ಗದಗ(ಜೂ.01): ಇಂದಿನಿಂದ(ಸೋಮವಾರ)ದಿಂದ ಗದಗ- ಮುಂಬೈ ಎಕ್ಸ್‌ಪ್ರೆಸ್‌ ಡೈಲಿ ರೈಲು ಆರಂಭವಾಗಲಿದ್ದು, ಮುಂಬೈ ಕಂಟಕ ಗದಗ ಜಿಲ್ಲೆಗೂ ತಗಲುತ್ತಾ ಎಂಬ ಆತಂಕ ಜಿಲ್ಲೆಯ ಜನರಲ್ಲಿ ಪ್ರಾರಂಭವಾಗಿದೆ.

ಸದ್ಯಕ್ಕೆ ಕೊರೋನಾ ಸಂಕಷ್ಟ ಶಾಂತವಾಗಿದ್ದ ಗದಗ ಜಿಲ್ಲೆಗೆ ಕೊರೋನಾ ಹಾಟ್‌ಸ್ಪಾಟ್‌ ಮುಂಬೈನಿಂದ ಪ್ರಯಾಣಿಕರು ಮಂಗಳವಾರ ಬಂದು ತಲುಪುತ್ತಿದ್ದು, ಈ ಬಗ್ಗೆ ಜಿಲ್ಲೆಯಾದ್ಯಂತ ಭಯದ ವಾತಾವರಣಕ್ಕೆ ಕಾರಣವಾಗಿದೆ.
ಮುಂಬೈ ಸೊಲ್ಲಾಪುರ, ವಿಜಯಪುರ, ಬಾಗಲಕೋಟೆ ಮಾರ್ಗವಾಗಿ ಗದಗ ತಲುಪಲಿದೆ. ಸೋಮವಾರ ಮುಂಬೈ ಬಿಡಲಿದ್ದು, ಮಂಗಳವಾರ ಬೆಳಗ್ಗೆ ಗದಗ ತಲುಪಲಿದೆ. ಈ ಕುರಿತು ರೈಲ್ವೆ ಇಲಾಖೆ ಅಧಿಕೃತ ಮಾಹಿತಿ ಪತ್ರ ಬಿಡುಗಡೆ ಮಾಡಿದೆ. ಸದ್ಯಕ್ಕೆ ಮುಂಬೈ ಟ್ರೈನ್‌ ಬೇಡವೆಂದು ರಾಜ್ಯ ಸರ್ಕಾರ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ, ರೈಲ್ವೆ ಇಲಾಖೆಗೆ ತಿಳಿಸಿದೆ ಎಂದು ಸರ್ಕಾರದ ಮೂಲಗಳು ಹೇಳುತ್ತಿವೆ.

ಬಸ್‌ ಪ್ರಯಾಣಕ್ಕೆ ಜನರ ಹಿಂದೇಟು: KSRTCಗೆ ಭಾರಿ ನಷ್ಟ..!

ಆದರೆ, ಕೇಂದ್ರ ರೈಲ್ವೆ ಇಲಾಖೆಯಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಬದಲಾಗಿ ರಿಸರ್ವೇಶನ್‌ ಕೋಟಾ ಕೂಡಾ ಬಿಡುಗಡೆ ಮಾಡಿದೆ. ಸೋಮವಾರ ರೈಲು ಮುಂಬೈ ಬಿಡುವುದು ಖಚಿತವಾಗಿದೆ. ಆದರೆ, ಗದಗ ರೈಲ್ವೆ ನಿಲ್ದಾಣದಲ್ಲಿ ಯಾವುದೇ ಭದ್ರತೆ ಇಲ್ಲ. ಮುಂಬೈನಿಂದ ಬಂದ ಪ್ರಯಾಣಿಕರನ್ನು ಯಾವ ತೆರನಾಗಿ, ಎಲ್ಲಿ ಕ್ವಾರಂಟೈನ್‌ ಮಾಡುತ್ತಾರೆ ಎನ್ನುವ ಬಗ್ಗೆ ಖಚಿತತೆ ಇಲ್ಲ.

ಅಷ್ಟೊಂದು ಸಂಖ್ಯೆಯಲ್ಲಿ ಪ್ರಯಾಣಿಕರು ನಿತ್ಯವೂ ಬರಲು ಪ್ರಾರಂಭಿಸಿದರೆ ಮುಂದೆ ಗದಗ ಜಿಲ್ಲೆಯೂ ಕೊರೋನಾ ಹಾಟ್‌ಸ್ಪಾಟ್‌ ಆದರೂ ಆಶ್ಚರ್ಯ ಪಡುವಂತಿಲ್ಲ, ಮುಂಬೈನಿಂದ ಅಕ್ಕಪಕ್ಕದ ಜಿಲ್ಲೆಗಳಿಗೂ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಆಗಮಿಸುವ ಸಾಧ್ಯತೆ ಇದ್ದು, ಅವರನ್ನೆಲ್ಲ ಎಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ ಎನ್ನುವ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟಪಡಿಸಬೇಕಿದೆ.

ಅಲ್ಪ ನಿರಾಳರಾಗಿದ್ದ ಜಿಲ್ಲೆಯ ಜನತೆಗೆ ಮಹಾ ಕಂಟಕ ಎದುರಾಗುವ ಎಲ್ಲ ಲಕ್ಷಣಗಳಿದ್ದು, ಈ ಹಿಂದೆ ಗ್ರೀನ್‌ ಜೋನ್‌ನಲ್ಲಿದ್ದ ರಾಜ್ಯದ ಹಲವಾರು ಜಿಲ್ಲೆಗಳು ಈಗ ಮಹಾರಾಷ್ಟ್ರ ವಲಸಿಗರಿಂದ ಯಾವ ಹಂತಕ್ಕೆ ತಲುಪಿವೆ ಎನ್ನುವ ಬಗ್ಗೆ ಜಿಲ್ಲಾಡಳಿತ ಗಮನ ನೀಡಿ ರಾಜ್ಯ ಸರ್ಕಾರದೊಂದಿಗೆ ಮಾತನಾಡಿ, ಮುಂಬೈ ರೈಲು ಸದ್ಯಕ್ಕೆ ರದ್ದು ಮಾಡುವುದೇ ಸೂಕ್ತ ಎನ್ನುತ್ತಿದ್ದಾರೆ ಜಿಲ್ಲೆಯ ಜನ.