ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮಾಡಲಾಗಿದ್ದ ರಸ್ತೆ ದುರಸ್ತಿಯಲ್ಲಿ ಕಳಪೆ ಕಾಮಾಗಾರಿಯಾಗಿದೆ. ಹೀಗಾಗಿ ಮತ್ತೆ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವಂತೆ ಬಿಬಿಎಂಪಿಗೆ ಅದೇಶಿಸಿದ ರಾಜ್ಯ ಸರ್ಕಾರ  

ಬೆಂಗಳೂರು(ಅ.11): ಕಳಪೆ ಕಾಮಗಾರಿಯಿಂದ ರಾಷ್ಟ್ರ ಮಟ್ಟದಲ್ಲಿ ಹೆಸರಾಗಿದ್ದ ಮೋದಿ ಬಂದು ಹೋದ ರಸ್ತೆ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮಾಡಲಾಗಿದ್ದ ರಸ್ತೆ ದುರಸ್ತಿಯಲ್ಲಿ ಕಳಪೆ ಕಾಮಾಗಾರಿಯಾಗಿದೆ. ಹೀಗಾಗಿ ಮತ್ತೆ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವಂತೆ ರಾಜ್ಯ ಸರ್ಕಾರ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಅದೇಶಿಸಿದೆ. 

ವಿವಿಧ ಕಾಮಗಾರಿಗಳ ಅನುಷ್ಠಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ಜೂನ್‌ನಲ್ಲಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ನಗರದ 14 ಕಿಮೀ ಉದ್ದದ ರಸ್ತೆಯನ್ನು ದುರಸ್ತಿ ಮಾಡಿ ಮರು ಡಾಂಬರೀಕರಣ ಮಾಡಲಾಗಿತ್ತು. ಅದರಲ್ಲಿ ಕೊಮ್ಮಘಟ್ಟ ವ್ಯಾಪ್ತಿಯಲ್ಲಿ ಮಾಡಲಾಗಿದ್ದ ದುರಸ್ತಿ ಕಾಮಗಾರಿ ಪ್ರಧಾನಿ ನಗರಕ್ಕೆ ಬಂದು ಹೋದ ಮರುದಿನವೇ ಕಿತ್ತು ಹೋಗಿತ್ತು. ಕಳಪೆ ಕಾಮಗಾರಿ ಎಂಬ ಆರೋಪ ಕೇಳಿಬಂದಿತ್ತು.

ಪ್ರಧಾನಿ ಮೋದಿ ಸ್ವಾಗತಕ್ಕೆ ಟಾರು ಹಾಕಿದ್ದ ರಸ್ತೆ ಈಗಲೇ ಹಾಳು..!

ಇದೀಗ ಆ ಕಾಮಗಾರಿಗೆ ಸಂಬಂಧಿಸಿದಂತೆ ಗುಣಮಟ್ಟ ಪರಿಶೀಲನೆಗೆ ರಾಜ್ಯ ಸರ್ಕಾರ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿದೆ. ಪ್ರಧಾನಿ ನರೇಂದ್ರ ಮೋದಿ ನಗರಕ್ಕಾಗಮಿಸಿದ ಸಂದರ್ಭದಲ್ಲಿ 23.5 ಕೋಟಿ ರೂ. ವೆಚ್ಚದಲ್ಲಿ 14 ಕಿಮೀ ಉದ್ದದ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು. ಬಳ್ಳಾರಿ ರಸ್ತೆ, ಮೈಸೂರು ರಸ್ತೆ, ಬೆಂಗಳೂರು ವಿವಿ ರಸ್ತೆ, ತುಮಕೂರು ರಸ್ತೆ ಹಾಗೂ ಕೊಮ್ಮಘಟ್ಟ ರಸ್ತೆಯನ್ನು ದುರಸ್ತಿ ಮಾಡಲಾಗಿತ್ತು. ಇದರಲ್ಲಿ ಕೊಮ್ಮಘಟ್ಟ ವ್ಯಾಪ್ತಿಯ ರಸ್ತೆಯಲ್ಲಿ ಗುಂಡಿ ಕಾಣಿಸಿಕೊಂಡಿತ್ತು. ಕಾಮಗಾರಿ ನಡೆದು ನಾಲ್ಕು ತಿಂಗಳಾಗುತ್ತಿದ್ದು, ಕಾಮಗಾರಿ ನಡೆದ ಎರಡೇ ದಿನದಲ್ಲಿ ರಸ್ತೆ ಕಿತ್ತು ಬಂದಿತ್ತು. 

ರಸ್ತೆ ಹಾಳಾದಾಗ ನಗರಾಭಿವೃದ್ಧಿ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ, ಇದೀಗ ಬಿಲ್ ಪಾವತಿ ವೇಳೆ ರಸ್ತೆ ಗುಣಮಟ್ಟ ಪರಿಶೀಲಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಿದೆ. ಖುದ್ದು ಬಿಬಿಎಂಪಿ ಮುಖ್ಯ ಆಯುಕ್ತರೇ ಪರಿಶೀಲಿಸಬೇಕು ಎಂದು ಅದೇಶಿಸಲಾಗಿದೆ. ಜತೆಗೆ ಸಂಬಂಧಪಟ್ಟ ಮುಖ್ಯ ಎಂಜಿನಿಯರ್‌ರಿಂದ ಕಾಮಗಾರಿ ಗುಣಮಟ್ಟ ಪರಿಶೀಲಿಸಬೇಕು. ಹಾಗೆಯೇ ಪ್ರತಿಷ್ಠಿತ ಸಂಸ್ಥೆಯಿಂದ ರಸ್ತೆ ದುರಸ್ತಿ ಕಾಮಗಾರಿಯ ಗುಣಮಟ್ಟ ತಪಾಸಣೆ ನಡೆಸಿ ವರದಿ ನೀಡುವಂತೆ ಬಿಬಿಎಂಪಿ ಅಯುಕ್ತರಿಗೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.