ಮಂಗಳೂರು (ಸೆ.28):  ಕರಾವಳಿಯ ಗಂಡುಮೆಟ್ಟಿನ ಕಲೆ ಯಕ್ಷಗಾನದಲ್ಲಿ ರಂಗಸ್ಥಳದಲ್ಲಿ ಮೆರೆಯುತ್ತಿದ್ದ ಹಿರಿಯ ಸ್ಟಾರ್‌ ಕಲಾವಿದರು ಕೋವಿಡ್‌ ಕಾರಣಕ್ಕೆ ಈಗ ತಮ್ಮ ವೃತ್ತಿಯನ್ನೇ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದ್ದಾರೆ.

ಕೊರೋನಾ ದೆಸೆಯಿಂದಾಗಿ ಈಗ ವೃತ್ತಿಪರ ಯಕ್ಷಗಾನ ಮೇಳಗಳ ಹಿರಿಯ ಕಲಾವಿದರಿಗೆ ಈ ಸಂಕಷ್ಟಬಂದೊದಗಿದೆ. ಯಕ್ಷಗಾನ ರಂಗದಲ್ಲಿ ಸಾಮಾನ್ಯವಾಗಿ ಅನುಭವಿ, ಪಕ್ವಗೊಂಡಿರುವ ಹಿರಿಯ ಕಲಾವಿದರೇ ಪ್ರದರ್ಶನದ ಸ್ಟಾರ್‌ ಆಗಿರುತ್ತಾರೆ. ಅಗ್ರಪಂಕ್ತಿಯಲ್ಲಿರುವ ಈ ಕಲಾವಿದರೇ ಯಕ್ಷಗಾನ ಪ್ರದರ್ಶನಕ್ಕೆ ಕಳೆ ನೀಡುತ್ತಾರೆ. ಅಂತಹ ಕಲಾವಿದರೇ ಈ ಬಾರಿಯ ಯಕ್ಷಗಾನ ತಿರುಗಾಟದಿಂದ ವಂಚಿತಗೊಳ್ಳುವ ಭೀತಿಯಲ್ಲಿದ್ದಾರೆ.

ಕೇಂದ್ರ ಸರ್ಕಾರದ ಕೋವಿಡ್‌ ಮಾರ್ಗದರ್ಶಿ ನಿಯಮದಂತೆ 60ಕ್ಕಿಂತ ಮೇಲ್ಪಟ್ಟವರು ಮನೆಯಲ್ಲೇ ಇರಬೇಕು. ಇದು ಕಟ್ಟುನಿಟ್ಟಾಗಿ ಜಾರಿಯಾದರೆ ಪ್ರಬುದ್ಧ ಅಭಿನಯ ನೀಡುವ, ವಯಸ್ಸಾದರೂ ನವ ತಾರುಣ್ಯದಂತೆ ಕಲಾಪ್ರೌಢಿಮೆ ತೋರಿಸುವ ಹಿರಿಯ ಕಲಾವಿದರ ಗತಿ ಏನು ಎಂಬುದಕ್ಕೆ ಸ್ಪಷ್ಟಉತ್ತರ ಯಕ್ಷಗಾನ ಮೇಳಗಳಿಂದ ಸಿಕ್ಕಿಲ್ಲ.

ಡ್ರಗ್ಸ್ ಶೆಟ್ಟಿ ತಂದ ಸಂಕಟ, ಆ್ಯಂಕರ್ ಅನುಶ್ರೀಗೆ ಸಿಸಿಬಿ ನೋಟಿಸ್! ..

ಪ್ರತಿ ವರ್ಷ ದೀಪಾವಳಿ ಬಳಿಕ ಕರಾವಳಿಯಲ್ಲಿ ಸುಮಾರು 30ಕ್ಕೂ ಅಧಿಕ ಯಕ್ಷಗಾನ ಮೇಳಗಳ 1 ಸಾವಿರಕ್ಕೂ ಅಧಿಕ ಕಲಾವಿದರು 6 ತಿಂಗಳು ತಿರುಗಾಟ ನಡೆಸುತ್ತಾರೆ. ಬೇರೆ ಬೇರೆ ಕಡೆಗಳಲ್ಲಿ ಟೆಂಟ್‌ ಹಾಕಿ ಯಕ್ಷಗಾನ ಪ್ರದರ್ಶನ ನೀಡುತ್ತಾರೆ. ಅವರಲ್ಲಿ ಯುವ ಕಲಾವಿದರು ಮಾತ್ರವಲ್ಲ ಕಿರಿಯರಿಗೆ ಮಾರ್ಗದರ್ಶನ ಮಾಡಿ ಕಲೆಯನ್ನು ಬೆಳಗುವ ಹಿರಿಯ ಕಲಾವಿದರೂ ಸೀಮಿತ ಸಂಖ್ಯೆಯಲ್ಲಿದ್ದಾರೆ.

* ಬುಕ್ಕಿಂಗ್‌ ಬೇಡಿಕೆ

ಕೋವಿಡ್‌ ನಿಯಮಾವಳಿಗೆ ಒಳಪಟ್ಟು ಯಕ್ಷಗಾನ ಪ್ರದರ್ಶನಕ್ಕೆ ಸಿದ್ಧತೆ ನಡೆಸುತ್ತಿರುವ ಬಹುತೇಕ ಮೇಳಗಳು ಮುಂದಿನ ಸಾಲಿನ ತಿರುಗಾಟಕ್ಕೆ ಸಿದ್ಧತೆ ನಡೆಸುತ್ತಿವೆ. ಈ ನಡುವೆ ಯಕ್ಷಗಾನ ಪ್ರದರ್ಶನಕ್ಕೆ ಬುಕ್ಕಿಂಗ್‌ಗೆ ಬೇಡಿಕೆ ಬರಲಾರಂಭಿಸಿದೆ. ಮುಖ್ಯವಾಗಿ ತೆಂಕುತಿಟ್ಟಿನ ಪ್ರಸಿದ್ಧ ಮೇಳಗಳಾದ ಧರ್ಮಸ್ಥಳ, ಕಟೀಲು, ಹನುಮಗಿರಿ, ಸುಂಕದಕಟ್ಟೆ, ಬಪ್ಪನಾಡು, ಬಡಗಿನಲ್ಲಿ ಪೆರ್ಡೂರು, ಸಾಲಿಗ್ರಾಮ, ಮಂದಾರ್ತಿ ಸಹಿತ ವಿವಿಧ ಮೇಳಗಳಿಗೆ ಕಲಾಪ್ರೇಮಿಗಳು, ಹರಕೆ ಆಟ ಆಡಿಸುವವರು ಬುಕ್ಕಿಂಗ್‌ಗೆ ಮುಂದಾಗಿದ್ದಾರೆ. ಆದರೆ ಕೋವಿಡ್‌ ನಿಯಮ ಪಾಲಿಸಿಕೊಂಡು ಯಾವ ರೀತಿ ಪ್ರದರ್ಶನ ನೀಡುವುದು ಎಂದು ನಿಖರತೆಗೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಧಿಕೃತವಾಗಿ ಇನ್ನೂ ಬುಕ್ಕಿಂಗ್‌ ಆರಂಭವಾಗಿಲ್ಲ ಎಂದು ಮೇಳಗಳ ಯಜಮಾನರು ಹೇಳುತ್ತಿದ್ದಾರೆ.

20ಕ್ಕೂ ಅಧಿಕ ಹಿರಿಯ ಕಲಾವಿದರು

ಲಭ್ಯ ಮಾಹಿತಿ ಪ್ರಕಾರ, 60 ವರ್ಷ ಮೇಲ್ಪಟ್ಟಹಿರಿಯ ಕಲಾವಿದರ ಪಟ್ಟಿಯಲ್ಲಿ ತೆಂಕು ಹಾಗೂ ಬಡಗು ತಿಟ್ಟಿನಲ್ಲಿ ಪ್ರಸಿದ್ಧರಾದ ಸುಮಾರು 20ಕ್ಕೂ ಅಧಿಕ ಹಿರಿಯ ಕಲಾವಿದರಿದ್ದಾರೆ. ಸಣ್ಣಪುಟ್ಟಕಲಾವಿದರೂ ಇನ್ನೂ ಹಲವರಿದ್ದಾರೆ. ಇವರಿಗೆಲ್ಲ ಈಗ ಕೋವಿಡ್‌ ನಿಯಮದ ಕಡ್ಡಾಯ ನಿವೃತ್ತಿಯ ತೂಗುಗತ್ತಿ ನೇತಾಡುತ್ತಿದೆ.

ರಂಗದಲ್ಲಿ ಪ್ರದರ್ಶನ ರಂಗೇರಿಸುವ ಈ ಹಿರಿಯ ಕಲಾವಿದರೇ ಮೇಳಗಳಿಗೆ ಆಸ್ತಿ. ಅಂಥವರು ಈ ಬಾರಿ ತಿರುಗಾಟದಲ್ಲಿ ಇಲ್ಲದ್ದರೆ ಪ್ರದರ್ಶನದ ಗತಿ ಏನು ಎಂಬ ಜಿಜ್ಞಾಸೆ ಮೇಳಗಳ ಯಜಮಾನರು ಹಾಗೂ ಕಲಾಪ್ರೇಮಿಗಳನ್ನು ಕಾಡುತ್ತಿದೆ.

ಮಂದಾರ್ತಿ ಕ್ಷೇತ್ರದ ಎರಡು ಮೇಳಗಳ ಕಲಾವಿದರನ್ನು ಸೇರಿಸಿ ಈಗ ಕೋವಿಡ್‌ ನಿಯಮದಂತೆ ಕ್ಷೇತ್ರದಲ್ಲೇ ಮಳೆಗಾಲದ ಕಾಲಮಿತಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದೇವೆ. ಮುಂದಿನ ಸಾಲಿನ ತಿರುಗಾಟದ ಬುಕ್ಕಿಂಗ್‌ ಇನ್ನೂ ನಿರ್ಧಾರ ಆಗಿಲ್ಲ. ಅದೇ ರೀತಿ 60ರ ಮೇಲಿನ ಹಿರಿಯ ಕಲಾವಿದರೂ ನಮ್ಮ ಮೇಳದಲ್ಲಿ ಅನೇಕ ಮಂದಿ ಇದ್ದಾರೆ. ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಧನಂಜಯ, ಮ್ಯಾನೇಜಿಂಗ್‌ ಟ್ರಸ್ಟಿ, ಮಂದಾರ್ತಿ ಮೇಳ

ಯಕ್ಷಗಾನ ಮೇಳಗಳನ್ನು ಕೋವಿಡ್‌ ನಿಯಮ ಪಾಲಿಸಿ ತಿರುಗಾಟ ನಡೆಸಲು ಸಾಧ್ಯವಿದೆ. 60 ವರ್ಷಕ್ಕಿಂತ ಮೇಲ್ಪಟ್ಟಕಲಾವಿದರು ಡಯಾಬಿಟಿಕ್‌, ರಕ್ತದೊತ್ತಡ, ಸ್ಥೂಲಕಾಯ ಹಾಗೂ ಹೃದಯ ತೊಂದರೆಯಿಂದ ಬಳಲುತ್ತಿದ್ದರೆ, ತಿರುಗಾಟ ನಡೆಸುವುದು ಅಪಾಯ. ಆರೋಗ್ಯವಾಗಿದ್ದರೆ, ಹಿರಿಯರಾದರೂ ತಿರುಗಾಟ ನಡೆಸುವುದರಲ್ಲಿ ತಪ್ಪೇನಿಲ್ಲ.

ಡಾ.ಪದ್ಮನಾಭ ಕಾಮತ್‌, ಹಿರಿಯ ಹೃದ್ರೋಗ ತಜ್ಞ, ಮಂಗಳೂರು