Asianet Suvarna News Asianet Suvarna News

'ತಡೆಯಾಜ್ಞೆ ತೆರವುಗೊಂಡ ಕೂಡಲೇ ಆಲಮಟ್ಟಿ ಡ್ಯಾಂ ಎತ್ತರ ಕಾರ್ಯ ಪ್ರಾರಂಭ'

ಜಲಾಶಯಮಟ್ಟ ಎತ್ತರ ಕುರಿತು ಸಾಧಕ ಬಾಧಕ ಪರಿಶೀಲನೆ| ಆಲಮಟ್ಟಿಗೆ ವಿಧಾನ ಪರಿಷತ್‌ ಸರ್ಕಾರಿ ಭರವಸೆಗಳ ಸಮಿತಿ ಭೇಟಿ| 524 ಮೀಗೆ ಎತ್ತರಿಸುವುದರಿಂದ 100 ಟಿಎಂಸಿ ಹೆಚ್ಚಿನ ನೀರು ಸಂಗ್ರಹ| 6 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ|

Government Officers Visit Almatti Dam in Vijayapura District
Author
Bengaluru, First Published Jan 23, 2020, 10:24 AM IST

ಆಲಮಟ್ಟಿ(ಜ.23): ವಿಧಾನ ಪರಿಷತ್ತಿನ ಸರ್ಕಾರಿ ಭರವಸೆಗಳ ಸಮಿತಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿನ ವಿವಿಧ ಕಾಮಗಾರಿ ಬಾಕಿ ಹಾಗೂ ಆಲಮಟ್ಟಿ ಜಲಾಶಯಮಟ್ಟ ಎತ್ತರಿಸುವ ಯೋಜನೆಗೆ ಸಂಬಂ​ಧಿಸಿದಂತೆ ಸಾಧಕ-ಬಾಧಕ ಪರೀಶೀಲನೆಗೆ ಬುಧುವಾರ ಇಲ್ಲಿಗೆ ಆಗಮಿಸಿ ಅ​ಧಿಕಾರಿಗಳಿಂದ ವಿವಿಧ ಮಾಹಿತಿ ಕಲೆಹಾಕಿತು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಕೆ.ಪಿ.ಕೊಂಡಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಜಲಾಶಯಮಟ್ಟ ಎತ್ತರಕ್ಕೆ ಸಂಬಂಧಿ​ಸಿದಂತೆ ಅವಾರ್ಡ್‌ ಆಗಿದೆ. ಆದರೆ, ಸುಪ್ರೀಂ ಕೋರ್ಟ್‌ನಿಂದ ಬೇರೆ ರಾಜ್ಯದವರು ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವುಗೊಂಡ ಕೂಡಲೇ ಕೆಲಸ ಕಾರ್ಯ ಪ್ರಾರಂಭಿಸಬಹುದಾಗಿದೆ ಎಂಬ ಮಾಹಿತಿ ಸಮಿತಿಗೆ ಇಲ್ಲಿನ ಅ​ಧಿಕಾರಿಗಳು ನೀಡಿದ್ದಾರೆ ಎಂದರು.

ಆಲಮಟ್ಟಿ ಜಲಾಶಯ ಮಟ್ಟ ಎತ್ತರಿಸುವ ಪ್ರಕ್ರಿಯೆ ಕೆಲಸ ಈಗ ಏನಾಗಿದೆ? 

ಡ್ಯಾಂ ಎತ್ತರಗೊಂಡರೆ ಎಷ್ಟು ಎಕರೆ ಭೂಮಿ ಮುಳಗಡೆವಾಗಲಿದೆ, ನೀರಾವರಿ ಸೌಲಭ್ಯ ಇನ್ನೂ ಎಷ್ಟು ಎಕರೆ ಜಮೀನಿಗೆ ಲಭ್ಯವಾಗಲಿದೆ. ಇನ್ನೂ ಎಷ್ಟುಹಣ ವ್ಯಯವಾಗುತ್ತದೆ ಎಂಬುವುದರ ಬಗ್ಗೆ ಸಮಗ್ರ ಮಾಹಿತಿ ಸಮಿತಿ ಪರೀಶಿಲಿಸುತ್ತದೆ. ವಿವಿಧ ಪಕ್ಷಗಳ ಮುಖಂಡರು ಸಮಿತಿಯ ಸದಸ್ಯರಾಗಿದ್ದು, ಕುಲಂಕುಷವಾಗಿ ಎಲ್ಲ ವಿವರಗಳನ್ನು ಅ​ಧಿಕಾರಿಗಳಿಂದ ಪಡೆಯಲಾಗುತ್ತಿದೆ ಎಂದರು.

ಲ್ಯಾಂಡ್‌ ಎಕರೆ ಪ್ರದೇಶಗಳಿಗೆ ಈಗಿನ ಕಾಲದ ಬೆಲೆ ನಿಗದಿಯಂತೆ ಹಣ ನೀಡಲು ಸರ್ಕಾರಕ್ಕೆ ಸಮಿತಿ ಸಲಹೆ ನೀಡಲಿದೆ. ಸದ್ಯ ಜಲಾಶಯ ಎತ್ತರ ಮಟ್ಟಎತ್ತರಿಸುವ ಕಾರ್ಯದಲ್ಲಿ ಭೂಮಿ ಕಳೆದುಕೊಂಡವರಿಗೆ ನೀಡಲು ಸುಮಾರು 17 ಸಾವಿರ ಕೋಟಿ ಬೇಕಾಗುತ್ತದೆ. ಆದರೆ, ಡ್ಯಾಂ ಎತ್ತರ ಕಾರ್ಯಕ್ಕೆ ಹೆಚ್ಚಿನ ಪ್ರಮಾಣದ ಹಣ ಖರ್ಚಾಗುವುದಿಲ್ಲ. ಜಲಾಶಯ ಮಟ್ಟಎತ್ತರಗೊಳಿಸುವುದರಿಂದ 524 ಮೀ ಗೆ ಎತ್ತರಿಸುವುದರಿಂದ 100 ಟಿಎಂಸಿ ಹೆಚ್ಚಿನ ನೀರು ಸಂಗ್ರಹವಾಗಲಿದೆ. ಅಲ್ಲದೆ ಸುಮಾರು ಇನ್ನೂ ಐದುವರೆಯಿಂದ ಆರು ಲಕ್ಷ ಎಕರೆ ಪ್ರದೇಶ ನೀರಾವರಿಗೊಳಪಡುತ್ತದೆ. ಈ ಎಲ್ಲ ಅಂಶಗಳನ್ನು ಆದ್ಯತೆ ಮೇಲೆ ತೆಗೆದುಕೊಂಡು ಸರ್ಕಾರಕ್ಕೆ ಸಮಿತಿ ತನ್ನ ಅಭಿಪ್ರಾಯ ತಿಳಿಸಿ ಯತ್ನಿಸುತ್ತದೆ ಎಂದು ಭರವಸೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸದ್ಯ ಜಲಾಶಯ ಗರಿಷ್ಠ ಮಟ್ಟ 519.60 ಮೀ ಇದೆ. ಜಲಾಶಯ ನಿರ್ಮಾಣಕ್ಕೆ 176 ಹಳ್ಳಿಗಳು ಮುಳಗಡೆಯಾಗಿವೆ. ಮತ್ತೆ ಇದೀಗ ಡ್ಯಾಂ ಎತ್ತರಿಸುವುದರಿಂದ ಮೊದಲಿನ ಹಳ್ಳಗಳೇ ಭಾಗಶಃ ಪುನಃ ಮುಳಗಡೆಯಾಗಲಿವೆ. ಈ ಗ್ರಾಮಗಳ ಜನ ಮತ್ತೇ ಸಂಪೂರ್ಣ ಭೂಮಿ, ಮನೆ, ಮಠ ಕಳೆದುಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಹೊಸ ಕಾನೂನಿನ ಪ್ರಕಾರ ಲ್ಯಾಂಡ್‌ ಎಕರೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಹೊಸ ಪುನರ್‌ ವಸತಿ ಒದಗಿಸುವ ಬಗ್ಗೆ ಕಾನೂನಿನ ಪ್ರಕಾರವೇ ಪುನರ್‌ ವಸತಿ ಸೌಲಭ್ಯ ತಲುಪಿಸಲು ಚಿಂತಿಸಲಾಗುತ್ತದೆ. ಭೂಮಿ ಕಳೆದು ಕೊಂಡರು ಅಣ್ಣ ತಮ್ಮಂದಿರಿಗೆ, ಮುಂದಿನ ಪಿಳಿಗೆಗೆ ಅನಕೂಲವಾಗುತ್ತದೆಂಬ ತ್ಯಾಗ ಮನೋಭಾವ ರೈತರಲ್ಲಿದೆ. ಆ ಕಾರಣ ಭೂಮಿ ಕಳೆದುಕೊಂಡ ನಿರಾಶ್ರೀತರಿಗೆ ಸಕಲ ಮೂಲ ಸೌಲಭ್ಯ ಶಾಶ್ವತ ಒದಗಿಸಿ ಕೊಡಲು ಸರ್ಕಾರಕ್ಕೆ ಸಮಿತಿ ಸಲಹೆ ನೀಡುತ್ತದೆ ಎಂದರು.

ಲ್ಯಾಂಡ್‌ ಎಕರೆಗೆ ಬೆಲೆ ನಿಗದಿ ಸ್ಪಷ್ಟತೆಗೊಳಿಸಬೇಕು. ಜಲಾಶಯದ ನೀರು ಬಳಕೆ ವಿಷಯದಲ್ಲಿ ಸಾಕಷ್ಠುಗೊಂದಲ-ತಾರತಮ್ಯವಿದೆ. ನಮ್ಮ ರಾಜ್ಯಕ್ಕೆ ಕೃಷ್ಣೆಯ ನೀರಿನ ಬಳಕೆ ಪ್ರಮಾಣ ಕಡಿಮೆ ಇದೆ. ಆಂಧ್ರಪ್ರದೇಶಕ್ಕೆ ಹೆಚ್ಚಿಗೆ ಇದೆ. ಇದರಿಂದ ನೆರೆಯ ರಾಜ್ಯದವರಿಗೆ ಹೆಚ್ಚಿನ ಅನಕೂಲವಾಗಿದೆ. ಈ ಭಾಗದ ತ್ಯಾಗಮಯಿ ಅನ್ನದಾತರಿಗೆ ಅನ್ಯಾಯ ಎಸಗಿ ಸಂಕಷ್ಟದ ಸರಮಾಲೆಗೆ ತಳ್ಳುವಂತಹ ರೀತಿ ನೀತಿ ಅನುಸರಿಸಲಾಗುತ್ತಿರುವುದು ಖಂಡನೀಯ ಎಂದು ಅಸಮಾಧಾನದ ಮಾತು ಸಮಿತಿ ಮುಂದೆ ವ್ಯಕ್ತವಾಯಿತು.

ಸಮಿತಿಯ ಸದಸ್ಯ ಬಸವರಾಜ ಹೊರಟ್ಟಿ, ಡಾ.ತೇಜಶ್ವಿನಿಗೌಡ, ಕೆ.ಪಿ.ಶ್ರೀಕಂಠೇಗೌಡ, ಎಂ.ಎ.ವೇಣುಗೋಪಾಲ, ಕೆಬಿಜೆಎನ್‌ಎಲ್‌ ವ್ಯವಸ್ಥಾಪಕ ಎನ್‌.ಜಯರಾಮ, ಮುಖ್ಯ ಅಭಿಯಂತರ ಆರ್‌.ಪಿ.ಕುಲಕರ್ಣಿ ಇತರರು ಇದ್ದರು.
 

Follow Us:
Download App:
  • android
  • ios