Asianet Suvarna News Asianet Suvarna News

ವಿಜಯನಗರ: ಹಂಪಿಯಲ್ಲಿ ಜುಲೈನಲ್ಲಿ ಜಿ-20 ಸಭೆ

20 ದೇಶಗಳ 200 ಪ್ರತಿನಿಧಿಗಳು ಸಭೆಯಲ್ಲಿ ಭಾಗಿ, ವಿದೇಶಾಂಗ ಸಚಿವಾಲಯ ಅಧಿಕಾರಿಯಿಂದ ಪರಿಶೀಲನೆ, ಸಮಿಟ್‌ ಯಶಸ್ಸಿಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ. 

G20 Meeting Will Be Held on July in Hampi grg
Author
First Published Jan 10, 2023, 2:03 PM IST

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಜ.10): ವಿಶ್ವ ವಿಖ್ಯಾತ ಹಂಪಿಯಲ್ಲಿ ಜುಲೈ ತಿಂಗಳಲ್ಲಿ ಜಿ.20 ಸಭೆ ನಡೆಯಲಿದೆ. ಸರ್ಕಾರ ಹಾಗೂ ಜಿಲ್ಲಾಡಳಿತ ಈ ಸಭೆಗಾಗಿ ಸಕಲ ಸಿದ್ಧತೆ ನಡೆಸಿದೆ. ಭಾರತ ಜಿ.20 ದೇಶಗಳ ಮುಖ್ಯಸ್ಥನಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ದೇಶದಲ್ಲಿ 200ಕ್ಕೂ ಅಧಿಕ ಸ್ಥಳಗಳಲ್ಲಿ ಸಭೆಗಳು ನಡೆಯಲಿವೆ. ಹಂಪಿಯಲ್ಲೂ ಒಂದು ಸಭೆ ನಡೆಸಲು ಭಾರತೀಯ ವಿದೇಶಾಂಗ ಸಚಿವಾಲಯ ಉತ್ಸುಕವಾಗಿದೆ. ಭಾರತೀಯ ವಾಸ್ತುಶಿಲ್ಪ ಪ್ರಪಂಚಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ವಿಜಯನಗರದ ಆಳರಸರ ರಾಜಧಾನಿ ಹಂಪಿಯಲ್ಲಿ ಜಿ-20 ಸಮಿಟ್‌ ನಡೆಸುವ ಮೂಲಕ ಸ್ಮರಣೀಯವಾಗಿಸುವ ಚಿಂತನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಿವೆ.

ಹಂಪಿಗೆ ತಂಡ ಭೇಟಿ:

ಹಂಪಿಯಲ್ಲಿ ಜಿ-20 ಸಮಿಟ್‌ ನಡೆಸುವುದಕ್ಕಾಗಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಆಶೀಶ್‌ ಸಿನ್ಹಾ ನೇತೃತ್ವದಲ್ಲಿ ತಂಡವೊಂದು ಮೂರು ದಿನಗಳ ಹಿಂದೆ ಭೇಟಿ ನೀಡಿ ಪರಿಶೀಲಿಸಿದೆ. ಈ ಕುರಿತು ಸಿದ್ಧತಾ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಮಪ್ರಸಾತ್‌ ವಿ. ಮನೋಹರ್‌ ಕೂಡ ಇದ್ದರು.

ಸಿದ್ದು ಭವಿಷ್ಯದ ಸಿಎಂ ಅಂತ ಕೆಲವರು ಹೇಳಿದ್ರೆ ತಪ್ಪಿಲ್ಲ: ಪರಂ

ವಿಜಯನಗರ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಹಾಗೂ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ ಕೂಡ ಸಭೆಯಲ್ಲಿ ಭಾಗಿಯಾಗಿದ್ದರು. ಹಂಪಿ ಪಕ್ಕದ ರೆಸಾರ್ಚ್‌ನಲ್ಲಿ ನಡೆದ ಈ ಸಭೆಯಲ್ಲಿ ಜಿ-20 ಸಮಿಟ್‌ ಕುರಿತು ಚರ್ಚಿಸಲಾಗಿದೆ. ಜಿ-20 ದೇಶಗಳ 200ಕ್ಕೂ ಅಧಿಕ ಉನ್ನತ ಅಧಿಕಾರಿಗಳು ಹಂಪಿಯಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಬಿಗಿ ಪೊಲೀಸ್‌ ಭದ್ರತೆ:

ಜಿ-20 ಶೃಂಗಸಭೆ ಬಿಗಿ ಭದ್ರತೆಯಲ್ಲಿ ನಡೆಯಲಿದೆ. ಸುಮಾರು 200 ವಿದೇಶಿ ಪ್ರತಿನಿಧಿಗಳು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಹಾಗೂ ಕೇಂದ್ರ ಗೃಹ ಸಚಿವಾಲಯದ ತಂಡ ಸೂಕ್ತ ಬಂದೋಬಸ್‌್ತ ಏರ್ಪಡಿಸಲಿದ್ದು, ಇದಕ್ಕಾಗಿ ಹಂಪಿಯ ಭದ್ರತಾ ವ್ಯವಸ್ಥೆ ಕುರಿತು ಪರಿಶೀಲನೆ ಕೂಡ ನಡೆಸಲಾಗುತ್ತಿದೆ.

ಹಂಪಿ ಸ್ಮಾರಕಗಳ ವೀಕ್ಷಣೆ:

ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲ, ಹಜಾರ ರಾಮ ದೇಗುಲ, ಆನೆ ಲಾಯ, ಕಮಲ ಮಹಲ್‌, ಮಹಾನವಮಿ ದಿಬ್ಬ, ವಿಜಯ ವಿಠ್ಠಲ ದೇಗುಲ ಮತ್ತು ಕಲ್ಲಿನ ತೇರು ಪ್ರದೇಶವನ್ನು ವಿದೇಶಾಂಗ ಇಲಾಖೆ ಜಂಟಿ ಕಾರ್ಯದರ್ಶಿ ನೇತೃತ್ವದ ತಂಡ ವೀಕ್ಷಿಸಿದೆ. ಹಂಪಿಯ ಯಾವ ಸ್ಮಾರಕಗಳ ಬಳಿ ಈ ಸಭೆ ನಡೆಸಬೇಕು ಎಂಬುದನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಈ ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉನ್ನತಾಧಿಕಾರಿಗಳ ತಂಡ ಹಂಪಿಗೆ ಭೇಟಿ ನೀಡಿ ಯಾವ ಸ್ಮಾರಕದ ಬಳಿ ಜಿ-20 ಶೃಂಗಸಭೆ ನಡೆಸಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಹಂಪಿ ಗತ ವೈಭವ:

ವಿಜಯನಗರದ ಆಳರಸರ ಕಾಲದಲ್ಲಿ ವಿದೇಶಿ ರಾಯಭಾರಿಗಳು ಹಂಪಿಗೆ ಭೇಟಿ ನೀಡಿದ್ದರು. ಜತೆಗೆ ವ್ಯಾಪಾರ- ವಹಿವಾಟಿನಲ್ಲೂ ವಿಜಯನಗರ ಸಾಮ್ರಾಜ್ಯ ಮುಂದಿತ್ತು. ಬಳ್ಳದಿಂದ ಹಂಪಿಯ ಮಾರುಕಟ್ಟೆಗಳಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ಮಾರಲಾಗುತ್ತಿತ್ತು ಎಂದು ಆಗಿನ ವಿದೇಶಿ ರಾಯಭಾರಿಗಳೇ ಬಣ್ಣಿಸಿದ್ದಾರೆ. ಈಗ 20 ದೇಶಗಳ 200ಕ್ಕೂ ಅಧಿಕ ಪ್ರತಿನಿಧಿಗಳು ಹಂಪಿಗೆ ಭೇಟಿ ನೀಡುತ್ತಿರುವುದು ವಿಶೇಷ.

ಸ್ವದೇಶ್‌ ದರ್ಶನದಲ್ಲೂ ಹಂಪಿಗೆ ಸ್ಥಾನ:

ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯದ ವತಿಯಿಂದ ಪ್ರಾರಂಭಿಸಲಾದ ಸ್ವದೇಶ ದರ್ಶನ್‌ 2.0 ಯೋಜನೆಯಲ್ಲಿ ಹಂಪಿ ಕೂಡ ಸೇರ್ಪಡೆಯಾಗಿದೆ. ಭಾರತದಲ್ಲಿ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಉತ್ತೇಜಿಸಲು, ಅಭಿವೃದ್ಧಿಪಡಿಸಲು ಮತ್ತು ಬಳಸಿಕೊಳ್ಳುವ ಗುರಿಯನ್ನು ಈ ಯೋಜನೆ ಹೊಂದಿದೆ. ಸ್ವದೇಶ್‌ ದರ್ಶನ್‌ ಯೋಜನೆಯಡಿಯಲ್ಲಿ ಪ್ರವಾಸೋದ್ಯಮ ಸಚಿವಾಲಯವು ಕೇಂದ್ರ ಹಣಕಾಸು ನೆರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಿದೆ. ಇದರಿಂದಾಗಿ ಆಯಾ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಪ್ರೇರಕ ಶಕ್ತಿ ದೊರೆಯಲಿದೆ. ಇದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ಈ ನಡುವೆ ಜಿ-20 ಶೃಂಗಸಭೆಗೆ ಹಂಪಿ ಆಯ್ಕೆಯಾಗಿರುವುದು ಈ ಭಾಗದಲ್ಲಿ ಅಭಿವೃದ್ಧಿಗೆ ಇನ್ನಷ್ಟುಪುಷ್ಟಿದೊರೆಯಲಿದೆ.

ಹೊಸಪೇಟೆ: ಕಾಂಗ್ರೆಸ್‌ನ ಇಬ್ಬರು ಮಹಿಳಾ ಮುಖಂಡರ ಗಲಾಟೆ, ಯೋಗಲಕ್ಷ್ಮೀ ಸೇರಿ ಇಬ್ಬರ ಬಂಧನ

ಜಿ-20 ಶೃಂಗಸಭೆಗೆ ಹಂಪಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಹಂಪಿಯಲ್ಲಿ ಇಂತಹ ಜಾಗತಿಕ ಸಭೆ ನಡೆಯುತ್ತಿರುವುದು ವಿಜಯನಗರ ಸಾಮ್ರಾಜ್ಯದ ನೆಲಕ್ಕೆ ಕೇಂದ್ರ ಸರ್ಕಾರ ನೀಡಿದ ಮನ್ನಣೆಯಾಗಿದೆ. ಹಂಪಿಗೆ ಈ ವಿಶಿಷ್ಟಗರಿ ದೊರೆತಿದ್ದು, ಶೃಂಗಸಭೆಯ ಯಶಸ್ವಿ ಸಾಕಾರಕ್ಕೆ ರಾಜ್ಯ ಸರ್ಕಾರ, ವಿಜಯನಗರ ಜಿಲ್ಲಾಡಳಿತಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಅಂತ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ತಿಳಿಸಿದ್ದಾರೆ. 

ಜಿ-20 ಶೃಂಗಸಭೆಗೆ ಹಂಪಿ ಆಯ್ಕೆಯಾಗಿದೆ. ಈಗಾಗಲೇ ಒಂದು ಸುತ್ತಿನ ಸಿದ್ಧತಾ ಸಭೆ ನಡೆದಿದೆ. 2023ರ ಜುಲೈನಲ್ಲಿ 20 ದೇಶಗಳ 200ಕ್ಕೂ ಅಧಿಕ ಪ್ರತಿನಿಧಿಗಳು ಹಂಪಿಗೆ ಆಗಮಿಸಲಿದ್ದಾರೆ ಅಂತ ಜಿಲ್ಲಾಧಿಕಾರಿ ಟಿ. ವೆಂಕಟೇಶ್‌ ಹೇಳಿದ್ದಾರೆ. 

Follow Us:
Download App:
  • android
  • ios