ರಾಜ್ಯ ಸರ್ಕಾರದಿಂದ ಐದು ರಾಷ್ಟ್ರೀಯ ಸ್ಕೇಟರ್‌ಗಳನ್ನು ದತ್ತು ಪಡೆದು ಪ್ಯಾರಿಸ್‌ ಒಲಿಂಪಿಕ್ಸ್‌ವರೆಗೆ ಭಾಗವಹಿಸಲು ಅವರಿಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರು (ಡಿ.12): ರಾಜ್ಯ ಸರ್ಕಾರದಿಂದ ಐದು ರಾಷ್ಟ್ರೀಯ ಸ್ಕೇಟರ್‌ಗಳನ್ನು ದತ್ತು ಪಡೆದು ಪ್ಯಾರಿಸ್‌ ಒಲಿಂಪಿಕ್ಸ್‌ವರೆಗೆ ಭಾಗವಹಿಸಲು ಅವರಿಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಿಬಿಎಂಪಿ ಹಾಗೂ ಕರ್ನಾಟಕ ರೋಲರ್‌ ಸ್ಕೇಟಿಂಗ್‌ ಅಸೋಸಿಯೇಶನ್‌ ಸಹಯೋಗದಲ್ಲಿ ಬಸವನಗುಡಿ ವಿದ್ಯಾಪೀಠ ವಾರ್ಡ್‌ನಲ್ಲಿ ನಿರ್ಮಿಸಲಾದ ಕ್ರೀಡಾ ಸಂಕೀರ್ಣ ಉದ್ಘಾಟಿಸಿ, 60ನೇ ರಾಷ್ಟ್ರೀಯ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ ಶಿಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ರೀಡೆಯಲ್ಲಿ ಸಾಧನೆಗೆ ಹುಮ್ಮಸ್ಸು ಮುಖ್ಯ. ಅದಕ್ಕಾಗಿಯೆ ನರೇಂದ್ರ ಮೋದಿಯವರು ಕ್ರೀಡೆಗೆ ಮಹತ್ವ ನೀಡಿದ್ದು, ಖೇಲೋ ಇಂಡಿಯಾ, ಫಿಟ್‌ ಇಂಡಿಯಾ, ಒಲಿಂಪಿಕ್ಸ್‌ಗಾಗಿ ಜೀತೊ ಇಂಡಿಯಾ ಘೋಷಣೆಗಳಡಿ ಯೋಜನೆ ರೂಪಿಸಿದ್ದಾರೆ. ಅದರಂತೆ ರಾಜ್ಯದಲ್ಲಿಯೂ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ದೇಶದಲ್ಲೆ ಉತ್ಕೃಷ್ಟವಾದ ಕ್ರೀಡಾ ಸಂಕೀರ್ಣವನ್ನು ಬಸವನಗುಡಿಯಲ್ಲಿ ರೂಪಿಸಲಾಗಿದೆ. ರಾಜ್ಯದಿಂದ ಕ್ರೀಡಾಪಟುಗಳನ್ನು ದತ್ತು ಪಡೆದು ಪ್ರೋತ್ಸಾಹ ನೀಡಲಾಗುತ್ತದೆ. ಅದರಂತೆ ಐದು ರಾಷ್ಟ್ರೀಯ ಸ್ಕೇಟಿಂಗ್‌ ಚಾಂಪಿಯನ್‌ಗಳನ್ನು ದತ್ತು ಪಡೆದು ಪ್ಯಾರಿಸ್‌ ಒಲಿಪಿಂಕ್‌ವರೆಗೆ ಎಲ್ಲ ರೀತಿಯ ಸಹಕಾರ, ಪ್ರೋತ್ಸಾಹ ನೀಡಲಾಗುವುದು ಎಂದರು.

ಅವಧಿಪೂರ್ವ ಚುನಾವಣೆ ಇಲ್ಲ, ಅಧಿಕಾರ ಪೂರೈಸುತ್ತೇವೆ: ಸಿಎಂ ಬೊಮ್ಮಾಯಿ

ಸ್ಕೇಟಿಂಗ್‌ನಲ್ಲಿ ಗ್ರಾಮೀಣ ಮಟ್ಟದ ಪ್ರತಿಭೆಗಳು ಹೊರಹೊಮ್ಮುತ್ತಿರುವುದು ಶ್ಲಾಘನೀಯ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಗುರಿಯಿಟ್ಟುಕೊಂಡು ಇಲ್ಲಿಗೆ ಆಗಮಿಸಿ ತಾಲೀಮು ನಡೆಸಿ, 60ನೇ ರಾಷ್ಟ್ರೀಯ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಗೆಲುವು ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಂದಿನ ಪ್ರಯತ್ನದಲ್ಲಿ ಇನ್ನಷ್ಟು ಉತ್ತಮವಾಗಿ ಪ್ರದರ್ಶನ ನೀಡಿ ಎಂದು ಕರೆಕೊಟ್ಟರು. ಕಂದಾಯ ಸಚಿವ ಆರ್‌.ಅಶೋಕ್‌, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಉಪಸ್ಥಿತರಿದ್ದರು.

ರಾಜ್ಯ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ: ಭಾರಿ ಕುತೂಹಲ

ರಾಷ್ಟ್ರೀಯ ಸ್ಕೇಟಿಂಗ್‌ ಆರಂಭ: ರಾಷ್ಟ್ರೀಯ ರೋಲರ್‌ ಸ್ಕೇಟಿಂಗ್‌ ಚಾಂಪಿಯನ್‌ ಶಿಪ್‌ ಆರಂಭವಾಗಿದ್ದು, ಬೆಂಗಳೂರು ಮತ್ತು ತುಮಕೂರಿನಲ್ಲಿ ಸ್ಪರ್ಧೆಗಳು ನಡೆಯಲಿವೆ. ಕರ್ನಾಟಕ ಸೇರಿದಂತೆ ಒಟ್ಟು 29 ರಾಜ್ಯಗಳಿಂದ 3,912 ಸ್ಕೇಟಿಂಗ್‌ ಪಟುಗಳು ಸ್ಪರ್ಧಿಸಲು ಆಗಮಿಸಿದ್ದಾರೆ. ಇದರಲ್ಲಿ 2,214 ಬಾಲಕಿಯರಿದ್ದು, ಒಟ್ಟೂ11 ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.