ಶಾಸಕ ಅರವಿಂದ ಲಿಂಬಾವಳಿಗೆ ಬಿಜೆಪಿ ಟಿಕೆಟ್ ನೀಡಿ : ಭೋವಿ ಸಮುದಾಯ
ಭೋವಿ ಸಮುದಾಯದ ಹಿರಿಯ ಮುಖಂಡರು, ಬಿಜೆಪಿಯ ರಾಜ್ಯದ ಪ್ರಭಾವಿ ನಾಯಕರಾಗಿರುವ ಮಹದೇವಪುರದ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ಪ್ರಕಟಸದೆ ಇರುವ ಬಿಜೆಪಿ ಧೋರಣೆಯನ್ನು ಖಂಡಿಸಿ ಶುಕ್ರವಾರ ತುಮಕೂರು ಜಿಲ್ಲಾ ಭೋವಿ ಸಮಾಜದ ವತಿಯಿಂದ ಬಿಜೆಪಿ ಎಸ್ಸಿ ಮೋರ್ಚಾ ಮಾಜಿ ಅಧ್ಯಕ್ಷ ಓಂಕಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ತುಮಕೂರು : ಭೋವಿ ಸಮುದಾಯದ ಹಿರಿಯ ಮುಖಂಡರು, ಬಿಜೆಪಿಯ ರಾಜ್ಯದ ಪ್ರಭಾವಿ ನಾಯಕರಾಗಿರುವ ಮಹದೇವಪುರದ ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ಪ್ರಕಟಸದೆ ಇರುವ ಬಿಜೆಪಿ ಧೋರಣೆಯನ್ನು ಖಂಡಿಸಿ ಶುಕ್ರವಾರ ತುಮಕೂರು ಜಿಲ್ಲಾ ಭೋವಿ ಸಮಾಜದ ವತಿಯಿಂದ ಬಿಜೆಪಿ ಎಸ್ಸಿ ಮೋರ್ಚಾ ಮಾಜಿ ಅಧ್ಯಕ್ಷ ಓಂಕಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಟೌನ್‌ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಭೋವಿ ಸಮುದಾಯದ ಮುಖಂಡರು, ಬಿಜೆಪಿ ಪಕ್ಷ ಬಿಜೆಪಿ ದಕ್ಷಿಣ ಭಾರತದಲ್ಲಿ ತಳವೂರಲು ಕಾರಣರಾದ ಭೋವಿ ಸಮಾಜವನ್ನು ಕಡೆಗಣಿಸಿರುವುದು ಸರಿಯಲ್ಲ. ಜನಸಂಘ, ಆರ್‌ಎಸ್‌ಎಸ್‌ನ ಕಟ್ಟಾಳು ಆಗಿರುವ ಅರವಿಂದ ಲಿಂಬಾವಳಿಗೆ ಟಿಕೆಟ್ ಘೋಷಿಸದೆ ಪೆಂಡಿಂಗ್ ಇಟ್ಟಿರುವುದು ಸರಿಯಲ್ಲ. ಹಾಗೆಯೇ ಗೂಳಿಹಟ್ಟಿ ಶೇಖರ್‌ಗೆ ಟಿಕೆಟ್ ನೀಡದೆ ಕಡೆಗಣಿಸಿರುವುದು ಖಂಡನಾರ್ಹ. ಕೂಡಲೇ ಬಿಜೆಪಿ ಹೈಕಮಾಂಡ್ ತಪ್ಪನ್ನು ತಿದ್ದುಕೊಳ್ಳದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಓಂಕಾರ್ ಮಾತನಾಡಿ, ಸಮುದಾಯದ ನಾಯಕರನ್ನು ವ್ಯವಸ್ಥಿತವಾಗಿ ಮಟ್ಟಹಾಕುವ ಕೆಲಸಕ್ಕೆ ಬಿಜೆಪಿಯ ನಾಯಕರು ಕೈಹಾಕಿದ್ದಾರೆ. ಗೂಳಿಹಟ್ಟಿಶೇಖರ್‌ಗೆ ಟಿಕೆಟ್ ತಪ್ಪಿಸಿ ಸಮಾಜಕ್ಕೆ ದ್ರೋಹ ಮಾಡಿದ್ದಾರೆ. ಎಬಿವಿಪಿ ಸಂಘಟನೆಯ ರಾಜ್ಯ, ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಹತ್ತಾರು ವರ್ಷ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿರುವ, ಬಿಜೆಪಿಯ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಏಳು ಬಾರಿ ಯಡಿಯೂರಪ್ಪ, ಅನಂತಕುಮಾರ್ ರವರಂತ ನಾಯಕರೊಂದಿಗೆ ರಾಜ್ಯಾದ್ಯಂತ ಪಕ್ಷ ಸಂಘಟನೆ ಮಾಡಿ ಪಕ್ಷಕ್ಕಾಗಿ ದಶಕಗಳ ಕಾಲ ಸೇವೆ ಸಲ್ಲಿಸಿ ರಾಜ್ಯದಲ್ಲಿ ಪಕ್ಷ ಸಂಘಟನೆಯ ಪ್ರಮುಖ ಪಾತ್ರ ವಹಿಸಿದ ಪಕ್ಷದ ಕಟ್ಟಾಳು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ರವರಿಗೆ ಟಿಕೆಟ್ ನೀಡದೆ ವಿಳಂಬ ಮಾಡುತ್ತಿರುವುದು ರಾಜ್ಯದ ಭೋವಿ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ನಿವೃತ್ತ ಸಿಪಿಐ ಮುನಿರಾಜು ಮಾತನಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಭೋವಿ ಸಮುದಾಯವನ್ನು ಬಿಜೆಪಿ ಕಡೆಗಣಿಸುತ್ತಿರುವುದು ಸರಿಯಲ್ಲ. ನಮ್ಮ ನಾಯಕರಾದ ಅರವಿಂದ ಲಿಂಬಾವಳಿ ಅವರ ಮೇಲೆ ಯಾವುದೇ ಗುರುತರ ಆರೋಪಗಳಿಲ್ಲ.ಯಾವ ಪ್ರಕರಣಗಳ ತನಿಖೆಯೂ ನಡೆಯುತ್ತಿಲ್ಲ. ಇಂತಹ ವೇಳೆಯಲ್ಲಿ ಅವರಿಗೆ ಟಿಕೇಟ್ ನೀಡಲು ಸತಾಯಿಸುತ್ತಿರುವುದು ಸಮಾಜ ಬಾಂಧವರಿಗೆ ನೋವುಂಟು ಮಾಡಿದೆ ಎಂದರು.
ಪ್ರತಿಭಟನೆಗೂ ಮುನ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಜಿಲ್ಲಾ ಭೋವಿ ಸಂಘದ ವತಿಯಿಂದ ಆಚರಿಸಲಾಯಿತು. ಜಿಲ್ಲಾ ಭೋವಿ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷರಾದ ಗೋವಿಂದರಾಜು, ಹುಲಿಗಪ್ಪ, ತುರುವೇಕೆರೆ ಮಹಾಲಿಂಗಪ್ಪ, ರಮೇಶ್, ಶಿರಾ ಗೋವಿಂದರಾಜು, ವೆಂಕಟೇಶ್,ಕಾಶಿನಾಥ್, ಭೂತೇಶ್ ಮತ್ತಿತರರು ಭಾಗವಹಿಸಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣ ರಾಜ್ಯದ ಪ್ರಭಾರಿಗಳಾಗಿ ಅನೇಕ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಅರವಿಂದ ಲಿಂಬಾವಳಿ ಪ್ರಮುಖ ಪಾತ್ರ ವಹಿಸಿದ್ದರು. ಪಶ್ಚಿಮ ಬಂಗಾಳದ ಚುನಾವಣೆಯಲ್ಲೂ ಪಕ್ಷದ ಪ್ರಭಾರಿಗಳಾಗಿದ್ದರು. ಅನೇಕ ರಾಜ್ಯಗಳಲ್ಲಿ ಪ್ರವಾಸ ಮಾಡಿ ಭೋವಿ ಸಮುದಾಯದ ಸಂಘಟನೆ ಮಾಡುತ್ತಿರುವ ಲಿಂಬಾವಳಿರವನ್ನು ಕಡೆಗಣಿಸಿದರೆ ಪಕ್ಷದಲ್ಲಿರುವ ಭೋವಿ ಸಮಾಜದ ಮುಖಂಡರು ಸಾಮೂಹಿಕ ರಾಜೀನಾಮೆ ನೀಡಲಾಗುವುದು.
ಓಂಕಾರ್ ಮಾಜಿ ಅಧ್ಯಕ್ಷ, ಬಿಜೆಪಿ ಎಸ್ಸಿ ಮೋರ್ಚಾ