Asianet Suvarna News Asianet Suvarna News

ಮದ್ಯ ಸಾಗಣೆಗೆ ಸರ್ಕಾರಿ ಆ್ಯಂಬುಲೆನ್ಸ್‌ ಬಳಸಿದ ಭೂಪರು!

ಆರೋಗ್ಯ ಇಲಾಖೆ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ಅಂದರ್‌| ಪ್ರಕರಣದಲ್ಲಿ 69 ಸಾವಿರ ರು. ಮೌಲ್ಯದ ಮದ್ಯದ ಪ್ಯಾಕೆಟ್‌ ವಶ| 90 ರು. ಬೆಲೆಯ ಮದ್ಯದ ಪೌಚ್‌ಗಳು 500 ರು.ಗೆ ಮಾರಾಟ| ಈ ಸಂಬಂಧ ಚಿತ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು|

Government ambulance use for alcohol transport in Chitradurga
Author
Bengaluru, First Published Apr 22, 2020, 2:21 PM IST

ಚಿತ್ರದುರ್ಗ(ಏ.22):  ರೋಗಿಗಳ ತುರ್ತು ಸೇವೆಗಾಗಿ ಸರ್ಕಾರ ನೀಡಿರುವ ಆ್ಯಂಬುಲೆನ್ಸ್‌ ಮೂಲಕವೇ ಮದ್ಯ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಭೇದಿಸಿರುವ ಚಿತ್ರಹಳ್ಳಿ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ 69 ಸಾವಿರ ರು. ಮೌಲ್ಯದ ಮದ್ಯದ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹೊಳಲ್ಕೆರೆ ತಾಲೂಕಿನ ಹೊರಕೆರೆದೇವರಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್‌ ಚಾಲಕ ಸುಭಾನ ಹಾಗೂ ಲ್ಯಾಬ್‌ ಟೆಕ್ನೀಶಿಯನ್‌ ಸಂತೋಷ್‌ ಚಳ್ಳಕೆರೆ ತಾಲೂಕಿನ ಉಳ್ಳಾರ್ತಿ ಗ್ರಾಮದ ನರಸಿಂಹರಾಜು ಎಂಬ ವ್ಯಕ್ತಿಗೆ ಸೇರಿದ ಬಾರ್‌ನಿಂದ ಮದ್ಯ ತುಂಬಿಸಿಕೊಂಡು ಬಂದು ಖಾಸಗಿ ಓಮ್ನಿಗಳಿಗೆ ವರ್ಗಾಯಿಸಿ ಬೇರೆ ಬೇರೆ ಕಡೆಗಳಿಗೆ ಸಾಗಾಟ ಮಾಡುತ್ತಿದ್ದರು.

ಕರ್ನಾಟಕದಲ್ಲಿ ವಾರದಲ್ಲಿ ಎರಡು ದಿನ ಮದ್ಯ ಮಾರಾಟ..?

ಖಚಿತ ಮಾಹಿತಿಯನ್ನಾಧರಿಸಿ ಆ್ಯಂಬುಲೆನ್ಸ್‌ ಬೆನ್ನಟ್ಟಿದ ಚಿತ್ರಹಳ್ಳಿ ಪೊಲೀಸರು ಮಲ್ಲಾಡಿಹಳ್ಳಿ ಬಳಿ ಆ್ಯಂಬುಲೆನ್ಸ್‌ ನಿಂದ ಮಾರುತಿ ಓಮ್ನಿಗೆ ಮದ್ಯದ ಪ್ಯಾಕೆಟ್‌ಗಳನ್ನು ಬದಲಾಯಿಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ಈ ವೇಳೆ ಖಾಸಗಿ ಮಾರುತಿ ಓಮ್ನಿ ಸೇರಿದಂತೆ ಓಮ್ನಿಯಲ್ಲಿದ್ದ ಮತ್ತಿಬ್ಬರು ಆರೋಪಿಗಳಾದ ಜೀವನ್‌ ಮತ್ತು ಗಿರೀಶ್‌ ಎಂಬುವರನ್ನು ಬಂಧಿಸಲಾಗಿದೆ. ನಾಲ್ಕು ಮಂದಿ ಆರೋಪಿಗಳ ವಿಚಾರಣೆ ಮುಂದುವರಿದಿದೆ.

180 ಎಂಎಲ್‌ ನ 48 ಬ್ಯಾಗ್‌ಪೈಪರ್‌ ಡಿಲಕ್ಸ್‌ ವಿಸ್ಕಿ ಪೌಚ್‌ಗಳು ಇರುವ 14 ಬಾಕ್ಸ್‌ಗಳು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿದೆ. 90 ರು. ಬೆಲೆಬಾಳುವ ಮದ್ಯದ ಪೌಚ್‌ ಗಳನ್ನು 500 ರು.ಗೆ ಮಾರಾಟ ಮಾಡಲಾಗುತ್ತಿತ್ತು. ಈ ಸಂಬಂಧ ಚಿತ್ರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡೂ ವಾಹನಗಳ ವಶಕ್ಕೆ ಪಡೆಯಲಾಗಿದೆ.

Follow Us:
Download App:
  • android
  • ios