ಕರಾವಳಿ ಭಾಗದ ಕುಂಭಮೇಳದ ಯಾತ್ರಿಗಳಿಗೆ ಸಿಹಿ ಸುದ್ದಿ, ಪ್ರಯಾಗ್‌ರಾಜ್‌ಗೆ ಉಡುಪಿಯಿಂದ ರೈಲುಸೇವೆ!
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಕರಾವಳಿ ಭಾಗದಿಂದ ಯಾತ್ರಾರ್ಥಿಗಳಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗುತ್ತಿದೆ. ಫೆಬ್ರವರಿ 17 ರಂದು ಉಡುಪಿಯಿಂದ ಹೊರಡುವ ಈ ರೈಲು ಫೆಬ್ರವರಿ 19 ರಂದು ಪ್ರಯಾಗ್‌ರಾಜ್ ತಲುಪಲಿದೆ.

ಬೆಂಗಳೂರು (ಫೆ.13): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಮುಕ್ತಾಯವಾಗಲು ಇನ್ನೇನು 13 ದಿನಗಳು ಬಾಕಿ ಉಳಿದಿವೆ. ಈವರೆಗೂ ಅಂದಾಜು 45 ಕೋಟಿ ಮಂದಿ ಮಹಾಕುಂಭ ಮೇಳದಲ್ಲಿ ಅಮೃತಸ್ನಾನ ಮಾಡಿದ್ದಾರೆ. 144 ವರ್ಷಕ್ಕೊಮ್ಮೆ ನಡೆಯುವ ಕುಂಭಮೇಳ ಇದು ಎಂದು ಹೇಳಲಾಗುತ್ತಿದ್ದು, ಅದಕ್ಕಾಗಿ ಅಸಂಖ್ಯ ಭಕ್ತರು, ಗಂಗಾ, ಯಮುನಾ, ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಉತ್ತರ ಭಾರತದ ಮಂದಿಗೆ ಪ್ರಯಾಗ್‌ರಾಜ್‌ಗೆ ಹೋಗೋದು ಸುಲಭವಾದರೂ, ದಕ್ಷಿಣ ಭಾರತದ ಮಂದಿಗೆ ಅಷ್ಟು ದೂರದ ಪ್ರಯಾಣ ಮಾಡುವುದು ಸುಲಭವಲ್ಲ. ಇನ್ನು ವಿಮಾನದ ಟಿಕೆಟ್‌ಗಳು ಗಗನಕ್ಕೇರಿವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ರಾಜ್ಯದ ಕರಾವಳಿ ಭಾಗದಿಂದ ಕುಂಭಮೇಳಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾಹಿತಿ ನೀಡಿದ್ದಾರ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದಾರೆ.' ಕರಾವಳಿ ಭಾಗದಿಂದ ಕುಂಭಮೇಳಕ್ಕೆ ತೆರಳುವ ಯಾತ್ರಾರ್ಥಿಗಳ ಗಮನಕ್ಕೆ... ಫೆ.17ನೇ ತಾರೀಖು ಮಧ್ಯಾಹ್ನ 12.30ಗೆ ಉಡುಪಿಯಿಂದ ಹೊರಟ ರೈಲು 19ನೇ ತಾರೀಖಿನಂದು ಬೆಳಿಗ್ಗೆ 6.30ಗಂಟೆಗೆ ಪ್ರಯಾಗ್ ರಾಜ್ ತಲುಪಲಿದೆ. ಹಾಗೂ ಮಾರನೇ ದಿನ 20ನೇ ತಾರೀಖಿನಂದು ಸಂಜೆ 6.30ಗಂಟೆಗೆ ಪ್ರಯಾಗ್ ರಾಜ್ ನಿಂದ ಹೊರಟು 22ರಂದು ಉಡುಪಿ ತಲುಪಲಿದೆ. ಈ ರೈಲಿನಲ್ಲಿ ತೆರಳುವ ಪ್ರಯಾಣಿಕರಿಗೆ ಟಿಕೆಟ್ ವಿವರವನ್ನು ಶೀಘ್ರದಲ್ಲೇ ತಿಳಿಸಲಾಗವುದು. ಪ್ರಯಾಗ್‌ರಾಜ್ ತೆರಳಲಿರುವ ಯಾತ್ರಾರ್ಥಿಗಳು ಸಿದ್ಧತೆಗಳನ್ನು ಮಾಡಿಕೊಳ್ಳಿ. ಗೌರವಾನ್ವಿತ ಕೇಂದ್ರ ರೈಲ್ವೆ ಸಚಿವರ ಮೌಖಿಕ ಸೂಚನೆಯ ಮೇರೆಗೆ ಈ ವಿಚಾರವನ್ನು ತಮಗೆಲ್ಲರಿಗೂ ತಿಳಿಸಲು ಹರ್ಷಿಸುತ್ತೇನೆ' ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನೂ ಸಾವಿರಾರು ಮಂದಿ ಮಹಾಕುಂಭ ಮೇಳಕ್ಕೆ ಹೋಗುವ ಯೋಚನೆಯಲ್ಲಿದ್ದಾರೆ. ಅವರೆಲ್ಲರಿಗೂ ಅನುಕೂಲವಾಗುವಂತೆ ಉಡುಪಿಯಿಂದ ಪ್ರಯಾಗ್‌ರಾಜ್‌ಗೆ ವಿಶೇಷ ರೈಲು ಓಡಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಕೇಸರಿ ಬಟ್ಟೆ ತೊಟ್ಟು ಕುಂಭಮೇಳದಲ್ಲಿ ಕಾಣಿಸಿಕೊಂಡ ಮಿಸ್ ಇಂಡಿಯಾ, ನಟಿ ಯಾರು ಗೊತ್ತಾ?
ಭಾನುವಾರ ನವದೆಹಲಿಯಲ್ಲಿ ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾದ ಶ್ರೀನಿವಾಸ್ ಪೂಜಾರಿ, ಕುಂಭಮೇಳದಲ್ಲಿ ಭಾಗವಹಿಸಲು ತಮ್ಮ ಪ್ರದೇಶದ ಭಕ್ತರು ಉತ್ಸುಕರಾಗಿರುವುದನ್ನು ಗಮನ ಸೆಳೆದಿದ್ದಾರೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದ ಪ್ರಯಾಣಿಕರಿಗಾಗಿ ಕೊಂಕಣ್ ರೈಲ್ವೆ ಮಾರ್ಗದಲ್ಲಿ ಈ ರೈಲು ಓಡುವ ಸಾಧ್ಯತೆ ಇದೆ.
ತಂದೆಯ ಆಸೆ ಈಡೇರಿಸಲು ಕ್ಯಾಲಿಫೋರ್ನಿಯಾದಿಂದ ಮಹಾಕುಂಭಕ್ಕೆ ಬಂದ ಮಕ್ಕಳು
ಹೆಚ್ಚುವರಿಯಾಗಿ, ವಿಭಿನ್ನ ಆರ್ಥಿಕ ಹಿನ್ನೆಲೆಯ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಾಮಾನ್ಯ ಮತ್ತು ಹವಾನಿಯಂತ್ರಣ ಕೋಚ್‌ಗಳನ್ನು ಸೇರಿಸುವಂತೆ ಸಂಸದರು ಮನವಿ ಮಾಡಿದ್ದಾರೆ. ಕರ್ನಾಟಕದ ಸಾವಿರಾರು ಭಕ್ತರು ವಿಶ್ವದ ಅತ್ಯಂತ ಮಹತ್ವದ ಆಧ್ಯಾತ್ಮಿಕ ಸಭೆಗಳಲ್ಲಿ ಒಂದಕ್ಕೆ ಸುಗಮ ಪ್ರಯಾಣವನ್ನು ಎದುರು ನೋಡುತ್ತಿರುವುದರಿಂದ, ರೈಲ್ವೆ ಸಚಿವರ ಭರವಸೆಯನ್ನು ನಿರೀಕ್ಷೆಯಿಂದ ಸ್ವೀಕರಿಸಲಾಗಿದೆ.

