ಬೆಂಗಳೂರು [ಸೆ.14]:  ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಎದುರಿಗಿರುವ ಬೆಂಗಳೂರು ಗಾಲ್ಫ್ ಕ್ಲಬ್‌ನಿಂದ ಬಹು ಎತ್ತರದ ತಡೆ ಪರದೆ ದಾಟಿಕೊಂಡು ಬಂದ ಚೆಂಡೊಂದು ಶುಕ್ರವಾರ ಬೆಳಗ್ಗೆ ಕೃಷ್ಣಾದ ಆವರಣದಲ್ಲಿ ಬಿದ್ದಿದೆ.

ಶಕ್ರವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೃಷ್ಣಾದಲ್ಲಿ ಸಭೆ ನಡೆಸುತ್ತಿದ್ದರು. ಈ ವೇಳೆ ಗಾಲ್ಫ್ ಕ್ಲಬ್‌ನಿಂದ ಚೆಂಡೊಂದು ಬಂದು ಕಚೇರಿಯ ಉದ್ಯಾನ ಪ್ರದೇಶಕ್ಕೆ ಬಿದ್ದಿದೆ. ಅದೃಷ್ಟವಶಾತ್‌ ಯಾವುದೇ ಹಾನಿ ಸಂಭವಿಸಿಲ್ಲ. ಈ ಹಿಂದೆ ಕೂಡ ಹಲವು ಬಾರಿ ಕೃಷ್ಣಾಗೆ ಚೆಂಡು ಬಿದ್ದಿದ್ದು, ಪೊಲೀಸರು ಎಚ್ಚರಿಕೆ ನೀಡಿ ನೋಟಿಸ್‌ ಜಾರಿ ಮಾಡಿದ್ದರು.

ಹೈಗ್ರೌಂಡ್ಸ್‌ ಪೊಲೀಸರು ನೋಟಿಸ್‌ ಜಾರಿ ಮಾಡಿದಾಗ ಬಲೆಯನ್ನು ಇನ್ನಷ್ಟುಎತ್ತರಗೊಳಿಸುವುದಾಗಿ ಗಾಲ್ಫ್ ಮಂಡಳಿ ಹೇಳಿತ್ತಾದರೂ ಚೆಂಡು ಬೀಳುವುದು ಪುನರಾವರ್ತನೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಹೈಗ್ರೌಂಡ್ಸ್‌ ಪೊಲೀಸರು, ಗೃಹ ಕಚೇರಿ ಸೇರಿದಂತೆ ಅಸುಪಾಸಿನ ಸ್ಥಳ ಸೂಕ್ಷ್ಮ ಪ್ರದೇಶವಾಗಿದೆ. ಶುಕ್ರವಾರ ಗೃಹ ಕಚೇರಿಗೆ ಚೆಂಡು ಬಿದ್ದಿರುವ ಬಗ್ಗೆ ನೋಟಿಸ್‌ ಜಾರಿ ಮಾಡಲಾಗುವುದು. ಯಾರಾದರೂ ದೂರು ನೀಡಿದರೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕಳೆದ ಜು.14ರಂದು ಕೃಷ್ಣಾ ಆವರಣದಲ್ಲಿ ನಿಂತಿದ್ದ ಬೆಂಗಳೂರಿನ ಅಂದಿನ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಅವರ ಕಾರಿನ ಗಾಜಿಗೆ ಚೆಂಡು ಬಿದ್ದಿತ್ತು. ಚೆಂಡು ಬಿದ್ದ ರಭಸಕ್ಕೆ ಕಾರಿನ ಮುಂಭಾಗದ ಗಾಜು ಜಖಂ ಆಗಿತ್ತು.

ಮೂರ್ನಾಲ್ಕು ಬಾರಿ ಮುಖ್ಯಮಂತ್ರಿಗಳ ಕಚೇರಿ ಗಾಲ್ಫ್ ಆಡಳಿತ ಮಂಡಳಿಗೆ ಪತ್ರ ಬರೆದು ‘ಗಾಲ್ಫ್ ಕ್ಲಬ್‌ ಮೈದಾನದಿಂದ ಗಾಲ್ಫ್ ಚೆಂಡುಗಳು ಅನೇಕ ಸಂದರ್ಭದಲ್ಲಿ ಪಕ್ಕದ ರಸ್ತೆಗಳಲ್ಲಿ ಮತ್ತು ಕೃಷ್ಣಾ ಆವರಣದಲ್ಲಿ ಬಂದು ಬಿದ್ದಿರುವ ನಿದರ್ಶನಗಳಿವೆ. ಈ ಹಿಂದೆ ಸಾರ್ವಜನಿಕರೊಬ್ಬರಿಗೆ ಚೆಂಡು ಬಿದ್ದು, ಗಾಯವಾಗಿದೆ.

ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ತಾವು ಈ ಬಗ್ಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳ ಬೇಕು. ತಪ್ಪಿದ್ದಲ್ಲಿ ಇದರಿಂದ ಉಂಟಾಗುವ ಪರಿಣಾಮಗಳಿಗೆ ತಾವೇ ಜವಾಬ್ದಾರರೆಂದು’ ಹೇಳಿತ್ತು. ಇಷ್ಟಾದರೂ ಯಾವುದಕ್ಕೂ ಕ್ಯಾರೆ ಎನ್ನದ ಗಾಲ್ಫ್ ಆಡಳಿತ ಮಂಡಳಿ ಸುಮ್ಮನಾಗಿದೆ. ಐಎಎಸ್‌, ಐಪಿಎಸ್‌ ಹಾಗೂ ರಾಜಕಾರಣಿಗಳೇ ಗಾಲ್ಫ್ ಕ್ಲಬ್‌ನ ಸದಸ್ಯರಾಗಿದ್ದಾರೆ. ಹೀಗಾಗಿ ಯಾವುದೇ ಕ್ರಮ ಸಾಧ್ಯವಾಗಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.