ಹುಣಸೂರು (ಫೆ.04):  ಅಡುಗೆ ಮಾಡುತ್ತಿದ್ದ ವೇಳೆ ಅನಿಲ ಸೋರಿಕೆಯುಂಟಾಗಿ ಬಳಿಯಲ್ಲಿದ್ದ ಫ್ರಿಜ್ಡ್‌ ಸಿಡಿದ ಪರಿಣಾಮ ಐವರು ಗಾಯಗೊಂಡಿದ್ದಾರೆ.

ಪಟ್ಟಣದ ಲಾಲ್‌ಬಂದ್‌ ಬೀದಿಯ ನಿವಾಸಿ ಆಟೋ ಚಾಲಕ ಚಂದ್ರು ಅವರ ಮನೆಯಲ್ಲಿ ಬುಧವಾರ ಮಧ್ಯಾಹ್ನ ಅನಾಹುತ ನಡೆದಿದ್ದು, ಘಟನೆಯಲ್ಲಿ ಚಂದ್ರು ಅವರ ಪುತ್ರ ಶಿವಕುಮಾರ್‌, ಪತ್ನಿ ಸುಷ್ಮಿತ, ಸಹೋದರ ಮಹೇಶ್‌, ತಾಯಿ ಜಯಮ್ಮ ತೀವ್ರ ಗಾಯಗೊಂಡಿದ್ದಾರೆ.

ಬೆಂಕಿ ಹೊತ್ತಿಕೊಂಡ ವೇಳೆ ಅನಾಹುತ ತಡೆಯಲು ಮನೆಯೊಳಗೆ ನುಗ್ಗಿದ ಪಕ್ಕದ ಮನೆಯ ಅತಾವುಲ್ಲರ ಪುತ್ರ ಮಹಮದ್‌ ಉರ್‌ ರೆಹಮಾನ್‌ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ.

ಎಟಿಎಂಗೆ ತುಂಬಬೇಕಿದ್ದ 64 ಲಕ್ಷ ರೂ. ಕದ್ದು ಪರಾರಿ..! ...

ಮನೆಯಲ್ಲಿ ಜಯಮ್ಮ ಎಂದಿನಂತೆ ಅಡುಗೆ ಮಾಡುತ್ತಿದ್ದ ವೇಳೆ ಅನಿಲ ಸೋರಿಕೆಯುಂಟಾಗಿದೆ. ಅಡುಗೆ ಮನೆಯೊಳಗೆ ಬಿಸಿ ಹವಾ ಇದ್ದ ಕಾರಣ ಅಲ್ಲೇ ಇದ್ದ ಫ್ರಿಡ್ಜ್‌ನ ಹಿಂಭಾಗದ ಸಿಲಿಂಡರ್‌ ಬಿಸಿಯಾಗಿ ಸ್ಫೋಟಗೊಂಡು ಇಡೀ ಮನೆಯನ್ನೇ ಅವರಿಸಿದೆ. ಮನೆಯಲ್ಲಿದ್ದ ಎಲೆಕ್ಟ್ರಾನಿಕ್‌ ವಸ್ತುಗಳು ಸುಟ್ಟುಕರಕಲಾಗಿದೆ. ಮನೆಯ ತುಂಬ ಹೊಗೆ ಬಂದಿದ್ದನ್ನು ಗಮನಿಸಿದ ಮಹಮದ್‌ ಉರ್‌ ರೆಹಮಾನ್‌ ಮನೆಯೊಳಗೆ ನುಗ್ಗಿ ಗಾಯಗೊಂಡವರನ್ನು ಹೊರತರಲು ಯತ್ನಿಸಿದ ವೇಳೆ ತೀವ್ರವಾಗಿ ಸುಟ್ಟು ಗಾಯಗೊಂಡಿದ್ದಾರೆ.

ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಅಕ್ಕಪಕ್ಕದ ಮನೆಗಳಿಗೆ ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾದರು. ಗಾಯಗೊಂಡವರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಕೆ.ಆರ್‌. ಆಸ್ಪತ್ರೆಗೆ ರವಾನಿಸಲಾಗಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.