ಮೈಸೂರು [ಸೆ.17]:  ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ‘ಯುವ ಸಂಭ್ರಮ’ಕ್ಕೆ ಮಂಗಳವಾರ ಚಾಲನೆ ದೊರೆಯಲಿದ್ದು, 10 ದಿನಗಳ ಕಾಲ ಪ್ರತಿದಿನ ಸಂಜೆ 5.30ಕ್ಕೆ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಉಪವಿಶೇಷಾಧಿಕಾರಿಯಾದ ಎಸ್ಪಿ ಸಿ.ಬಿ.ರಿಷ್ಯಂತ್‌ ಹೇಳಿದರು. 

ಯುವ ಸಂಭ್ರಮದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನಿರೀಕ್ಷೆಗೂ ಮೀರಿ 260 ಕಾಲೇಜಿನ ತಂಡಗಳು ಪ್ರದರ್ಶನ ನೀಡಲು ನೋಂದಾಯಿಸಿಕೊಂಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು, ಯುವಸಂಭ್ರಮವನ್ನು ವಸತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ. ನಟ ಗೋಲ್ಡನ್‌ ಸ್ಟಾರ್‌ ಗಣೇಶ್‌ ಮುಖ್ಯಅತಿಥಿಗಳಾಗಿ ಭಾಗವಹಿಸುವರು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರತಿವರ್ಷ ಯುವಸಂಭ್ರಮದಲ್ಲಿ 162 ಕಾಲೇಜು ತಂಡಗಳು ಭಾಗವಹಿಸಿ ನೃತ್ಯ ಪ್ರದರ್ಶನ ನೀಡುತ್ತಿದ್ದವು ಹಾಗೂ 8 ದಿನ ಕಾರ್ಯಕ್ರಮ ನಡೆಯುತ್ತಿತ್ತು. ಈ ಬಾರಿ 260 ಕಾಲೇಜಿನ ಕಾಲೇಜಿನ ತಂಡ ಭಾಗವಹಿಸುವುದರಿಂದ 10 ದಿನಕ್ಕೆ ವಿಸ್ತರಿಸಲಾಗಿದೆ. ಸಂಜೆ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರತಿದಿನ ಕನಿಷ್ಠ 25 ಕಾಲೇಜಿನ ತಂಡಕ್ಕೆ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ದಸರಾ ಮಹೋತ್ಸವದ ವೇಳೆ ನಡೆಯುವ ಯುವ ದಸರಾವನ್ನು ಖ್ಯಾತ ಬ್ಯಾಂಡ್ಮಿಟನ್‌ ಆಟಗಾರ್ತಿ ಪಿ.ವಿ.ಸಿಂಧು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಪಟ್ಟಿಇನ್ನೂ ಅಂತಿಮವಾಗಿಲ್ಲ ಎಂದರು.