ಉಡುಪಿ [ಸೆ.16]:  ಮುಂದಿನ ತಿಂಗಳಿನಿಂದ ಜಾರಿಗೆ ಬರುವಂತೆ ರಾಜ್ಯದ ಧಾರ್ಮಿಕ ದತ್ತಿ ದೇವಸ್ಥಾನಗಳಲ್ಲಿ ಪಾರಂಪರಿಕ ವಾದ್ಯ ನುಡಿಸುತ್ತಿರುವ ಕಲಾವಿದರ ವೇತನವನ್ನು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಿಸಿದರು.

ಭಾನುವಾರ ಇಲ್ಲಿನ ದೇವಾಡಿಗರ ಯುವ ಸಂಘಟನೆ ಮತ್ತು ಮಹಿಳಾ ಸಂಘಟನೆ ಹಾಗೂ ಏಕನಾಥೇಶ್ವರಿ ಕ್ರೆಡಿಟ್‌ ಕೋ- ಆಪರೇಟಿವ್‌ ಸೊಸೈಟಿಯ ವತಿಯಿಂದ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಣೆ, ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ದೇವಸ್ಥಾನಗಳಲ್ಲಿ ವಾದ್ಯ ನುಡಿಸುವವರಿಗೆ ಕನಿಷ್ಠ ವೇತನವಿದೆ, ಅದನ್ನು ಹೆಚ್ಚಿಸಬೇಕು ಎನ್ನುವ ಬೇಡಿಕೆ ಇತ್ತು. ಅದನ್ನು ಈ ಬಾರಿ ಮುಜರಾಯಿ ಇಲಾಖೆಯಿಂದ ಈಡೇರಿಸಲಾಗಿದೆ ಎಂದು ಅವರು ಹೇಳಿದರು.

ಹೆಚ್ಚು ಜನಸಂಖ್ಯೆಯ ದೊಡ್ಡ ಜಾತಿಗಳ ನಡುವೆ ಸಣ್ಣ ಜಾತಿಗಳು ಅನಾಥ ಆಗುತ್ತಿವೆ ಎಂಬ ಆತಂಕವೂ ಇದೆ. ಆದರೆ ಮಡಿವಾಳ, ದೇವಾಡಿಗ, ವಿಶ್ವಕರ್ಮ ಮೊದಲಾದ ಜಾತಿಯವರು ಈ ಆತಂಕ ಬಿಟ್ಟು ಸಂಘಟನೆಯ ಮೂಲಕ ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡಬೇಕು, ಈ ಮೂಲಕ ಸಬಲರಾದಬೇಕು ಎಂದು ಕೋಟ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು. ನಂತರ ಹಿರಿಯ ಸ್ಯಾಕ್ಸೋಫೋನ್‌ ವಾದಕರಾದ ಡಾ. ಸುಂದರ ಸೇರಿಗಾರ ಅಲೆವೂರು, ಡಾ.ಯು. ಜನಾರ್ದನ ಸೇರಿಗಾರ, ಡಾ. ರಾಘು ಸೇರಿಗಾರ ಅಲೆವೂರು, ನಗರಸಭಾ ಸದಸ್ಯರಾದ ವಿಜಯ ಕೊಡವೂರು ಮತ್ತು ಚಂದ್ರಶೇಖರ ಸೇರಿಗಾರ ಇಂದಿರಾನಗರ ಅವರನ್ನು ಸನ್ಮಾನಿಸಲಾಯಿತು. 2018- 19ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ದೇವಾಡಿಗ ಸಮುದಾಯದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ದೇವಾಡಿಗರ ಸೇವಾ ಸಂಘದ ಅಧ್ಯಕ್ಷ ಸೀತಾರಾಮ ಕೆ. ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಗುರ್ಮೆ ಸುರೇಶ್‌ ಶೆಟ್ಟಿ, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶಪಾಲ್‌ ಸುವರ್ಣ, ವಿವಿಧ ದೇವಾಡಿಗರ ಸಂಘದ ಅಧ್ಯಕ್ಷ ರವಿ ಎಸ್‌. ದೇವಾಡಿಗ, ಜ್ಯೋತಿ ಎಸ್‌. ದೇವಾಡಿಗ, ಡಾ. ದೇವರಾಜ ಕೆ., ಶಿವ ಸೇರಿಗಾರ, ಸೋಮು ದೇವಾಡಿಗ, ಬಾಲಕೃಷ್ಣ ದೇವಾಡಿಗ, ಗೋವರ್ಧನ ಸೇರಿಗಾರ, ಯೋಗೀಶ ದೇವಾಡಿಗ ಮುಂತಾದವರಿದ್ದರು. ಕಟ್ಟಡ ಸಮಿತಿ ಅಧ್ಯಕ್ಷ ಗಣೇಶ ದೇವಾಡಿಗ ಸ್ವಾಗತಿಸಿದರು.