ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ(ಮೇ.14): ಕೊರೋನಾ ಸಂಕಷ್ಟದ ಸಮಯದಲ್ಲಿ ಗ್ರಾಮೀಣ ಭಾಗದ ಸೋಂಕಿತರ ಬದುಕಿನ ‘ಆಶಾಕಿರಣ’ವಾಗಿರುವ ‘ಆಶಾ ಕಾರ್ಯಕರ್ತೆಯರು’ ಆರೋಗ್ಯ ಸುರಕ್ಷತಾ ಸೌಲಭ್ಯಗಳ ಕೊರತೆಯಿಂದಾಗಿ ಸಾಲುಸಾಲಾಗಿ ಸೋಂಕಿಗೆ ಬಲಿಯಾಗುತ್ತಿದ್ದಾರೆ!

ಕಳೆದ ಹದಿನೈದು ದಿನಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಆಶಾಗಳಿಗೆ ಸೋಂಕು ತಗುಲಿದೆ. ಪ್ರತಿ ಜಿಲ್ಲೆಯಲ್ಲಿ 40ರಿಂದ 50 ಕಾರ್ಯಕರ್ತೆಯರಿಗೆ ಸೋಂಕು ಹಬ್ಬಿದ್ದು, ಚಿಕಿತ್ಸೆ ಫಲಿಸದೇ ಐವರು ಮೃತಪಟ್ಟಿದ್ದಾರೆ. ಮೊದಲ ಅಲೆಯಲ್ಲಿ 12 ಕಾರ್ಯಕರ್ತೆಯರು ಕೊರೋನಾಗೆ ಬಲಿಯಾಗಿದ್ದು, ಈವರೆಗೆ ಒಬ್ಬರಿಗೆ ಮಾತ್ರ ಪರಿಹಾರ ಲಭಿಸಿದೆ. ಉಳಿದ 11 ಕುಟುಂಬಗಳು ಪರಿಹಾರಕ್ಕಾಗಿ ಕಚೇರಿಗಳನ್ನು ಅಲೆಯುತ್ತಿವೆ.

"

ಸಾವಿನೊಂದಿಗೆ ಸರಸ:

ಸದ್ಯ ರಾಜ್ಯದಲ್ಲಿ 42,000 ಆಶಾ ಕಾರ್ಯಕರ್ತೆಯರಿದ್ದು, ಕೊರೋನಾ ನಿಯಂತ್ರಣಕ್ಕಾಗಿ ರಚಿಸಲಾಗಿರುವ ‘ಗ್ರಾಮೀಣ ಕಾರ್ಯಪಡೆ’ಯಲ್ಲಿ ಇವರೇ ಮುಂಚೂಣಿ ವಾರಿಯರ್ಸ್‌. ನಿತ್ಯ ಆಯಾ ಗ್ರಾಮಕ್ಕೆ ಬರುವವರ ಮಾಹಿತಿ, ಅವರ ಸ್ವಾ್ಯಬ್‌ ಟೆಸ್ಟ್‌, ವ್ಯಾಕ್ಸಿನ್‌ ಹಾಕಿಸುವುದು, ಸೋಂಕಿತರಿಗೆ ಚಿಕಿತ್ಸೆ ಕೊಡಿಸುವುದು, ಹೋಮ್‌ ಐಸೋಲೇಷನ್‌ ಆದವರಿಗೆ ಔಷಧಿ ಪೂರೈಕೆ ಮಾಡುವ ಜತೆಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ, ಮನೆಗಳ ಸರ್ವೇ ವರದಿ ಒಪ್ಪಿಸುವುದು ಇವರ ನಿತ್ಯದ ಕಾಯಕ.

ಒಂದು ಸಾವಿರ ‘ಆಶಾ’ಗಳಿಗೆ ಸೋಂಕು, ಐವರ ಸಾವು: ಸಂಕಷ್ಟದಲ್ಲಿ ಕೊರೋನಾ ವಾರಿಯರ್ಸ್‌

ಒಂದು ಅಂದಾಜಿನ ಪ್ರಕಾರ ನಿತ್ಯ ಒಬ್ಬ ಕಾರ್ಯಕರ್ತೆ ಕನಿಷ್ಠ ಆರೇಳು ಸೋಂಕಿತರನ್ನು ಭೇಟಿಯಾಗಬೇಕು. ಆಕ್ಸಿಮೀಟರ್‌ನಿಂದ ಅವರ ಆಕ್ಸಿಜನ್‌ ಪ್ರಮಾಣ ದಾಖಲಿಸಬೇಕು. ಇವರ ಕೈಗೆ ಆಕ್ಸಿಮೀಟರ್‌ ಕೊಟ್ಟಿರುವ ಸರ್ಕಾರ, ಕನಿಷ್ಠ ಸ್ಯಾನಿಟೈಸರ್‌ ಕೂಡ ಕೊಟ್ಟಿಲ್ಲ. ಸೋಂಕಿತರ ಸಂಪರ್ಕದಿಂದ ಇವರಿಗೂ ಸೋಂಕು ತಗಲುವ ಅಪಾಯಗಳಿವೆ.

ಪೋತ್ಸಾಹಧನಕ್ಕೆ ಹಿಂದೇಟು

ಮೊದಲ ಅಲೆಯಲ್ಲಿ ತಲಾ 3000 ರು. ವಿಶೇಷ ಪೋತ್ಸಾಹಧನ ನೀಡಿದ್ದ ರಾಜ್ಯ ಸರ್ಕಾರ, 2ನೇ ಅಲೆಯಲ್ಲಿ ಹಿಂದೇಟು ಹಾಕುತ್ತಿದೆ. ಕೇಂದ್ರ ಸರ್ಕಾರ ಪ್ರತಿ ತಿಂಗಳು ಒಂದು ಸಾವಿರ ರು. ನೀಡಿದ್ದರೆ, ರಾಜ್ಯ ಸರ್ಕಾರ ಇಡೀ ವರ್ಷಕ್ಕೆ ಮೂರು ಸಾವಿರ ರು. ಕೊಟ್ಟಿತ್ತು. ಈಗ ಅದನ್ನು ನೀಡಲು ಹಿಂದೆಮುಂದೆ ನೋಡುತ್ತಿದೆ.

ಗ್ರಾಮೀಣ ಸೇವೆಯಲ್ಲಿರುವ ವೈದ್ಯರ ಸಂಬಳವನ್ನು 70 ಸಾರಕ್ಕೆ ಏರಿಸಿರುವ ರಾಜ್ಯ ಸರ್ಕಾರ, ಆಶಾ ಕಾರ್ಯಕರ್ತರ . 12 ಸಾವಿರ ಗೌರವಧನ, ಆಶಾ ಕ್ಷೇಮಾಭಿವೃದ್ಧಿ ನಿಧಿ, ಉಚಿತ ವೈದ್ಯಕೀಯ ಚಿಕಿತ್ಸೆಯ ಬೇಡಿಕೆಗಳನ್ನು ಕಣ್ಣೆತ್ತಿಯೂ ನೋಡಿಲ್ಲ ಎನ್ನುವುದು ನಿಜಕ್ಕೂ ವಿಪರ್ಯಾಸ ಎಂದು ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona