ರಾಜಧಾನಿಯ ಮೊದಲ ಕಮ್ಯುನಿಟಿ ಮಾಲ್‌ ಮೈಸೂರು ರಸ್ತೆಯ ನಾಯಂಡಹಳ್ಳಿಯಲ್ಲಿ ‘ಗ್ಲೋಬಲ್‌ ಡಿವಿನಿಟಿ ಮಾಲ್‌’ ಶನಿವಾರ ಸಂಜೆ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು. 

ಬೆಂಗಳೂರು (ಜೂ.25): ರಾಜಧಾನಿಯ ಮೊದಲ ಕಮ್ಯುನಿಟಿ ಮಾಲ್‌ ಮೈಸೂರು ರಸ್ತೆಯ ನಾಯಂಡಹಳ್ಳಿಯಲ್ಲಿ ‘ಗ್ಲೋಬಲ್‌ ಡಿವಿನಿಟಿ ಮಾಲ್‌’ ಶನಿವಾರ ಸಂಜೆ ಅದ್ಧೂರಿಯಾಗಿ ಉದ್ಘಾಟನೆಗೊಂಡಿತು. ಮಧ್ಯಮ ಸೇರಿ ಎಲ್ಲಾ ವರ್ಗದವರಿಗೂ ಅನುಕೂಲವಾಗುವ ದೃಷ್ಟಿಯಿಂದ ರೂಪಿಸಲಾದ ಸಮುದಾಯಿಕ ಮಾಲ್‌ ಇದಾಗಿದ್ದು, ಕೈಗೆಟಕುವ ದರದಲ್ಲಿ ವಸ್ತುಗಳು ಸಿಗಲಿವೆ. ಪ್ರತಿಷ್ಠಿತ ಕಂಪನಿಗಳ ಮಳಿಗೆಯಿಂದ ಬಟ್ಟೆ, ದಿನಸಿ, ಡಿಜಿಟಲ್‌ ಮಳಿಗೆ, ಪಿವಿಆರ್‌ ಸಿನಿಮಾ, ಫುಡ್‌ ಕೋರ್ಟ್‌ ಹಾಗೂ ಮಕ್ಕಳಿಗೆ ಪ್ಲೇ ಝೋನ್‌, ಸಿನಿಮಾ ಥಿಯೆಟರ್‌ಗಳಿವೆ. ಲೋಕಾರ್ಪಣೆ ದಿನವೇ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ನೆರೆದು ಮಾಲ್‌ ವೀಕ್ಷಿಸಿ ಸಂಭ್ರಮಿಸಿದರು.

ಉದ್ಘಾಟನೆ ವೇಳೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಬೆಂಗಳೂರಿನಲ್ಲಿ ಅನೇಕ ಮಾಲ್‌ಗಳಿವೆ. ಇದು ಮೊದಲ ಕಮ್ಯುನಿಟಿ ಮಾಲ್‌. ಇಲ್ಲಿ ಮನರಂಜನಾ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಏಳು ಸಿನಿಮಾ ಸ್ಕ್ರೀನ್‌ ಇವೆ. ಜನಸಾಮಾನ್ಯರಿಗೆ ಅನುಕೂಲ ಆಗುವಂತೆ ಈ ಮಾಲ್‌ ಆರಂಭಿಸಲಾಗಿದೆ. ಎರಡೂವರೆ ಲಕ್ಷ ಚದರ ಅಡಿ ಸ್ಥಳದಲ್ಲಿ ಇದನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ ಜನತೆಗೆ ಕಡಿಮೆ ದರದಲ್ಲಿ ಅಗತ್ಯ ವಸ್ತುಗಳು ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು ಎಂದರು.

ಇಟಲಿಯಲ್ಲಿ ಪ್ರಭಾಸ್​ಗಿದೆ ಐಷಾರಾಮಿ ವಿಲ್ಲಾ: ತಿಂಗಳ ಬಾಡಿಗೆ ಕೇಳಿ ಸುಸ್ತಾದ ಫ್ಯಾನ್ಸ್​!

ಇದಕ್ಕೂ ಮುನ್ನ ಮಾತನಾಡಿದ ಕಿಚ್ಚ ಸುದೀಪ್‌, ಮಾಲ್‌ನಲ್ಲಿ ಮನರಂಜನಾ ಕ್ಷೇತ್ರಕ್ಕೆ ಹೆಚ್ಚಿನ ಸ್ಪೇಸ್‌ ನೀಡಿರುವುದು ಉತ್ತಮ. ಗ್ಲೋಬಲ್‌ ಮಾಲ್‌ ಇದೇ ರೀತಿ ಬೆಳೆಯಲಿ ಎಂದು ಹಾರೈಸಿದರು. ನಟ ರವಿಚಂದ್ರನ್‌ ಮಾತನಾಡಿ, ಈ ಮಾಲ್‌ ರೂಪಿಸಿರುವುದರ ಹಿಂದಿನ ಉದ್ದೇಶ ಚೆನ್ನಾಗಿದೆ. ಡಿವಿನಿಟಿ ಎಂಬ ಹೆಸರು ಉತ್ತಮವಾಗಿದೆ. ಎಲ್ಲ ವರ್ಗದವರಿಗೂ ಅವಕಾಶ ಮಾಡಿಕೊಟ್ಟಿರುವುದು ಉತ್ತಮ ಪ್ರಯತ್ನ ಎಂದರು. ಈ ವೇಳೆ ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪೋರ್ಟಬಲ್‌ ಶಾಡೋ ಪ್ಲೇ ಕಿಟ್ಟನ್ನು ಗಣ್ಯರು ಬಿಡುಗಡೆ ಮಾಡಿದರು. ಸಂಸದ ಡಿ.ಕೆ.ಸುರೇಶ್‌, ಗ್ಲೋಬಲ್‌ ಮಾಲ್‌ ನಿರ್ದೇಶಕಿ ಐಶ್ವರ್ಯಾ ಹೆಗ್ಡೆ, ಉಷಾ ಶಿವಕುಮಾರ್‌, ಮಂಜುಳಾ, ಸತ್ವ ಗ್ರೂಪ್‌ ಉಪಾಧ್ಯಕ್ಷ ಮಹೇಶ್‌ ಖೇತಾನ್‌ ಇದ್ದರು.