ಗ್ಯಾರಂಟಿಗಿಂತ ಕೊಬ್ಬರಿಗೆ ಬೆಂಬಲ ಬೆಲೆ ನೀಡಿ: ಶಾಂತಕುಮಾರ್
ರಾಜ್ಯ ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿ ಯೋಜನೆಗಳಿಗಿಂತ ಕೊಬ್ಬರಿಗೆ ಬೆಂಬಲ ಬೆಲೆ ನೀಡಿದರೆ ರೈತರು ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ. ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ವಿಂಟಲ್ ಕೊಬ್ಬರಿಗೆ 15 ಸಾವಿರ ರು. ನಿಗದಿ ಮಾಡುತ್ತೇವೆಂದು ನೀಡಿದ್ದ ಭರವಸೆಯನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ತಿಪಟೂರು : ರಾಜ್ಯ ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿ ಯೋಜನೆಗಳಿಗಿಂತ ಕೊಬ್ಬರಿಗೆ ಬೆಂಬಲ ಬೆಲೆ ನೀಡಿದರೆ ರೈತರು ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ. ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ವಿಂಟಲ್ ಕೊಬ್ಬರಿಗೆ 15 ಸಾವಿರ ರು. ನಿಗದಿ ಮಾಡುತ್ತೇವೆಂದು ನೀಡಿದ್ದ ಭರವಸೆಯನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಉಗ್ರಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ನಗರದ ತಮ್ಮ ಗೃಹ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು ಕ್ವಿಂಟಲ್‌ಗೆ 18 ಸಾವಿರವಿದ್ದ ಕೊಬ್ಬರಿ ಬೆಲೆ ಈಗ 7500 ರು.ಗೆ ಇಳಿಕೆ ಕಂಡಿದ್ದು ರೈತರು ಜೀವನ ನಡೆಸುವುದೇ ದುಸ್ತರವಾಗಿದೆ. ಈ ಹಿಂದೆ ನಾನು ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಎಪಿಎಂಸಿಗೆ ಮುತ್ತಿಗೆ, ಟ್ರ್ಯಾಕ್ಟರ್ ಮೆರವಣಿಗೆ ಮೂಲಕ ಪ್ರತಿಭಟನೆ ಹೀಗೆ ಹಲವು ಪ್ರತಿಭಟನೆಗಳನ್ನು ಹಮ್ಮಿಕೊಂಡಿದ್ದರೂ ಅಂದಿನ ಸಚಿವರು ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಿಲ್ಲ. ಇದಕ್ಕೆ ತಕ್ಕ ಪ್ರತಿಫಲವನ್ನು ಸಚಿವರು ಅನುಭವಿಸಿದರು. ಆದ್ದರಿಂದ ಹಾಲಿ ಶಾಸಕರು ಸರ್ಕಾರಕ್ಕೆ ಈ ಬಗ್ಗೆ ಒತ್ತಡ ಹಾಕಬೇಕಿದ್ದು ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಪಟೂರಿಗೆ ಆಗಮಿಸಿದ ಸಂದರ್ಭದಲ್ಲಿ ನಮ್ಮ ಸರ್ಕಾರ ಚುನಾವಣೆಯಲ್ಲಿ ಗೆದ್ದರೆ ಕ್ವಿಂಟಲ್ ಕೊಬ್ಬರಿಗೆ 15 ಸಾವಿರ ರು. ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಸರ್ಕಾರ ರಚನೆಯಾಗಿ ಎರಡು ತಿಂಗಳಾಗುತ್ತ ಬಂದರೂ ಈ ಬಗ್ಗೆ ಚಕಾರವೆತ್ತಿಲ್ಲ. ಕೇವಲ ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಇವುಗಳ ಬದಲು ಕೊಬ್ಬರಿಗೆ ಬೆಂಬಲ ಬೆಲೆಯನ್ನಾದರೂ ಹೆಚ್ಚಿಸಿದ್ದರೆ ರೈತರಿಗೆ ಅನುಕೂಲಕರವಾಗುತ್ತಿತ್ತು. ಎಪಿಎಂಸಿಯಲ್ಲಿ ತೆರೆದಿರುವ ನಫೆಡ್ ಕೇಂದ್ರವನ್ನು ಏಕಾಏಕಿ ಮುಚ್ಚಲಾಗಿದ್ದು ನಫೆಡ್‌ಗೆ ಹಾಕಿದ್ದ ಕೊಬ್ಬರಿಯ ಹಣವೂ ರೈತರ ಖಾತೆಗೆ ಬಂದಿಲ್ಲ. ನಫೆಡ್‌ನಲ್ಲಿ ಹಸಿ ಕೊಬ್ಬರಿ, ಚೂರು ಎಂದು ಒಂದು ಚೀಲಕ್ಕೆ 5 ಕೆ.ಜಿಯಷ್ಟುಕಡಿಮೆ ಮಾಡುತ್ತಿದ್ದಾರೆ. ಆದರೆ ಇದೇ ಕೊಬ್ಬರಿಯನ್ನು ಅಂಗಡಿ ವರ್ತಕರು ನಫೆಡ್‌ಗೆ ಬಿಟ್ಟರೆ ಚಕಾರವೆತ್ತದೆ ತೆಗೆದುಕೊಳ್ಳುತ್ತಿದ್ದು ಇಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟಅಧಿಕಾರಿಗಳ ಗಮನಕ್ಕೆ ತಂದರೂ ಯಾರು ಕ್ರಮಕೈಗೊಳ್ಳುತ್ತಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲದ ಅಧಿಕಾರಿಗಳು, ಜನಪ್ರತಿನಿಧಿಗಳ ಬಗ್ಗೆ ಜನರೇ ಬೇಸರಗೊಂಡಿದ್ದಾರೆ. ರೈತರಿಗೆ ಕೊಬ್ಬರಿಯೇ ಜೀವನಾಧಾರವಾಗಿದ್ದು ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚು ಇತರೆ ಖರ್ಚುವೆಚ್ಚಗಳಿಗೇ ಕೊಬ್ಬರಿಯನ್ನೇ ನಂಬಿಕೊಂಡಿದ್ದಾರೆ. ಹೊರರಾಜ್ಯಗಳಲ್ಲಿ ಕೊಬ್ಬರಿಗೆ ಉತ್ತಮ ಬೆಲೆಯಿದ್ದರೂ, ರೈತರಿಂದ ಖರೀದಿಸುವ ಬೆಲೆ ತುಂಬಾ ಕಡಿಮೆ ಇದೆ. ಹಾಗಾಗಿ ಶಾಸಕರು ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಕೊಬ್ಬರಿ ಬೆಲೆಯನ್ನು 15 ಸಾವಿರಕ್ಕೆ ಹೆಚ್ಚಳ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರೊಡಗೂಡಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಸಿ ಘಟಕದ ಧನಂಜಯ್, ರೈತರಾದ ಮಂಜುನಾಥ್, ನೇತ್ರಾನಂದ್, ತೀರ್ಥಪ್ರಸಾದ್, ಲೋಹಿತ್, ಯೋಗೀಶ್, ಚಂದ್ರಣ್ಣ, ಬಸವರಾಜು ಮತ್ತಿತರರಿದ್ದರು.
ನಿರಂತರವಾಗಿ ನಫೆಡ್ ತೆರೆಯುವುದರಿಂದ ಕೊಬ್ಬರಿ ಬೆಲೆ ಇಳಿಕೆಯಾಗುವುದಿಲ್ಲ. ಕೇಂದ್ರ ಸರ್ಕಾರವೂ ಸಹ ರೈತರಿಂದ ಕೊಬ್ಬರಿ ಕೊಂಡುಕೊಳ್ಳಬೇಕು. ಇದರಿಂದ ರೈತರಿಗೆ ನ್ಯಾಯಯುತ ಬೆಲೆ ಸಿಕ್ಕಿ ನೆಮ್ಮದಿ ಜೀವನ ನಡೆಸುತ್ತಾರೆ. ರಾಜ್ಯ ಸರ್ಕಾರ ಕ್ವಿಂಟಲ್ ಕೊಬ್ಬರಿಗೆ 2 ಸಾವಿರ ರು. ಪೋ›ತ್ಸಾಹ ಧನ ನೀಡಬೇಕು. ಇಲ್ಲವಾದಲ್ಲಿ ತಾಲೂಕು ಜೆಡಿಎಸ್ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವುದು.
ಟಿ.ಎಸ್. ಗುರುಮೂರ್ತಿ ತಾಲೂಕು ಅಧ್ಯಕ್ಷ