ಒಣಕಸವನ್ನು ಸುಡುವ ಮೂಲಕ ಶೇ.51 ರಷ್ಟು ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಜೊತೆಗೆ ಸೋಲಾರ್, ಗಾಳಿಯ ಮೂಲಕ ವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದು, ಮುಂದಿನ ದಿನದಲ್ಲಿ ಯುರೋಪಿಯನ್‌ ರಾಷ್ಟ್ರದಲ್ಲಿ ಜಾರಿಯಲ್ಲಿರುವ ಬಿಸಿ ನೀರಿನಿಂದ 10 ಸಾವಿರ ಮೆಗಾವ್ಯಾಟ್ಸ್ ಉತ್ಪಾದಿಸುತ್ತಿರುವ ತಂತ್ರಜ್ಞಾನವನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತುಮಕೂರಿನ ಬೆಸ್ಕಾಂನ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಪ್ರಶಾಂತ್‌ ಕೂಡ್ಲಿಗಿ ಅಭಿಪ್ರಾಯಪಟ್ಟರು

 ತುಮಕೂರು: ಒಣಕಸವನ್ನು ಸುಡುವ ಮೂಲಕ ಶೇ.51 ರಷ್ಟು ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಜೊತೆಗೆ ಸೋಲಾರ್, ಗಾಳಿಯ ಮೂಲಕ ವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದು, ಮುಂದಿನ ದಿನದಲ್ಲಿ ಯುರೋಪಿಯನ್‌ ರಾಷ್ಟ್ರದಲ್ಲಿ ಜಾರಿಯಲ್ಲಿರುವ ಬಿಸಿ ನೀರಿನಿಂದ 10 ಸಾವಿರ ಮೆಗಾವ್ಯಾಟ್ಸ್ ಉತ್ಪಾದಿಸುತ್ತಿರುವ ತಂತ್ರಜ್ಞಾನವನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ತುಮಕೂರಿನ ಬೆಸ್ಕಾಂನ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಪ್ರಶಾಂತ್‌ ಕೂಡ್ಲಿಗಿ ಅಭಿಪ್ರಾಯಪಟ್ಟರು.

ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎನರ್ಜಿ ಕ್ಲಬ್ ಹಾಗೂ ಎಲೆಕ್ಟ್ರಿಕಲ್‌ ಅಂಡ್‌ ಎಲೆಕ್ಟ್ರಾನಿಕ್ಸ್ ಎಂಜಿನಿ ಯರ್ ವಿಭಾಗ ಹಮ್ಮಿಕೊಂಡಿದ್ದ ‘ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆ ’ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂದು ವಿಶ್ವೇಶ್ವರಯ್ಯ ಅವರು ಆಲೋಚನೆ ಮಾಡಿ ಶರಾವತಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿದ್ದರಿಂದ ಇಂದು ಅನೇಕ ಹಳ್ಳಿಗೆ ನೀರಿನ ಜೊತೆಗೆ ವಿದ್ಯುತ್‌ ಕೂಡ ದೊರೆಯಿತು. ವಿಶೇಷ ಯೋಜನೆ ಅಡಿಯಲ್ಲಿ 7 ಸಾವಿರ ಮೆಗಾವ್ಯಾಟ್‌ ವಿದ್ಯುತ್‌ ಉತ್ವಾದನೆ ಹೆಚ್ಚಿಸುವ ತಯಾರಿ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.

ಒಣಕಸವನ್ನು ಸುಡುವ ಮೂಲಕ ಶೇ.51 ರಷ್ಟು ಮೆಗಾವ್ಯಾಟ್, ಸೋಲಾರ್, ಗಾಳಿಯ ಮೂಲಕ ವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದೇವೆ. ಯುರೋಪಿಯನ್ನರು ಬಿಸಿನೀರಿನಿಂದ 10 ಸಾವಿರ ಮೆಗಾವ್ಯಾಟ್ಸ್ ಉತ್ಪಾದಿಸುತ್ತಿದ್ದಾರೆ. ಅಂತಹ ತಂತ್ರಜ್ಞಾನವನ್ನು ನಮ್ಮಲ್ಲಿಯೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಪ್ರಸಕ್ತ ದಿನಗಳಲ್ಲಿ 1.24 ಮಿಲಿಯನ್ ವಿದ್ಯುತ್ ಬಳಸುತ್ತಿದ್ದೇವೆ. ಇದೇರೀತಿ ಬಳಕೆ ಮಾಡಿದರೆ ಮುಂದಿನ ದಿನಗಳಲ್ಲಿ ಇಂಧನ ಕೊರತೆಯುಂಟಾಗಲಿದೆ. ಸರ್ಕಾರ ಉಜಾಲ ಯೋಜನೆಯಲ್ಲಿ ಪ್ರತಿಯೊಂದು ಮನೆಗೆ ಎಲ್‌ಇಡಿ ನೀಡಿದೆ. ಇಲ್ಲಿಯವರೆಗೂ 300 ಕೋಟಿ ಮನೆಗಳಿಗೆ ಉಚಿತವಾಗಿ ಬಲ್ಪ್ ನೀಡಿದೆ. ವಿದ್ಯುತ್ ಸುರಕ್ಷಿತವಾಗಿ ಬಳಸುವುದರ ಜೊತೆಗೆ ಉಳಿತಾಯ ಮಾಡುವ ಬಗ್ಗೆ ಸಾರ್ವಜನಿಕರು ಚಿಂತಿಸಬೇಕಿದೆ ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಲ್. ಸಂಜೀವ್‌ ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಇಂಧನವನ್ನು ಮಿತವಾಗಿ ಬಳಸಿದರೆ ಮುಂದಿನ ದಿನಗಳಿಗೂ ಇಂಧನದ ಉಳಿತಾಯವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಸ್‌ಎಸ್‌ಐಟಿಯ ಸಂಶೋಧನಾ ವಿಭಾಗದ ಸಂಯೋಜಕ ಡಾ.ಎಸ್.ಜಿ. ಶ್ರೀಕಂಠೇಶ್ವರಸ್ವಾಮಿ, ಎನರ್ಜಿ ಕ್ಲಬ್‌ನ ಸಂಯೋಜಕ ಡಾ.ಎನ್. ಪ್ರದೀಪ್, ಪ್ರವೀಣ್ ಕುಮಾರ್ ಸಿ. ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.