ಅಂತರ್ಜಾತಿ ವಿವಾಹ: ಯುವತಿ ಬಳಿ ಪತ್ರ ಬರೆಸಿಕೊಂಡ ಪೋಷಕರು
ತನಗೂ ಕುಟುಂಬಕ್ಕೂ ಸಂಬಂಧವಿಲ್ಲವೆಂದು ಪತ್ರಕ್ಕೆ ಸಹಿ| ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ನಡೆದ ಘಟನೆ| ಜ. 31ರಂದು ಸೋಲೂರು ಗ್ರಾಮದಲ್ಲಿ ನಡೆದಿದ್ದ ನವೀನ್ ಕುಮಾರ್ ಮತ್ತು ಅಶ್ಚಿತ ವಿವಾಹ|
ಮಾಗಡಿ(ಫೆ.26): ಅನ್ಯ ಜಾತಿ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಗಳಿಂದ ಪೋಷಕರು ಜಮೀನು ಹಕ್ಕು ಬಿಡುಗಡೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿರುವ ಘಟನೆಯೊಂದು ನಡೆದಿದೆ. ತಾಲೂಕಿನ ಸೋಲೂರು ಗ್ರಾಮದ ಎಸ್. ಅಶ್ಚಿತ ಹಾಗೂ ಸಿ.ನವೀನ್ ಕುಮಾರ್ ಪ್ರೇಮ ವಿವಾಹವಾದರು. ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ನವೀನ್ ಕುಮಾರ್ ಮತ್ತು ಅಶ್ಚಿತ ವಿವಾಹ ಜ. 31ರಂದು ಸೋಲೂರು ಗ್ರಾಮದಲ್ಲಿ ನಡೆದಿತ್ತು.
ಕಳೆದ ಮಂಗಳವಾರ ಪಟ್ಟಣದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ನೋಂದಣಿ ಮಾಡಿಸಿಕೊಳ್ಳಲು ಎಸ್. ಅಶ್ಚಿತ ಮತ್ತು ಸಿ.ನವೀನ್ ಕುಮಾರ್ ಆಗಮಿಸಿದ ವೇಳೆ ಎಸ್. ಅಶ್ಚಿತ ಚಿಕ್ಕಪ್ಪ ಜಗದೀಶ್ ಪುತ್ರ ಪೃಥ್ವಿ, ಅಣ್ಣನ ಮಗ ಗಿರೀಶ್ ಅವರು ಆಕೆ ರಿಜಿಸ್ಟಾರ್ ಮಾಡಿಸಿಕೊಳ್ಳಲು ನಮ್ಮ ತಕರಾರಿದೆ ಎಂದು ನೋಂದಣಿ ಕಚೇರಿಯ ಅಧಿಕಾರಿಗಳ ಗಮನಕ್ಕೆ ತಂದರು.
ಕುಮಾರಸ್ವಾಮಿಗೆ ಕಾಡುತ್ತಿದೆಯಾ ಆ ಒಂದು ಕೊರಗು? ದೇವಸ್ಥಾನದಲ್ಲಿ ಎಚ್‌ಡಿಕೆ ತಪ್ಪುಕಾಣಿಕೆ ಸಲ್ಲಿಕೆ
ಎಸ್. ಅಶ್ಚಿತ ಜಮೀನು ಹಕ್ಕು ಬಿಡುಗಡೆ ಪತ್ರಕ್ಕೆ ಸಹಿ ಹಾಕಿ ಇನ್ನು ಮುಂದೆ ನಮಗೂ ನಿಮಗೂ ಯಾವುದೇ ಸಂಬಂಧವಿಲ್ಲ ಎಂದು ಪತ್ರ ಬರೆದುಕೊಡಿ ಎಂದು ಕೇಳಿದರು. ಆಗ ಪ್ರೇಮಿಗಳ ಪರ ಹಾಗೂ ಅಶ್ಚಿತ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರು ಸ್ಥಳಕ್ಕೆ ಬಂದು ಸಮಾಧಾನ ಪಡಿಸಿದರು. ಈ ವೇಳೆ ಕರ್ನಾಟಕ ರಣಧೀರ ವೇದಿಕೆ ಅಧ್ಯಕ್ಷ ಕೆ.ಆರ್. ಶಂಕರ್ ಗೌಡ ಮಧ್ಯ ಪ್ರವೇಶಿಸಿ ಜಮೀನು ಹಕ್ಕು ಬಿಡುಗಡೆ ಪತ್ರಕ್ಕೆ ಯುವತಿಯಿಂದ ಸಹಿ ಹಾಕಿಸಿ ಮದುವೆ ನೋಂದಣಿ ಮಾಡಿಸಿದ ಘಟನೆ ನಡೆಯಿತು. ಯುವತಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದು, ಯುವಕ ಬ್ಯಾಂಕ್‌ನಲ್ಲಿ ನೌಕರನಾಗಿದ್ದಾನೆ.
ಕಳೆದ ಐದು ವರ್ಷಗಳಿಂದ ಸಿ.ನವೀನ್ ಕುಮಾರ್‌ನನ್ನು ಪ್ರೀತಿಸಿದ್ದು, ಈಗ ಮದುವೆಯಾಗಿದ್ದೇವೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಲು ಬಂದಾಗ ನಮ್ಮ ಕುಟುಂಬಸ್ಥರು ನಮಗೂ ನಿಮಗೂ ಯಾವುದೇ ಸಂಬಂಧವಿಲ್ಲ ಎಂದು ಪತ್ರ ಬರೆಸಿಕೊಂಡು ಜಮೀನು ಹಕ್ಕು ಬಿಡುಗಡೆ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ ಮುಂದೆ ಯಾವುದೇ ಅನಾಹುತ ಸಂಭವಿಸಿದರೆ ನಮ್ಮ ಕುಟುಂಬದವರೇ ಹೊಣೆಯಾಗುತ್ತಾರೆ ಎಂದು ಅಶ್ಚಿತ ಹೇಳಿದರು.
ಯುವಕ ಸಿ.ನವೀನ್ ಕುಮಾರ್ ಮಾತನಾಡಿ, ಎಸ್.ಅಶ್ಚಿತ ಕುಟುಂಬಸ್ಥರು ಬೇರೆಯವರೊಂದಿಗೆ ಮದುವೆ ಮಾಡಲು ಮುಂದಾದ ವೇಳೆ ಆಕೆ ಆತ್ಮಹತ್ಯೆಗೆ ಮುಂದಾಗಿದ್ದರು. ನಂತರವೂ ಬೇರೆ ಮದುವೆ ಮಾಡಲು ತಯಾರಿ ನಡೆಸುತ್ತಿದ್ದ ವೇಳೆ ಎಸ್.ಅಶ್ಚಿತಳನ್ನು ನಾನು ಕರೆದುಕೊಂಡು ಬಂದು ಮದುವೆಯಾದೆ. ನಮಗೆ ಅಸ್ತಿ ಬೇಕಿಲ್ಲ, ಮುಂದೆ ನಾವು ಈ ಗ್ರಾಮದಲ್ಲಿ ಬದುಕ ಬೇಕೇಂಬ ಆಸೆಯಿದೆ ಎಂದರು.