸದಸ್ಯೆ ಭಾಗ್ಯಮ್ಮ ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ. ಹಾಗಾಗಿ ಅವರ ಮಗ ಜಯರಾಂ ಅವರು ಮಂಗಳವಾರ ಶಾಂತಿಗ್ರಾಮ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜಯರಾಂ ಅವರು ತಾಲೂಕು ಪಂಚಾಯ್ತಿ ಸದಸ್ಯ ಸುರೇಂದ್ರ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಈರಣ್ಣಗೌಡ(ಸ್ವಾಮಿ) ಹಾಗೂ ಜೆಸಿಬಿ ಆಪರೇಟರ್‌ ವೆಂಕಟೇಶ್‌ ಎಂಬ ಮೂವರ ಮೇಲೆ ದೂರು ದಾಖಲಿಸಿದ್ದು, ಪೊಲೀಸ್‌ ಎಫ್‌ಐಆರ್‌ ಹಾಕಿದ್ದಾರೆ.

ಸರಸ್ವತಿಗೆ ಲಾಭ:

14 ಸದಸ್ಯ ಬಲದ ಮಡೆನೂರು ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಸ್ಥಾನ ಬಿಸಿಎಂ ಎ ಮಹಿಳೆಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯಕ್ಕೂ ಮೀಸಲಾಗಿತ್ತು. ಹದಿನಾಲ್ಕು ಸದಸ್ಯರ ಪೈಕಿ ಸರಸ್ವತಿ, ಪಾಪಮ್ಮ ಹಾಗೂ ಭಾಗ್ಯಮ್ಮ ಮೂವರು ಕೂಡ ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿದ್ದರು. ಆದರೆ, ಭಾಗ್ಯಮ್ಮ ಅವರು ಪಾಪಮ್ಮ ಅವರ ಬೆಂಬಲಕ್ಕೆ ನಿಂತಿದ್ದರು. ಹೀಗಾಗಿ ಸರಸ್ವತಿ ಕಡೆಗೂ ಏಳು ಜನರ ಬೆಂಬಲವಿತ್ತು. ಪಾಪಮ್ಮ ಅವರಿಗೂ ಏಳು ಜನರ ಬೆಂಬಲವಿತ್ತು. ಚುನಾವಣೆಯಲ್ಲಿ ಇಬ್ಬರೂ ಸ್ಪರ್ದಿಗಳಿಗೆ ಸಮನಾದ ಮತಗಳು ಬಂದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಆದರೆ, ಲಾಟರಿಯಲ್ಲಿ ಅದೃಷ್ಟಯಾರಿಗೆ ಒಲಿಯುತ್ತದೆ ಹೇಳಲಾಗುವುದಿಲ್ಲ. ಹಾಗಾಗಿ ಸರಸ್ವತಿಯೇ ಭಾಗ್ಯಮ್ಮ ಅವರನ್ನು ಅಪಹರಣ ಮಾಡಿಸಿದ್ದಾರೆ ಎನ್ನುವುದು ಭಾಗ್ಯಮ್ಮ ಬೆಂಬಲಿಗರ ಆರೋಪ.

ಜೆಡಿಎಸ್‌ ತೆಕ್ಕೆಗೆ ಒಲಿಯಿತು ಅಧಿಕಾರ ...

ಪಾಪಮ್ಮ ಅವರ ಬೆನ್ನಿಗೆ ನಿಂತಿದ್ದ ಭಾಗ್ಯಮ್ಮ ಅವರನ್ನು ಅಪಹರಣ ಮಾಡುತ್ತಾರೆ ಎನ್ನುವ ಕಾರಣದಿಂದಲೇ ಭಾಗ್ಯಮ್ಮ ಅವರನ್ನು ಕೆಲ ದಿನಗಳ ಹಿಂದಿನಿಂದಲೇ ಬೆಂಗಳೂರಿನ ಅವರ ಸಂಬಂದಿಗಳ ಮನೆಯಲ್ಲಿ ಇರಿಸಲಾಗಿತ್ತು. ಆದರೆ, ಭಾಗ್ಯಮ್ಮ ಅವರು ಜನವರಿ 28 ರಂದು ಬೆಂಗಳೂರಿನಿಂದ ಬಸ್ಸಿನಲ್ಲಿ ಬಂದು ಶಾಂತಿಗ್ರಾಮದಲ್ಲಿ ಇಳಿದಾಗ ಅವರನ್ನು ಅಪಹರಣ ಮಾಡಲಾಗಿದೆ. ಯಾರು ಅಪಹರಣ ಮಾಡಿದ್ದಾರೆ ಎನ್ನುವುದು ಗೊತ್ತಿದ್ದರಿಂದ ಅವರನ್ನು ಪ್ರಶ್ನೆ ಮಾಡಲಾಗಿ ಭಾಗ್ಯಮ್ಮ ಅವರನ್ನು ಬಿಟ್ಟುಬಿಡುತ್ತೇವೆ ಎಂದೇ ಹೇಳಿಕೊಂಡು ಬಂದರು. ಆದರೆ, ಬುಧವಾರ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯೇ ನಡೆದುಹೋಗಿದೆ. ಆದರೂ ಭಾಗ್ಯಮ್ಮ ಅವರನ್ನು ಬಿಟ್ಟಿಲ್ಲ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷರಾದ ಮಹೇಶ್‌ ದೂರಿದರು.

ಹಾಲಿ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಸರಸ್ವತಿ ಅವರ ಪತಿಯ ಸ್ನೇಹಿತರಾದ ತ.ಪಂ ಸದಸ್ಯ ಸುರೇಂದ್ರ, ಅವರ ಜೆಸಿಬಿ ಆಪರೇಟರ್‌ ವೆಂಕಟೇಶ ಹಾಗೂ ಗ್ರಾ.ಪಂ ಮಾಜಿ ಅಧ್ಯಕ್ಷ ಈರಣ್ಣಗೌಡ ಈ ಕೃತ್ಯ ಎಸಗಿದ್ದು, ವೆಂಕಟೇಶ ಮೊದಲು ತಮ್ಮದೇ ಜತೆ ಇದ್ದು, ಭಾಗ್ಯಮ್ಮ ಅವರು ಬೆಂಗಳೂರಿನಿಂದ ಬರುವ ಮಾಹಿತಿಯನ್ನು ವೆಂಕಟೇಶನೇ ಸುರೇಂದ್ರಗೆ ನೀಡಿದ್ದರಿಂದ ಅಪಹರಣ ಮಾಡಿದ್ದಾರೆ ಎಂದು ಭಾಗ್ಯಮ್ಮ ಅವರ ಪುತ್ರ ಜಯರಾಂ ಆರೋಪಿಸಿದರು.

ಭಾಗ್ಯಮ್ಮ ಅವರ ಗೈರಿನಲ್ಲೇ  ಚುನಾವಣೆ ನಡೆದಿದ್ದು, ಸರಸ್ವತಿ 7 ಮತಗಳನ್ನು ಪಾಪಮ್ಮ 6 ಮತಗಳನ್ನು ಪಡೆದಿದ್ದಾರೆ.