Asianet Suvarna News Asianet Suvarna News

ಮಂಡ್ಯ : ಗ್ರಾಪಂ ನಿರ್ಣಯಗಳೇ ವಿವಾದದ ಮೂಲ...!

ಕೆರಗೋಡು ಧ್ವಜಸ್ತಂಭ ಸ್ಥಾಪನೆ, ಹನುಮ ಧ್ವಜ ಹಾರಾಟ ವಿವಾದದ ಸ್ವರೂಪ ಪಡೆಯುವುದಕ್ಕೆ ಗ್ರಾಮ ಪಂಚಾಯ್ತಿಯಲ್ಲಿ ಆಗಿರುವ ನಿರ್ಣಯಗಳು, ಒತ್ತಡಕ್ಕೆ ಸಿಲುಕಿ ಅಧಿಕಾರಿಗಳು ಮಾಡಿದ ಎಡವಟ್ಟಿನ ನಿರ್ಧಾರಗಳು ಮೂಲ ಕಾರಣ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

Grama Panchayat Decisions are the source of controversy In Mandya snr
Author
First Published Feb 1, 2024, 12:14 PM IST

 ಮಂಡ್ಯ :  ಕೆರಗೋಡು ಧ್ವಜಸ್ತಂಭ ಸ್ಥಾಪನೆ, ಹನುಮ ಧ್ವಜ ಹಾರಾಟ ವಿವಾದದ ಸ್ವರೂಪ ಪಡೆಯುವುದಕ್ಕೆ ಗ್ರಾಮ ಪಂಚಾಯ್ತಿಯಲ್ಲಿ ಆಗಿರುವ ನಿರ್ಣಯಗಳು, ಒತ್ತಡಕ್ಕೆ ಸಿಲುಕಿ ಅಧಿಕಾರಿಗಳು ಮಾಡಿದ ಎಡವಟ್ಟಿನ ನಿರ್ಧಾರಗಳು ಮೂಲ ಕಾರಣ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

ಗೌರಿಶಂಕರ ಸೇವಾ ಟ್ರಸ್ಟ್‌ನವರು ಧ್ವಜ ಸ್ತಂಭ ಸ್ಥಾಪನೆಗೆ ಅನುಮತಿ ಕೋರಿದಾಗ ಸ್ಥಳ ಮಹಜರಿಗೆ ಹೋದ ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ಆ ಸ್ಥಳ ಸರ್ಕಾರಕ್ಕೆ ಸೇರಿದ್ದೋ, ಖಾಸಗಿಯವರಿಗೆ ಸೇರಿದ್ದೋ ಎಂಬುದನ್ನು ಖಚಿತ ಪಡಿಸಿಕೊಳ್ಳದಿರುವುದು. ಸರ್ಕಾರಿ ಜಾಗವನ್ನು ಖಾಸಗಿಯವರಿಗೆ ಪರಭಾರೆ ಮಾಡುವ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರದಿರುವುದು, ಏಕಪಕ್ಷೀಯವಾಗಿ ಪಂಚಾಯ್ತಿಯವರೇ ನಿರ್ಣಯ ಕೈಗೊಂಡಿರುವುದು ಕಂಡುಬಂದಿದೆ.

ಅಷ್ಟೇ ಅಲ್ಲದೇ, ಜ.20ರಂದು ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಾಡಿದ್ದು, ಪರಿಸ್ಥಿತಿ ಗಂಭೀರಗೊಳ್ಳುತ್ತಿರುವುದನ್ನು ಮನಗಂಡೂ ಧ್ವಜವನ್ನು ಜ.25ರ ವರೆಗೆ ಧ್ವಜ ಹಾರಾಟಕ್ಕೆ ಅವಕಾಶ ನೀಡಿದ್ದು ಹಾಗೂ ಗಣರಾಜ್ಯೋತ್ಸವ ದಿನದಂದು ಹನಮಧ್ವಜ ಕೆಳಗಿಳಿಸಿ ರಾಷ್ಟ್ರಧ್ವಜ ಆರಿಸಿದ ಬಳಿಕ ಸಂಜೆ ಮತ್ತೆ ಅದನ್ನು ಕೆಳಗಿಳಿಸಿ ಹನುಮ ಧ್ವಜವನ್ನು ಆರೋಹಣ ಮಾಡಲು ಅವಕಾಶ ಮಾಡಿಕೊಟ್ಟಿರುವುದೇ ಕೆರಗೋಡು ವಿವಾದದ ಕೇಂದ್ರಬಿಂದುವಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವುದಕ್ಕೆ ಪ್ರಮುಖ ಕಾರಣವಾಯಿತು ಎನ್ನುವುದು ಕೆರಗೋಡು ಗ್ರಾಪಂ ಅಧ್ಯಕ್ಷ ನವೀನ್ ಅವರು ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳಿಂದ ತಿಳಿದು ಬಂದಿರುವ ಸತ್ಯವಾಗಿದೆ.

ಅಧ್ಯಕ್ಷ ಹೇಳಿದ್ದಿಷ್ಟು?

28.11.2023ರಂದು ಶ್ರೀರಾಮ ಭಜನಾ ಮಂಡಳಿ ಹಾಗೂ ಶ್ರೀಅಯ್ಯಪ್ಪಸ್ವಾಮಿ ಭಜನಾ ಮಂಡಳಿ ಶ್ರೀಆಂಜನೇಯಸ್ವಾಮಿ ದೇವಾಲಯದ ಎದುರು ಧ್ವಜಸ್ತಂಭ ಸ್ಥಾಪನೆಗೆ ಪಂಚಾಯ್ತಿ ಅನುಮತಿ ಕೋರಿದ್ದರು. 21.12.2023ರಂದು ಯೋಗೇಶ್ ಎಂಬುವರು ಹನುಮ ಧ್ವಜ ಹಾರಿಸುವುದಕ್ಕೆ ಅನುಮತಿ ಕೋರಿದ್ದರು. 29.12.2023 ರಂದು ಶ್ರೀಗೌರಿಶಂಕರ ಸೇವಾ ಟ್ರಸ್ಟ್‌ನವರು ರಂಗಮಂದಿರದ ಆವರಣದಲ್ಲಿ ಧ್ವಜಸ್ತಂಭ ನಿರ್ಮಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು. ಶ್ರೀಗೌರಿಶಂಕರ ಸೇವಾ ಟ್ರಸ್ಟ್ ನೀಡಿದ ಧ್ವಜಸ್ತಂಭ ಸ್ಥಾಪನೆ ಕುರಿತಂತೆ 22 ಸದಸ್ಯ ಬಲದ ಪೈಕಿ ಜೆಡಿಎಸ್, ಕಾಂಗ್ರೆಸ್‌ನ ತಲಾ ಒಬ್ಬರು ಸದಸ್ಯರು ವೈಯಕ್ತಿಕ ಕಾರಣಗಳಿಂದ ಗೈರು ಹಾಜರಾಗಿದ್ದರಿಂದ 20 ಸದಸ್ಯರ ಪೈಕಿ 18 ಸದಸ್ಯರು ಧ್ವಜಸ್ತಂಭ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದರು.

ಕಾಂಗ್ರೆಸ್ ಬೆಂಬಲಿತ ಸದಸ್ಯನೋರ್ವ ವಿರೋಧಿಸಿದರೆ, ಮತ್ತೋರ್ವ ಸದಸ್ಯ ತಟಸ್ಥರಾಗಿ ಉಳಿದಿದ್ದರು. ಹೀಗೆ ಧ್ವಜಸ್ತಂಭ ಸ್ಥಾಪಿಸಲು ಅನುಮತಿ ನೀಡಿ 2024 ಜನವರಿ 5 ರಂದು ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ಸ್ಥಳ ಪರಿಶೀಲನೆ ನಡೆಸಿದರು. ಧ್ವಜಸ್ತಂಭ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಲಾಯಿತು. ಧ್ವಜಸ್ತಂಭದಲ್ಲಿ ತ್ರಿವರ್ಣಧ್ವಜ ಹಾಗೂ ಕನ್ನಡ ಧ್ವಜ ಆರೋಹಣ ಮಾಡುವುದಕ್ಕಷ್ಟೇ ಟ್ರಸ್ಟ್‌ನವರು ಒಪ್ಪಿಗೆ ಸೂಚಿಸಿದ್ದರು.

ಇದರ ನಡುವೆ ಟ್ರಸ್ಟ್‌ನವರು ಜ.20ರಂದು ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಿಸಿದ್ದರು. ಮರುದಿನವೇ ಗ್ರಾಮದ ಕೆಲವರು ಧ್ವಜಸ್ತಂಭದಲ್ಲಿ ಹನುಮಧ್ವಜ ಹಾರಾಟಕ್ಕೆ ಕಾನೂನಾತ್ಮಕವಾಗಿ ಅನುಮತಿ ನೀಡಲಾಗಿದೆಯೇ ಎಂದು ಪಿಡಿಒ ಅವರನ್ನು

ಪ್ರಶ್ನಿಸಿದರು. ಧ್ವಜ ತೆರವುಗೊಳಿಸುವಂತೆ 30ರಿಂದ 40 ಜನರು ಪಂಚಾಯ್ತಿ ಕಚೇರಿ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದರು.

ಪರಿಸ್ಥಿತಿಯ ಗಂಭೀರತೆ ಅರಿತು ಸ್ಥಳಕ್ಕೆ ಭೇಟಿ ನೀಡಿದ ಸಬ್‌ಇನ್ಸ್‌ಪೆಕ್ಟರ್ ಮತ್ತು ಪಿಡಿಒ ಅವರು ಟ್ರಸ್ಟ್‌ನವರೊಂದಿಗೆ ಚರ್ಚಿಸಿದರು. ಜ.22ರಂದು ಶ್ರೀರಾಮಮಂದಿರ ಉದ್ಘಾಟನೆ ಇರುವುದರಿಂದ ಯಥಾಸ್ಥಿತಿ ಕಾಪಾಡುವ ನಿರ್ಧಾರ ಮಾಡಿದ್ದರು. ಜ.21ರಿಂದ 25 ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿತ್ತು. ಸೆ.25ರಂದು ಸಾಮಾನ್ಯ ಸಭೆ ಸೇರಿ ಹನುಮ ಧ್ವಜವನ್ನು ಇಳಿಸುವ ನಿರ್ಧಾರ ಮಾಡಲಾಗಿತ್ತು. ಅಂದು ತಾಪಂ ಇಒ ವೀಣಾ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಈ ವಿಷಯ ಜಿಪಂ ಸಿಇಒ ಅವರ ಗಮನಕ್ಕೂ ತರಲಾಗಿತ್ತು. ಅವರೂ ಸಹ ಧ್ವಜ ತೆರವುಗೊಳಿಸುವಂತೆ ಸೂಚಿಸಿದ್ದರು.

ಗಣರಾಜ್ಯೋತ್ಸವ ದಿನ ಆ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜ ಆರಿಸಲಾಯಿತು. ಅದೇ ದಿನ ಸಂಜೆ ರಾಷ್ಟ್ರಧ್ವಜವನ್ನು ಕೆಳಗಿಳಿಸಲಾಗಿತ್ತು. ತದನಂತರದಲ್ಲಿ ಶ್ರೀಗೌರಿಶಂಕರ ಸೇವಾ ಟ್ರಸ್ಟ್‌ನವರು ಹನುಮ ಧ್ವಜವನ್ನು ಮತ್ತೆ ಆರೋಹಣ ಮಾಡಿದ್ದರು. ವಿಷಯ ತಿಳಿದು ಜ.27ರಂದು ಮತ್ತೆ ತಾಪಂ ಇಒ ವೀಣಾ ಅವರು ಸ್ಥಳಕ್ಕೆ ಆಗಮಿಸಿ ಪಂಚಾಯ್ತಿ ಸದಸ್ಯರೊಂದಿಗೆ ಚರ್ಚಿಸಿ ಧ್ವಜ ತೆರವುಗೊಳಿಸುವಂತೆ ತಿಳಿಸಿದ್ದರು.

ಮರುದಿನ ಬೆಳಗ್ಗೆಯೇ ಪೊಲೀಸ್ ಭದ್ರತೆಯೊಂದಿಗೆ ಅಧಿಕಾರಿಗಳು ಧ್ವಜ ತೆರವುಗೊಳಿಸುವುದಕ್ಕೆ ಬಂದಿರುವ ವಿಚಾರ ನಮಗೆ ತಿಳಿಯಿತು ಎಂಬುದಾಗಿ ಗ್ರಾಪಂ ಅಧ್ಯಕ್ಷ ನವೀನ್ ತಿಳಿಸಿದರು. ನಂತರ ಧ್ವಜ ತೆರವು ವಿವಾದ ಬೃಹದಾಕಾರವಾಗಿ ಹುಟ್ಟಿಕೊಂಡು ಅಹಿತರ ಘಟನೆಗೆ ಕಾರಣವಾಯಿತು. ಇದರಲ್ಲಿ ನಮ್ಮ ಕ್ಷೇತ್ರದ ಶಾಸಕರ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಎಸ್ಸಿ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್, ಕಾ.ಪೂ. ರಮೇಶ್ ಇತರರು ಇದ್ದರು.

Latest Videos
Follow Us:
Download App:
  • android
  • ios