ಸರ್ಕಾರದ ಮೀಸಲಾತಿ ಘೋಷಣೆಗೆ ಯಾವುದೇ ಮಾನ್ಯತೆ ಇಲ್ಲ : ತನ್ವೀರ್‌ಸೇಠ್
ಚುನಾವಣೆ ಸಂದರ್ಭದಲ್ಲಿ ಸರ್ಕಾರ ಮಾಡಿರುವ ಮೀಸಲಾತಿ ಘೋಷಣೆಗೆ ಯಾವುದೇ ಮಾನ್ಯತೆ ಇಲ್ಲ ಎಂದು ಶಾಸಕ ತನ್ವೀರ್‌ಸೇಠ್ ತಿಳಿಸಿದರು.
ಮೈಸೂರು : ಚುನಾವಣೆ ಸಂದರ್ಭದಲ್ಲಿ ಸರ್ಕಾರ ಮಾಡಿರುವ ಮೀಸಲಾತಿ ಘೋಷಣೆಗೆ ಯಾವುದೇ ಮಾನ್ಯತೆ ಇಲ್ಲ ಎಂದು ಶಾಸಕ ತನ್ವೀರ್‌ಸೇಠ್ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ 2ಬಿ ಮೀಸಲಾತಿ ರದ್ದು ಪಡಿಸಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸಂವಿಧಾನದ ಅಡಿಯಲ್ಲಿ ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗಬೇಕಿರುವುದು ಸರ್ಕಾರದ ಕೆಲಸ. ಈಗ ಮೀಸಲಾತಿ ರದ್ದು ಮಾಡಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರಿಗೆ ಅವಕಾಶ ಮಾಡಿಕೊಡುತ್ತೇನೆ ಎಂದಿದ್ದಾರೆ. ಆದರೆ ಈ ಘೋಷಣೆಗೆ ಯಾವುದೇ ಮಾನ್ಯತೆ ಇಲ್ಲ ಎಂದರು.
ಸರ್ಕಾರದ ಅವಧಿ 6 ತಿಂಗಳು ಇರುವಾಗ ಮಾನ್ಯತೆ ಇರುತಿತ್ತು. ಆದರೆ ಚುನಾವಣೆ ವೇಳೆ ಮಾಡಿದ ಘೋಷಣೆಗೆಯಾವುದೇ ಮಾನ್ಯತೆ ಇಲ್ಲ. ನಮ್ಮ ಸರ್ಕಾರ ಬಂದ ನಂತರ ಇದನ್ನು ಸಂಪೂರ್ಣ ರದ್ದು ಮಾಡುತ್ತೇವೆ. ಇವರು ಸೇಡು ತೀರಿಸಿಕೊಳ್ಳಲು ಮಾಡಿದ್ದಾರೆ. ಇವರು ಮುಸ್ಲಿಮರನ್ನು ಎರಡನೇ ದರ್ಜೆ ನಾಗರೀಕರನ್ನಾಗಿ ನೋಡುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಕೇವಲ ಮುಸ್ಲಿಂರಿಗೆ ಮಾತ್ರವಲ್ಲ ದಲಿತರಿಗೂ ಮೋಸ ಮಾಡಿದ್ದಾರೆ ಎಂದು ಅವರು ಟೀಕಿಸಿದರು.
ಜನರಿಗೆ ಮೋಡಿ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಇದಕ್ಕೆ ಜನರು ಮುಂದೆ ತಕ್ಕಪಾಠ ಕಲಿಸುತ್ತಾರೆ. ಇವರ ಜಾತಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಎಲ್ಲರಿಗೂ ಪ್ರಚೋದನೆ ಮಾಡಿಕೊಂಡು ಎಲ್ಲರಿಗೂ ಮೀಸಲಾತಿ ಹೆಚ್ಚು ಮಾಡುತ್ತೇವೆ ಎಂದು ಹಗಲು ಕನಸು ತೋರಿಸುತ್ತಿದ್ದಾರೆ. ರವಿವರ್ಮ ಆಯೋಗದ ವರದಿ ಪ್ರಕಾರ ಮುಸ್ಲಿಂರಿಗೆ ಶೇ. 6ರಷ್ಟುಮೀಸಲಾತಿ ಕೊಡಬೇಕು ಎಂದು ಹೇಳಿತ್ತು. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಅನ್ಯಾಯ ಮಾಡಲಾಗುತ್ತಿದೆ. ಇದು ರಾಜಕಾರಣಕ್ಕೆ ಸಲ್ಲುವಂತದಲ್ಲ ಎಂದರು.
ಚುನಾವಣೆಯಲ್ಲಿ ಯಾರು ಯಾರಿಗೆ ಮತ ಹಾಕುತ್ತಾರೆ ಎಂದು ಹೇಳಬೇಕಿಲ್ಲ. ಭಾವನೆ ತಿಳುವಳಿಕೆ ಎಷ್ಟರ ಮಟ್ಟಿಗಿದೆ ಎಂದು ತಿಳಿಸುತ್ತಿದ್ದಾರೆ. ಭಾರತವನ್ನು ಎಲ್ಲಾ ಜಾತಿ ಜನಾಂಗವನ್ನು ಸೇರಿಸಿ ಕಟ್ಟಬೇಕು. ಇವರು ಕೆಲವು ಸಮುದಾಯವನ್ನು ಭಾರತದ ಸಂಸ್ಕೃತಿಯಿಂದ ದೂರ ಇಡಲಾಗುತ್ತಿದೆ ಎಂದು ಅವರು ಹೇಳಿದರು.
ವರಿಷ್ಠರ ಜೊತೆ ಚರ್ಚಿಸುತ್ತೇನೆ
ಎನ್.ಆರ್. ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಘೋಷಣೆ ವಿಷಯದಲ್ಲಿ ನಾನು ಈ ಹಿಂದೆ ನನ್ನ ಭಾವನೆ ವ್ಯಕ್ತಪಡಿಸಿದೆ. ಈ ವೇಳೆ ಕಾರ್ಯಕರ್ತರು ಚುನಾವಣೆಗೆ ನಿಲ್ಲಲೇಬೇಕು ಎಂದು ಒತ್ತಡ ಹಾಕಿದರು. ಹೈ ಕಮಾಂಡ್ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಈಗ ಹೈ ಕಮಾಂಡ್ ಅಧಿಕೃತವಾಗಿ ನನಗೆ ಟಿಕೆಟ್ ಘೋಷಿಸಿದೆ. ಪಕ್ಷಕ್ಕೆ ಮತ್ತು ಹೈ ಕಮಾಂಡ್‌ಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಇನ್ನು ಏನು ತೀರ್ಮಾನ ತೆಗೆದುಕೊಳ್ಳಬೇಕು ಎಂದು ವರಿಷ್ಠರ ಜೊತೆ ಚರ್ಚಿಸುತ್ತಿದ್ದೇನೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ್ತು ಸಂವಿಧಾನದಲ್ಲಿ ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ಕೊಡಲಾಗಿದೆ. ಅದರ ವಿರುದ್ಧ ಮಾತನಾಡಲು ನಾನ್ಯಾರು? ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೋ, ಅವರಿಗೆ ಅವಕಾಶ ಸಿಕ್ಕರೆ ನಿಲ್ಲಲಿ.
- ತನ್ವೀರ್‌ಸೇಠ್, ಶಾಸಕ