ಜನರ ಆಶೋತ್ತರಗಳನ್ನು ಈಡೇರಿಸದ ಹಾಗೂ ಜನರನ್ನು ದಮನ ಮಾಡುತ್ತಿರುವ ಸರ್ಕಾರವನ್ನು ಕಿತ್ತೊಗೆಯುವುದು ನಮ್ಮ ಹಕ್ಕಾಗಿದೆ ಎಂದು ಸಿಎಫ್‌ಡಿ ರಾಷ್ಟ್ರೀಯ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಹೇಳಿ​ದ​ರು.

ಗದಗ : ನಮ್ಮ ಸತ್ಯಾಗ್ರಹ ಯಾತ್ರೆಗೆ ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸ್ವಾತಂತ್ರ್ಯ ಮತ್ತು ಸಮಾನತೆ ಮೌಲ್ಯಗಳು ಆಧಾರವಾಗಿವೆ. ಜನರ ಆಶೋತ್ತರಗಳನ್ನು ಈಡೇರಿಸದ ಹಾಗೂ ಜನರನ್ನು ದಮನ ಮಾಡುತ್ತಿರುವ ಸರ್ಕಾರವನ್ನು ಕಿತ್ತೊಗೆಯುವುದು ನಮ್ಮ ಹಕ್ಕಾಗಿದೆ ಎಂದು ಸಿಎಫ್‌ಡಿ ರಾಷ್ಟ್ರೀಯ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಹೇಳಿ​ದ​ರು.

ಜನಾಂದೋಲನಗಳ ಮಹಾಮೈತ್ರಿ ಕರ್ನಾಟಕ (ಜೆಎಂಎಂ), ಸಿಟಿಜನ್‌ ಫಾರ್‌ ಡೆಮಾಕ್ರಸಿ (ಸಿಎಫ್‌ಡಿ) ಜನತಂತ್ರ ಪ್ರಯೋಗ ಶಾಲೆ ಸಂಯುಕ್ತ ಆ​ಶ್ರ​ಯಲ್ಲಿ ಹಮ್ಮಿ​ಕೊಂಡ ಸಮಾಜ ಪರಿ​ವ​ರ್ತನ ಸತ್ಯಾ​ಗ್ರಹ ಯಾತ್ರೆಯು ನಗ​ರದ ಮುಳ​ಗುಂದ ನಾಕಾ​ದಿಂದ ಪ್ರಾರಂಭ​ವಾಗಿ ಜಿಲ್ಲಾ​ಡ​ಳಿತ ಭವ​ನ​ಕ್ಕೆ ತೆರಳಿ ಜಿಲ್ಲಾ​ಧಿ​ಕಾ​ರಿ​ಗ​ಳ ಮೂಲಕ ಸರ್ಕಾ​ರಕ್ಕೆ ಮನವಿ ಸಲ್ಲಿಸಿ ನಂತ​ರ ಅವ​ರು ಮಾತ​ನಾ​ಡಿ​ದ​ರು.

ಸರ್ಕಾರ ಮೂರು ಕರಾಳ ಕೃಷಿ ಕಾಯಿದೆಗಳನ್ನು ರದ್ದು ಮಾಡ​ಬೇ​ಕು, ಕನಿಷ್ಠ ಬೆಂಬಲ ಬೆಲೆ ಹಾಗೂ ಖರೀದಿ ನೀತಿಗಳನ್ನು ಕಾಯಿದೆ ಬದ್ಧಗೊಳಿಸಬೇಕು, ವಿದ್ಯುತ್‌ ಮಸೂದೆ -2022 ಕೈಬಿಡಬೇಕು. ಮನರೇಗಾ ಕೆಲಸದ ದಿನಗಳನ್ನು 200 ದಿನಕ್ಕೆ ಹೆಚ್ಚಿಸಿ ಕೂಲಿ .600 ದಿನವಹಿ ಪಾವತಿಸಬೇಕು. ದಲಿತರ ಮೇಲಿನ ಹಲ್ಲೆ ಮತ್ತು ಅಸ್ಪೃಶ್ಯತೆಯ ಆಚರಣೆಯನ್ನು ಕಠೀಣ ಕ್ರಮಗಳಿಂದ ನಿಯಂತ್ರಿಸಬೇಕು. ಭೂಸ್ವಾಧೀನ ಎಂಬುದು ರೈತಾಪಿ ದೃಷ್ಟಿಯಿಂದ ಜೀವವಿರೋಧಿ ಕ್ರಮ. ಕನಿಷ್ಠ ಪಕ್ಷ 2013ರ ಕಾಯಿದೆಗೆ ಬದ್ಧವಾಗಿ ರಾಜ್ಯಸರ್ಕಾರ ತನ್ನ ಭೂಸ್ವಾಧೀನ ಕಾಯಿದೆ ರೂಪಿಸಬೇಕು. ಜನಸಾಮಾನ್ಯರ ಬದುಕನ್ನು ದಿವಾಳಿ ಎಬ್ಬಿಸುತ್ತಿರುವ ನಿರುದ್ಯೋಗ- ಹಣದುಬ್ಬರ ನಿಯಂತ್ರಿಸಬೇಕು. ದಲಿತರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಶಾಲಾ- ಕಾಲೇಜುಗಳಲ್ಲಿ ಸಂವಿಧಾನವನ್ನು ಪಠ್ಯವಾಗಿ ಬೋಧಿಸಬೇಕು. ಸರ್ಕಾರವು ಶಿಕ್ಷಣದ ಖಾಸಗೀಕರಣ ಮತ್ತು ಸಮಾಜದ ಕೋಮುವಾದೀಕರಣವನ್ನು ನಿಲ್ಲಿಸಬೇಕು. ಕಾರ್ಮಿಕ ವಿರೋಧಿ ಕಾರ್ಪೋರೇಟ್‌ ಪರ ಲೇಬರ್‌ ಕೋಡ್‌ಗಳನ್ನು ರದ್ದುಪಡಿಸಬೇಕು ಮತ್ತು ಈಗಾಗಲೇ ರದ್ದುಪಡಿಸಿರುವ ಕಾರ್ಮಿಕ ಕಾಯಿದೆಗಳನ್ನು ಮರುಸ್ಥಾಪಿಸಬೇಕು. ಸಾರ್ವಜನಿಕ ಉದ್ದಿಮೆಗಳ ಮತ್ತು ಸಾರ್ವಜನಿಕ ಭೂಮಿಯ ಖಾಸಗೀಕರಣ- ಮಾರಾಟ ನಿಲ್ಲಬೇಕು. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟ​ಬೇಕು ಎಂದು ಆಗ್ರ​ಹಿ​ಸಿ​ದ​ರು.

ಯುಪಿಎ-2ರಲ್ಲಂತೂ ಮಿತಿ ಮೀರಿದ ಭ್ರಷ್ಟಾಚಾರದಿಂದಾಗಿ ಭಾರತೀಯ ಜನತಾ ಪಕ್ಷವು ಗೆಲ್ಲಲು ಅವಕಾಶ ಮಾಡಿಕೊಟ್ಟಿತು. 2014ರ ನಂತರ ಕಾರ್ಪೊರೇಟ್‌ಗಳ ಹಿತಾಸಕ್ತಿ ಮತ್ತು ಕೋಮುವಾದ ಇವುಗಳನ್ನು ಸಂಕೋಚವಿಲ್ಲದೆ ಬಿಜೆಪಿ ಸರ್ಕಾರ ತೀವ್ರಗತಿಯಲ್ಲಿ ಬೆಳೆಸುತ್ತ ನಡೆದಿದೆ. ಸರ್ಕಾರವೊಂದನ್ನು ಬದಲಾಯಿಸುವುದರಿಂದ ಆರ್ಥಿಕತೆಯಲ್ಲಿ ಆಮೂಲಾಗ್ರ ಬದಲಾವಣೆ ಸಾಧ್ಯವಿಲ್ಲ. ಸ್ವಾತಂತ್ರ್ಯಾನಂತರ ಕಳೆದ 75 ವರ್ಷಗಳ ನಮ್ಮ ಅನುಭವದಿಂದ ಸಾಬೀತಾಗಿದೆ. ಇಂದು ಬಹಳಷ್ಟುಪಕ್ಷಗಳು ಕಾರ್ಪೊರೇಟ್‌- ಖಾಸಗೀಕರಣ- ಮಾರ್ಕೆಟೀಕರಣ ನೀತಿಗಳನ್ನು ಪಾಲಿಸುತ್ತಿವೆ. ಈ ಪಕ್ಷಗಳ ನಡುವೆ ಯಾವುದೇ ಮೂಲಭೂತ ಭಿನ್ನತೆಗಳಿಲ್ಲ. ಸತ್ಯ ಮತ್ತು ಅಹಿಂಸೆ ಗಾಂಧೀಜಿ ಮೌಲ್ಯಗಳಾದರೆ ಸಮಾನತೆ, ಸ್ವಾತಂತ್ರ್ಯ ಮತ್ತು ಭಾತೃತ್ವಗಳು ಡಾ. ಬಿ.ಆರ್‌. ಅಂಬೇಡ್ಕರ್‌ ಸಂವಿಧಾನಾದ ಮೌಲ್ಯಗಳಾಗಿವೆ. ಈ ಮೌಲ್ಯಗಳಿಗೆ ಬದ್ಧವಾಗಿ 2ನೇ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನಶಕ್ತಿಯನ್ನು ಸಂಘಟಿಸಬೇಕಾಗಿದೆ. ಈ ಸಂಘಟನೆ ಎಷ್ಟುಶಕ್ತಿ ಶಾಲಿಯಾಗಿರಬೇಕೆಂದರೆ ಅದರ ಹಕ್ಕೊತ್ತಾಯಗಳನ್ನು ಸರ್ಕಾರ ನಿರ್ಲಕ್ಷಿಸಲಾಗದು. ಈ ನಮ್ಮ ಸತ್ಯಾಗ್ರಹ ಯಾತ್ರೆಯು ಈ ದಿಶೆಯಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದ​ರು. ಸಮಾಜ ಪರಿವರ್ತನ ಸತ್ಯಾಗ್ರಹ ಯಾತ್ರೆ ಜ. 2ರಿಂದ ಕೂಡಲಸಂಗಮದಿಂದ ಪ್ರಾರಂಭವಾಗಿದ್ದು, ಜ. 11ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್ ​ತ​ಲು​ಪ​ಲಿದೆ ಎಂದರು.

ಈ ಸಂದ​ರ್ಭ​ದಲ್ಲಿ ಕೆಆ​ರ್‌​ಆ​ರ್‌​ಎಸ್‌ ರಾಜ್ಯಾ​ಧ್ಯಕ್ಷ ನಾಗೇಂದ್ರ ಬಡ​ಗ​ಲ​ಪು​ರ, ಸೈಯದ್‌ ಹೈದರ್‌, ನಿಂಗಪ್ಪ ಪೂಜಾರ ಸೇರಿ​ದಂತೆ ಇತ​ರರು ಇದ್ದ​ರು.