* ಯಾರಾದರೂ ಕೊಟ್ಟರೆ ತಿಂತಾರೆ; ಇಲ್ಲದಿದ್ದಲ್ಲಿ ಪಾರ್ಕ್, ಉದ್ಯಾನವನದಲ್ಲೇ ಇರ್ತಾರೆ* ಕಳೆದ ಬಾರಿ ಸರ್ಕಾರ ಇವರನ್ನು ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಿತ್ತು* ಈ ಸಲವೂ ಅದೇ ರೀತಿ ಮಾಡಲು ಪ್ರಜ್ಞಾವಂತರ ಆಗ್ರಹ 

ಹುಬ್ಬಳ್ಳಿ(ಮೇ.27): ನೆಲೆ ಇಲ್ಲದ ಅನ್ಯ ಜಿಲ್ಲೆಗಳ ಕಾರ್ಮಿಕರಿಗೆ ಕಳೆದ ವರ್ಷದಂತೆ ಟೆಸ್ಟ್‌ ಮಾಡಿಸಿ, ಸರ್ಕಾರಿ ಕ್ವಾರಂಟೈನ್‌ಗೊಳಪಡಿಸಿ! ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಬಂದು ಸಿಲುಕಿದ ಸುಮಾರು 100ಕ್ಕೂ ಹೆಚ್ಚು ಕಾರ್ಮಿಕರು ವಿವಿಧೆಡೆ ಇದ್ದಾರೆ. ಇಲ್ಲಿನ ಸಿದ್ಧಾರೂಢ ಮಠದ ರಥಬೀದಿ, ಪಾಲಿಕೆ ಹೊರಗಿರುವ ಗಿಡ, ಉದ್ಯಾನವನ, ರೈಲ್ವೆ ನಿಲ್ದಾಣ ಹೀಗೆ ವಿವಿಧ ಸ್ಥಳಗಳಲ್ಲಿ ಹತ್ತು ಹಲವು ಕಾರ್ಮಿಕರು ನೆಲೆಸಿದ್ದಾರೆ.

ಇವರೆಲ್ಲರೂ ಬೆಳಗಾವಿ ಜಿಲ್ಲೆ ಅಥಣಿ, ಹಾವೇರಿ, ಚಿತ್ರದುರ್ಗ, ಗದಗ, ಬಾಗಲಕೋಟೆ ಸೇರಿದಂತೆ ಹಲವೆಡೆಗಳಿಂದ ಬಂದು ನೆಲೆಸಿದ್ದಾರೆ. ಇಲ್ಲಿನ ರಸ್ತೆ ಬದಿಯಲ್ಲಿ ಹೋಟೆಲ್‌, ಕೆಲ ಹಾರ್ಡ್‌ವೇರ್‌ ಶಾಪ್‌ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರೀಗ ಕೆಲಸ, ನೆಲೆ ಎರಡನ್ನೂ ಕಳೆದುಕೊಂಡಿದ್ದಾರೆ. ಅತ್ತ ಕೆಲಸವಿಲ್ಲ. ಇತ್ತ ಊರಿಗೆ ಹೋಗಲು ಬಸ್‌ಗಳಿಲ್ಲ. ಹೀಗಾಗಿ ಇಲ್ಲಿನ ಪಾರ್ಕ್, ಗಿಡದ ಕೆಳಗೆ, ಬಾಗಿಲು ಮುಚ್ಚಿದ ಅಂಗಡಿಗಳ ಕಟ್ಟೆಮೇಲೆ ಮಲಗಿ ದಿನ ದೂಡುತ್ತಿದ್ದಾರೆ. ಯಾರಾದರೂ ದಾನಿಗಳು ಬಂದು ಊಟ ಕೊಟ್ಟು ಹೋಗುತ್ತಾರೆ. ಅದನ್ನೇ ತಿಂದು ಮತ್ತೆ ಅಂಗಡಿ ಬಾಗಿಲಿಗೋ, ಪಾರ್ಕ್‌ನಲ್ಲೋ ವಿಶ್ರಾಂತಿ ಪಡೆಯುತ್ತಾರೆ.

"

ಟೆಸ್ಟ್‌ ಮಾಡಿಸಿ:

ಇವರು ಈವರೆಗೂ ಟೆಸ್ಟ್‌ ಮಾಡಿಸಿಲ್ಲ. ಇವರನ್ನು ಹಿಡಿದು ಟೆಸ್ಟ್‌ ಮಾಡಿಸುವ ಗೋಜಿಗೆ ಸರ್ಕಾರವೂ ಹೋಗಿಲ್ಲ. ಇವರಲ್ಲಿ ಎಷ್ಟೋ ಜನ ಕೆಮ್ಮುತ್ತಾ, ನರಳುತ್ತಾ ಅಲೆದಾಡುವುದು ಗೋಚರವಾಗುತ್ತದೆ. ಕಳೆದ ವರ್ಷ ಈ ರೀತಿಯ ಕಾರ್ಮಿಕರನ್ನು ಹಿಡಿದು ಸರ್ಕಾರಿ ಕ್ವಾರಂಟೈನ್‌ ಮಾಡಲಾಗಿತ್ತು. ಆಗ ಯಾವುದೇ ರಸ್ತೆ, ಗಿಡದ ಕೆಳಗೆ ಕಾಣುವ ಕಾರ್ಮಿಕರನ್ನು ಕರೆತಂದು ಟೆಸ್ಟ್‌ ಮಾಡಿಸುತ್ತಿದ್ದರು. ಒಂದು ವೇಳೆ ಅವರಿಗೆ ಪಾಸಿಟಿವ್‌ ಇದ್ದರೆ ಕೋವಿಡ್‌ ಕೇಂದ್ರಕ್ಕೆ ಅಥವಾ ಆಸ್ಪತ್ರೆಗೆ ದಾಖಲಿಸಲಾಗುತ್ತಿತ್ತು. ಇಲ್ಲದಿದ್ದಲ್ಲಿ ಸರ್ಕಾರಿ ಹಾಸ್ಟೆಲ್‌ ಅಥವಾ ಸರ್ಕಾರದ ವಿವಿಧ ಕಟ್ಟಡಗಳಲ್ಲಿ ಕ್ವಾರಂಟೈನ್‌ ಮಾಡಲಾಗುತ್ತಿತ್ತು. ಕೊರೋನಾ ಮುಗಿದ ಬಳಿಕ ಅವರೂರಿಗೆ ಕಳುಹಿಸಿಕೊಡಲಾಗಿತ್ತು.

ಕೊರೋನಾ ಸೋಂಕಿಗಿಂತ ಭಯದಿಂದ ಸತ್ತವರೇ ಹೆಚ್ಚು!

ಈಗಲೂ ಇಲ್ಲಿನ ರಸ್ತೆಗಳಲ್ಲಿ ಅಲೆದಾಡುವ ಸಾಕಷ್ಟು ಕಾರ್ಮಿಕರಿಗೆ ಕೊರೋನಾ ಬಂದರೂ ಬಂದಿರಬಹುದು. ಅವರನ್ನು ಟೆಸ್ಟ್‌ಗೆ ಒಳಪಡಿಸಬೇಕು. ಕೊರೋನಾ ಪಾಸಿಟಿವ್‌ ಇದ್ದರೆ ಕೂಡಲೇ ಕೋವಿಡ್‌ ಕೇರ್‌ ಸೆಂಟರ್‌ಗೆ ಸೇರ್ಪಡೆ ಮಾಡಬೇಕು. ಇಲ್ಲದಿದ್ದಲ್ಲಿ ಸರ್ಕಾರಿ ಹಾಸ್ಟೆಲ್‌ ಅಥವಾ ಕಟ್ಟಡದಲ್ಲಿ ಕ್ವಾರಂಟೈನ್‌ ಮಾಡಬೇಕು. ಇದರಿಂದ ಸೋಂಕು ಹಬ್ಬುವುದು ಕಡಿಮೆಯಾಗುತ್ತದೆ. ಜೊತೆಗೆ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಆಹಾರ, ವಸತಿ ಸೌಲಭ್ಯವೂ ಕಲ್ಪಿಸಿದಂತಾಗಿ ಹೊರಗೆ ಎಲ್ಲೆಲ್ಲೂ ಮಲಗುವುದು ತಪ್ಪುತ್ತದೆ ಎಂಬುದು ಪ್ರಜ್ಞಾವಂತರ ಅಭಿಮತ.

ಎಷ್ಟೋ ಜನ ಕಾರ್ಮಿಕರು ಅಲ್ಲಿ ಇಲ್ಲಿ ಇರುವುದು ಗೋಚರವಾಗುತ್ತದೆ. ಅಂಥಹವರಲ್ಲಿ ಸಾಕಷ್ಟುಜನರಿಗೆ ಕೊರೋನಾ ಸೋಂಕು ಇದ್ದರೂ ಇರಬಹುದು. ಅವರನ್ನು ಕೂಡಲೇ ಟೆಸ್ಟ್‌ ಮಾಡಿಸಬೇಕು. ಪಾಸಿಟಿವ್‌ ಬಂದರೆ ಕೋವಿಡ್‌ ಕೇರ್‌ ಸೆಂಟರ್‌ಗೆ ಸೇರಿಸಬೇಕು. ಪಾಸಿಟಿವ್‌ ಇಲ್ಲದಿದ್ದಲ್ಲಿ ಕಳೆದ ವರ್ಷದಂತೆ ಯಾವುದಾದರೂ ಹಾಸ್ಟೆಲ್‌ನಲ್ಲಿ ವಾಸಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಸಮಾಜ ಸೇವಕ ಲಕ್ಷ್ಮಿಕಾಂತ ತಿಳಿಸಿದ್ದಾರೆ. 

ನಾನು ಅಥಣಿಯಿಂದ ಬಂದಿದ್ದೇನೆ ಸಾರ್‌. ಇಲ್ಲೇ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಕೊರೋನಾದಿಂದಾಗಿ ಅದು ಬಂದ್‌ ಆಗಿದೆ. ಊರಿಗೆ ಹೋಗಲು ಸಾಧ್ಯವಾಗದೆ ಇಲ್ಲೇ ಉಳಿದಿದ್ದೇನೆ ಎಂದು ಕಾರ್ಮಿಕ ಫಕ್ಕೀರಪ್ಪ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona