ಯಾದಗಿರಿ[ಆ.04]: ಮಹಾರಾಷ್ಟ್ರದಲ್ಲಿನ ಭಾರೀ ಮಳೆಗೆ ಕೃಷ್ಣಾ ನದಿಯಲ್ಲುಂಟಾಗಿರುವ ಪ್ರವಾಹದಲ್ಲಿ ವ್ಯಕ್ತಿಯೊಬ್ಬ ಜಿಗಿದು ಎಲ್ಲರನ್ನೂ ಗಾಬರಿಗೊಳಿಸಿದ ಘಟನೆ ಶುಕ್ರವಾರ ನಡೆದಿದೆ. ದೇವರ ಹೆಸರು ಹೇಳಿ ಪ್ರವಾಹಕ್ಕೆ ಧುಮುಕಿ ಪವಾಡಸದೃಶ ರೀಯಲ್ಲಿ ಬದುಕಿ ಬಂದಿದ್ದಾನೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಂಥಿಣಿ ಕ್ಷೇತ್ರದ ಸೇತುವೆ ಬಳಿ ಈ ಘಟನೆ ನಡೆದಿದ್ದು, ಶಹಾಪುರ ಮೂಲದ ಹೊಸಕೆರೆ ಗ್ರಾಮದ ಶರಣಪ್ಪ ಹಯ್ಯಾಳ್‌(35) ಈ ಹುಚ್ಚು ಸಾಹಸಕ್ಕೆ ಕೈಹಾಕಿದ ವ್ಯಕ್ತಿ.

‘ಮೌನೇಶ (ದೇವರು) ಕರೆದ..’ ಎಂದು ಹೇಳಿ ಪತ್ನಿ, ಮಕ್ಕಳೆದುರೇ ಸೇತುವೆ ಮೇಲಿಂದ ಕೃಷ್ಣಾ ಪ್ರವಾಹದಲ್ಲಿ ಧುಮುಕಿ, ಕೊಚ್ಚಿಕೊಂಡು ಹೋದ. ಇಲ್ಲಿಗೆ 2 ಕಿ.ಮೀ.ನಷ್ಟು ದೂರದಲ್ಲಿರುವ ವೀರಘಟ್ಟದ ಆದಿ ಮೌನಲಿಂಗೇಶ್ವರ ಸನ್ನಿಧಾನ ಬಳಿ ದಡದಲ್ಲಿದ್ದ ಭಕ್ತರು ಆತನನ್ನು ಕಂಡು ಪ್ರಯಾಸಪಟ್ಟು ರಕ್ಷಿಸಿದ್ದಾರೆ. ಹೀಗೇಕೆ ಮಾಡಿದೆ ಎಂದು ಪ್ರಶ್ನಿಸಿದ್ದಕ್ಕೆ, ‘ಆ ಮೌನೇಶನೇ ನನ್ನನ್ನು ಕರೆದಿದ್ದ’ ಎಂದು ಉತ್ತರಿಸಿದ್ದಾನೆ. ಸಮೀಪದ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗಿದೆ.

ಘಟನೆ ವಿವರ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ತಿಂಥಣಿ ಕ್ಷೇತ್ರಕ್ಕೆ ಭಕ್ತ ಶರಣಪ್ಪ ಕುಟುಂಬ ಸಮೇತನಾಗಿ ಬಂದಿದ್ದ. ಅಲ್ಲಿ ತಾಯಿ, ಪತ್ನಿ ಹಾಗೂ ಮಕ್ಕಳನ್ನು ಬಿಟ್ಟು ಸುಮಾರು 80 ಅಡಿ ಎತ್ತರದ ಸೇತುವೆ ಬಳಿ ತೆರಳಿದ ಆತ ಏಕಾಏಕಿ ಎಲ್ಲರೂ ನೋಡ ನೋಡುತ್ತಿದ್ದಂತೆಯೇ ‘ಮೌನೇಶನೇ ನನ್ನ ಕರೆದಿದ್ದಾನೆ’ ಎಂದು ಹೇಳಿ ನದಿಗೆ ಜಿಗಿದಿದ್ದಾನೆ. ಕೃಷ್ಣಾ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಆತನನ್ನು 2 ಕಿ.ಮೀ. ದೂರದಲ್ಲಿರುವ ವೀರಘಟ್ಟದ ಆದಿ ಮೌನಲಿಂಗೇಶ್ವರ ಸನ್ನಿಧಾನ ಬಳಿ ದಡದಲ್ಲಿದ್ದ ಭಕ್ತರು ಪ್ರಯಾಸಪಟ್ಟು ರಕ್ಷಿಸಿದ್ದಾರೆ.