ಅತಿವೃಷ್ಟಿಮತ್ತು ಅನಾವೃಷ್ಟಿಯಂತಹ ಸಂದರ್ಭದಲ್ಲಿ ತೊಂದರೆಗೆ ಒಳಗಾಗುವ ರೈತರ ನೆರವಿಗೆ ಸರ್ಕಾರಗಳು ಬರುವ ಅಗತ್ಯವಿದೆ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್‌ ಪ್ರತಿಪಾದಿಸಿದ್ದಾರೆ.

ತುಮಕೂರು (ನ.05): ಅತಿವೃಷ್ಟಿಮತ್ತು ಅನಾವೃಷ್ಟಿಯಂತಹ ಸಂದರ್ಭದಲ್ಲಿ ತೊಂದರೆಗೆ ಒಳಗಾಗುವ ರೈತರ ನೆರವಿಗೆ ಸರ್ಕಾರಗಳು ಬರುವ ಅಗತ್ಯವಿದೆ ಎಂದು ಮಾಜಿ ಡಿಸಿಎಂ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್‌ ಪ್ರತಿಪಾದಿಸಿದ್ದಾರೆ.

ತುಮಕೂರು ತಾಲೂಕು ಚಿಕ್ಕತೊಟ್ಲುಕೆರೆಯ ಅಟವಿ ಜಂಗಮ ಸುಕ್ಷೇತ್ರದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದರು. ರೈತರ ಬದುಕಿದರೆ ಮಾತ್ರ ದೇಶ ಬದುಕಲು ಸಾಧ್ಯ. ರೈತನೇ ಬೆಳೆಯದಿದ್ದರೆ ಪುಕ್ಕಟೆ ಅಕ್ಕಿ ಕೊಡುವ ಯೋಜನೆಗೆ ಅಗತ್ಯ ವಸ್ತುವನ್ನು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದ ಅವರು, ರೈತ ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಿದಾಗ ಮಾತ್ರ ರೈತನನ್ನು ಉಳಿಸುವುದರ ಜೊತೆಗೆ, ನಾವುಗಳು ಉಳಿಯಲು ಸಾಧ್ಯ ಎಂದರು.

ನಾನು ಈ ಕಾರ್ಯಕ್ರಮವನ್ನು ರಾಜಕೀಯ ಉದ್ದೇಶಕ್ಕಾಗಿ ಆಯೋಜಿಸಿಲ್ಲ. ಅಟವಿ ಶಿವಲಿಂಗಸ್ವಾಮೀಜಿಗಳ ಚಿಂತನೆಗೆ ಪೂರಕವಾಗಿ ಅವರಿಗೆ ಬೆನ್ನೆಲುಬಾಗಿ ನಿಂತಿದ್ದೇನೆಯೇ ಹೊರತು ರಾಜಕೀಯ ಲಾಭಕ್ಕಾಗಿ ಅಲ್ಲ. ಚುನಾವಣೆ ಸಂದರ್ಭದಲ್ಲಿ ಮತದಾರರ ಮುಂದೆ ಹೋಗಿ ಕೈಮುಗಿಯುತ್ತೇನೆ. ಮತ ನೀಡುವುದು, ಬೀಡುವುದು ಅವರಿಗೆ ಬಿಟ್ಟವಿಚಾರ ಎಂದು ನುಡಿದರು.

ಸ್ಫೂರ್ತಿ ಡೆವಲಪ್ಪ​ರ್‍ಸ್ನ ಎಸ್‌.ಪಿ.ಚಿದಾನಂದ ಮಾತನಾಡಿ, 100 ಪುಣ್ಯ ಕ್ಷೇತ್ರಗಳ ದರ್ಶನಕ್ಕಿಂತ ಒಂದು ಗೋಪೂಜೆ ನಡೆಸುವುದು ಹೆಚ್ಚು ಪುಣ್ಯದ ಕೆಲಸ ಎಂದು ಹಿಂದು ಸಂಸ್ಕೃತಿಯಲ್ಲಿ ನಂಬಿದ್ದೇವೆ. ಇಂದೊಂದು ಜಾತ್ಯತೀತ, ಪಕ್ಷಾತೀತ ಕಾರ್ಯಕ್ರಮವಾಗಿದೆ. ಜನರು ಹೆಚ್ಚು, ಹೆಚ್ಚಾಗಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಅಟವಿ ಸುಕ್ಷೇತ್ರ ಗೋಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ಟಿ.ಬಿ.ಶೇಖರ್‌ ಮಾತನಾಡಿ, ಹಾಸ್ಟಲ್‌, ಗೋಶಾಲೆ, ವಿಭೂತಿ ತಯಾರಿಕಾ ಘಟಕ, ಆಯುರ್ವೇಧ ಚಿಕಿತ್ಸಾಲಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಯೋಗ ಶಾಲೆ, ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆಯಬೇಕೆಂಬ ಆಸೆ ಇದೆ. ಮುಂದಿನ ದಿನಗಳಲ್ಲಿ ನೆರವೇರುವ ವಿಶ್ವಾಸವಿದೆ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ, ಬೆಟ್ಟದಹಳ್ಳಿಯ ಚಂದ್ರಶೇಖರಸ್ವಾಮೀಜಿ, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ವೀರಶೈವ ಸಮಾಜದ ಉಪಾಧ್ಯಕ್ಷ ಚಂದ್ರಮೌಳಿ, ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ತಹಸೀಲ್ದಾರ್‌ ಮೋಹನ್‌ ಕುಮಾರ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಹಾಗು ಪಶುಸಂಗೋಪನಾ ಇಲಾಖೆಯಿಂದ ಆಯೋಜಿಸಿದ್ದ ಕೃಷಿ ಮೇಳವನ್ನು ಡಾ.ಜಿ.ಪರಮೇಶ್ವರ್‌ ಉದ್ಘಾಟಿಸಿ, ವಿವಿಧ ಇಲಾಖೆಯ ಮಳಿಗೆಯನ್ನು ವೀಕ್ಷಿಸಿದರು.

ಜನತೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ: ಶ್ರೀ

ಅಟವಿ ಜಂಗಮ ಸುಕ್ಷೇತ್ರದ ಅಟವಿ ಶಿವಲಿಂಗಸ್ವಾಮೀಜಿ ಆಶೀರ್ವಚನ ನೀಡಿ, ಈ ಮೇಳಕ್ಕೆ ಐದರಿಂದ 10 ಸಾವಿರ ಸೇರಬೇಕಿತ್ತು. ಜನತೆ ಸದ್ವಿನಿಯೋಗ ಆಗಲಿಲ್ಲ. ಅಭಿಮಾನದ ಕೊರತೆಯಿಂದ ಜನ ಸೇರಲಿಲ್ಲ. ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ. ಇಂತಹ ವಸ್ತು ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕಿದೆ. ಚಿಕ್ಕತೊಟ್ಲುಕೆರೆ 1000 ಮನೆಗಳಿರುವ ಊರು, ಸ್ವಾಭಿಮಾನಕ್ಕಿಂತ ದುರಾಭಿಮಾನ ಹೆಚ್ಚಾಗಿ, ಕಾರ್ಯಕ್ರಮದತ್ತ ಬಂದಿಲ್ಲ ಎಂದು ತಮ್ಮ ಅಸಮಾಧಾನ ತೋಡಿಕೊಂಡರು. ಮಠ ಬೆಳೆಯುವುದರ ಜೊತೆಗೆ, ಜನರ ಪರಿವರ್ತನೆಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ರಾಜ್ಯದಲ್ಲಿ 3000 ಸಾವಿರ ಮಠಾಧೀಶ್ವರಿದ್ದಿವಿ.ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಹಿಂದೂ ಧರ್ಮ ಶ್ರೇಷ್ಠ ಧರ್ಮ

ಹಿಂದೂ ಧರ್ಮ ಬಹಳ ಶ್ರೇಷ್ಠವಾದ ಧರ್ಮ ಎಂದು ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್‌ ಬಣ್ಣಿಸಿದರು. ಚಿಕ್ಕತೊಟ್ಲುಕೆರೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೂ ಧರ್ಮದ ಬದ್ದತೆಗಳು ಹಿಂದೂ ಧರ್ಮ ಕೊಟ್ಟಅನೇಕ ವಿಚಾರಧಾರೆಗಳನ್ನು ಚರ್ಚೆ ಮಾಡಿ ಸಮಾಜಕ್ಕೆ ಇನ್ನೊಮ್ಮೆ ತಿಳಿಸುವ ಅವಶ್ಯಕತೆ ಇದೆ.ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮದ ಬಗ್ಗೆ ಗೊಂದಲ ಎದ್ದಿದ್ದು ಅದಕ್ಕೆ ಸ್ಪಷ್ಠೀಕರಣ ಈ ಧರ್ಮ ಸಭೆಯಲ್ಲಿ ನಡೆಯಲಿದೆ ಎಂದ ಅವರು ಇದೇ ಸಂದರ್ಭದಲ್ಲಿ ಗೋ ಪೂಜೆ ಮಹತ್ವವನ್ನು ಸಾರಿದರು.