Asianet Suvarna News Asianet Suvarna News

ಧ್ರುವನಾರಾಯಣ್‌ ಪುತ್ರಗೆ ಟಿಕೆಟ್‌ ನೀಡಿ :ಎಚ್‌. ವಿಶ್ವನಾಥ್‌

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ಆರ್‌. ಧ್ರುವನಾರಾಯಣ್‌ ಅವರ ಪುತ್ರ ದರ್ಶನ್‌ಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಆಗ್ರಹಿಸಿದರು.

Give ticket to Dhruvanarayans son H  Vishwanath snr
Author
First Published Mar 15, 2023, 12:05 PM IST

ಮೈಸೂರು : ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಂಜನಗೂಡು ಕ್ಷೇತ್ರದಲ್ಲಿ ಆರ್‌. ಧ್ರುವನಾರಾಯಣ್‌ ಅವರ ಪುತ್ರ ದರ್ಶನ್‌ಗೆ ಕಾಂಗ್ರೆಸ್‌ ಪಕ್ಷದ ಟಿಕೆಟ್‌ ನೀಡಬೇಕು ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌ ಆಗ್ರಹಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್‌. ಧ್ರುವನಾರಾಯಣ್‌ ಅವರು ಕಾಂಗ್ರೆಸ್‌ ಪಕ್ಷದ ಬಲವರ್ಧನೆಗೆ ತುಂಬಾ ಶ್ರಮಿಸಿದ್ದಾರೆ. ಅವರ ಸಾವಿನ ಸಮಯದಲ್ಲಿ ಅವರ ಮೇಲೆ ಜನರಿಗೆ ಎಷ್ಟುಪ್ರೀತಿ ಅಭಿಮಾನವಿತ್ತು ಎಂಬುದು ವ್ಯಕ್ತವಾಗಿದೆ. ಧ್ರುವನಾರಾಯಣ್‌ ಸರಳ ಸಜ್ಜನ ರಾಜಕಾರಣಿಯಾಗಿದ್ದರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಧ್ರುವನಾರಾಯಣ್‌ ಅವರ ಪತ್ನಿ ಕೂಡಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ನಂಜನಗೂಡು ಕ್ಷೇತ್ರದ ಟಿಕೆಟನ್ನು ಧ್ರುವನಾರಾಯಣ್‌ ಅವರ ಪುತ್ರ ದರ್ಶನ್‌ಗೆ ನೀಡಬೇಕು. ಆ ಮೂಲಕ ಧ್ರುವನಾರಾಯಣ್‌ ಅವರ ಕುಟುಂಬದ ಜೊತೆ ಕಾಂಗ್ರೆಸ್‌ ಪಕ್ಷ ಇದೆ ಎಂಬ ಸಂದೇಶ ರವಾನಿಸಬೇಕು ಎಂದು ಅವರು ತಿಳಿಸಿದರು.

ಪ್ರಸ್ತುತ ರಾಜಕಾರಣದಲ್ಲಿ ರಿಯಲ್‌ ಎಸ್ಟೇಟ್‌ನವರು, ರೌಡಿಶೀಟರ್‌ ಹಿನ್ನೆಲೆಯುಳ್ಳವರು ಹೆಚ್ಚಿದ್ದಾರೆ. ವಕೀಲರು ರಾಜಕೀಯದಲ್ಲಿ ಇರುವುದು ತುಂಬಾ ಕಡಿಮೆ. ಹೀಗಾಗಿ ವಕೀಲರಾಗಿರುವ ದರ್ಶನ್‌ಗೆ ನಂಜನಗೂಡು ಟಿಕೆಟ್‌ ನೀಡಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ಹಾಗೂ ರಾಜ್ಯದ ಹಿರಿಯ ನಾಯಕರು ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

—ಬಿಜೆಪಿ ರಾಜ್ಯ ನಾಯಕರು ಪ್ರಧಾನಿ ಮೋದಿ ಅವರು ಮಂಡ್ಯಕ್ಕೆ ಬಂದಾಗ ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಮೃತಪಟ್ಟಬಗ್ಗೆ ಸೌಜನ್ಯಕ್ಕಾದರೂ ಪ್ರಸ್ತಾಪ ಮಾಡುವಂತೆ ತಿಳಿಸಬಹುದಿತ್ತು. ಆದರೆ, ಅದ್ಯಾವುದೋ ಉರಿಗೌಡ, ನಂಜೇಗೌಡರ ಹೆಸರು ಹೇಳಿಕೊಂಡು ಭಾವನಾತ್ಮಕ ವಿಚಾರ ತಂದು ಮತಬೇಟೆ ಕೆಲಸ ಮಾಡುತ್ತಿದ್ದಾರೆ. ರೌಡಿಶೀಟರ್‌ಗಳನ್ನು ಕರೆದುಕೊಂಡು ಹೋಗಿ ಪ್ರಧಾನಿಯವರ ಮುಂದೆ ನಿಲ್ಲಿಸಿದ್ದಾರೆ.

- ಎಚ್‌. ವಿಶ್ವನಾಥ್‌, ವಿಧಾನಪರಿಷತ್‌ ಸದಸ್ಯ

ಧ್ರುವ ಪುತ್ರಗೆ ನಂಜನಗೂಡು ಕಾಂಗ್ರೆಸ್‌ ಟಿಕೆಟ್‌?

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಬಹುತೇಕ ಅವರ ಪುತ್ರ ದರ್ಶನ್‌ಗೆ ದೊರೆಯುವ ಸಾಧ್ಯತೆಗಳಿವೆ.

ಲಂಡನ್‌ನಲ್ಲಿ ಎಲ್‌ಎಲ್‌ಎಂ ವಿದ್ಯಾಭ್ಯಾಸ ಮುಗಿಸಿ ಬಂದಿರುವ ದರ್ಶನ್‌ ಮೈಸೂರು ಹಾಗೂ ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ. ದರ್ಶನ್‌ ಹಾಗೂ ಅವರ ಕುಟುಂಬ ಆಸಕ್ತಿ ತೋರಿದರೆ ಮೊದಲ ಆದ್ಯತೆಯಾಗಿ ಅವರಿಗೆ ಟಿಕೆಟ್‌ ದೊರೆಯುವ ಸಾಧ್ಯತೆಯಿದೆ. ಒಂದು ವೇಳೆ ಅವರ ಕುಟುಂಬ ಒಪ್ಪದಿದ್ದರೆ ಮಾತ್ರ ಮೊದಲಿನಿಂದಲೂ ಟಿಕೆಟ್‌ಗೆ ಯತ್ನಿಸುತ್ತಿರುವ ಎಚ್‌.ಸಿ.ಮಹದೇವಪ್ಪ ಅವರ ಹೆಸರು ಪರಿಗಣಿಸಬಹುದು ಎಂದು ತಿಳಿದುಬಂದಿದೆ.

ಈ ಹಿಂದೆ ಟಿ.ನರಸೀಪುರ ಕ್ಷೇತ್ರದಿಂದ ತಮ್ಮ ಪುತ್ರ ಸುನೀಲ್‌ ಬೋಸ್‌ ಅವರಿಗೆ ಟಿಕೆಟ್‌ ಕೊಡಿಸಿ ತಾವು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಆಸಕ್ತರಾಗಿದ್ದಾರೆ. ಇದಕ್ಕೆ ಪೂರಕವಾಗಿ ಪ್ರಯತ್ನಗಳನ್ನೂ ನಡೆಸಿದ್ದರು. ಹೀಗಾಗಿ ಕಾಂಗ್ರೆಸ್‌ ಪಕ್ಷವು ಸಹ ನಂಜನಗೂಡು ಸಂಭಾವ್ಯರ ಪಟ್ಟಿಯಲ್ಲಿ ಎಚ್‌.ಸಿ.ಮಹದೇವಪ್ಪ ಹಾಗೂ ಧ್ರುವನಾರಾಯಣ ಇಬ್ಬರ ಹೆಸರನ್ನೂ ಸೇರಿಸಿತ್ತು.

ಇದೀಗ ಧ್ರುವನಾರಾಯಣ ಅವರ ನಿಧನದಿಂದಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿಗರು ದರ್ಶನ್‌ ಅವರಿಗೆ ಟಿಕೆಟ್‌ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಂತದಲ್ಲಿ ಧ್ರುವನಾರಾಯಣ ಪುತ್ರನ ಬದಲಿಗೆ ಎಚ್‌.ಸಿ.ಮಹದೇವಪ್ಪ ಅವರಿಗೆ ಟಿಕೆಟ್‌ ನೀಡಿದರೆ ಪಕ್ಷ ಕಾರ್ಯಕರ್ತರಿಂದಲೇ ಆಕ್ಷೇಪ ವ್ಯಕ್ತವಾಗಬಹುದು. ಅನುಕಂಪದ ಅಲೆಯಲ್ಲಿ ಅನಾಯಾಸವಾಗಿ ಗೆದ್ದು ಬರಬಹುದಾದ ಕ್ಷೇತ್ರವನ್ನು ಕಳೆದುಕೊಳ್ಳಬೇಕಾಗಬಹುದು. ಹೀಗಾಗಿ ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಿಸ್‌್ಕ ತೆಗೆದುಕೊಳ್ಳಬಾರದು ಎಂದು ಈಗಾಗಲೇ ನಾಯಕರು ಅನೌಪಚಾರಿಕ ಮಾತುಕತೆ ನಡೆಸಿ ದರ್ಶನ್‌ ಹೆಸರನ್ನು ಸೂಚಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios