ದಾವಣಗೆರೆ(ಏ.16): ಫ್ಯಾಂಕ್ರಿಯಾಸ್‌ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಂದೆಗೆ ಮುಂಬೈನಿಂದ ಬರಬೇಕಾದ ಔಷಧಿ ಅಗತ್ಯವಿತ್ತು. ಆದರೆ, ಕೊರೋನಾ ವೈರಸ್‌ ಹಿನ್ನೆಲೆ ಲಾಕ್‌ಡೌನ್‌ನಿಂದಾಗಿ ಔಷಧಿ ಲಭ್ಯವಾಗಿಲ್ಲ. ಕೂಡಲೇ ಈ ಔಷಧಿ ತರಿಸಿಕೊಡುವಂತೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಲೆಕುಂಬಳೂರಿನ ಯುವತಿ ನಿಖಿತಾ ಮುಖ್ಯಮಂತ್ರಿ ಅವರಿಗೆ ವೀಡಿಯೋ ಮೂಲಕ ಮನವಿ ಮಾಡಿದ್ದಾರೆ.

ತಂದೆ ಹನುಮಂತಪ್ಪ ಫ್ಯಾಂಕ್ರಿಯಾಸ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಮಣಿಪಾಲದ ಆಸ್ಪತ್ರೆಯಲ್ಲಿ ಡಿ.25ರಂದು ಥೆರಪಿ ಮಾಡಿಸಿಕೊಂಡಿದ್ದರು. ಎರಡನೇ ಥೆರಪಿ ಮಾ.24ಕ್ಕೆ ಮಾಡಿಸಬೇಕಾಗಿತ್ತು. ಆದರೆ, ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ಚಿಕಿತ್ಸೆ ಸಾಧ್ಯವಾಗಿಲ್ಲ. ಮುಂಬೈನಿಂದ ಬರಬೇಕಾಗಿದ್ದ ಔಷಧಿ ಬಂದಿಲ್ಲ. ಮಣಿಪಾಲ ಸೇರಿದಂತೆ ಇತರೆಡೆಯೂ ಆ ಔಷಧಿ ಸಿಗುತ್ತಿಲ್ಲ.

ಹೊಸದುರ್ಗದಲ್ಲಿದೆ ಪ್ಲೇಗಮ್ಮನ ದೇಗುಲ

ಅಗತ್ಯ ಔಷಧಿ ಕೊರತೆಯಿಂದಾಗಿ ಮಣಿಪಾಲ ಆಸ್ಪತ್ರೆಯ ವೈದ್ಯರೂ ಅಸಹಾಯಕರಾಗಿದ್ದಾರೆ. ಇತ್ತ ತಂದೆ ತೀವ್ರ ನೋವಿನಿಂದ ಬಳಲುತ್ತಿದ್ದು, ಆ ನೋವು, ಸಂಕಟವನ್ನು ನೋಡಲು ಕಷ್ಟವಾಗುತ್ತಿದೆ. ತಂದೆ ಕ್ಯಾನ್ಸರ್‌ ಚಿಕಿತ್ಸೆಗೆ ಅಗತ್ಯವಾದ ಔಷಧಿ ತರಿಸಿಕೊಡುವಂತೆ ಸಿಎಂಗೆ ನಿಖಿತಾ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

ತಂದೆಯಷ್ಟೇ ಅಲ್ಲ, ಅನೇಕ ವಯೋವೃದ್ಧರು, ಅಸಹಾಯಕರು, ವಿವಿಧ ರೋಗಕ್ಕೆ ತುತ್ತಾದವರು ಅಗತ್ಯವಾದ ತುರ್ತು ಔಷಧಿ, ಮಾತ್ರೆಗಳು ಸಕಾಲಕ್ಕೆ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ. ತುರ್ತಾಗಿ ಬೇಕಾದ ಔಷಧಿ, ಮಾತ್ರೆ ತರಿಸಿ, ನೆರವಾಗುವಂತೆ ನಿಖಿತಾ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.