ಬೆಂಗಳೂರು (ಜ.16) :  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದ ಆವರಣಕ್ಕೆ ಹೊಂದಿಕೊಂಡಿರುವ ಹಾಲ್ಟ್‌ ರೈಲು ನಿಲ್ದಾಣ ಮತ್ತು ಕೆಐಎ ವಿಮಾನ ನಿಲ್ದಾಣದ ನಡುವೆ ಫೀಡರ್‌ ಬಸ್‌ ಸೇವೆ ನೀಡಲು ಉತ್ಸುಕವಾಗಿದ್ದ ಬಿಎಂಟಿಸಿಗೆ ನಿರಾಸೆಯಾಗಿದೆ.

ಹಾಲ್ಟ್‌ ರೈಲು ನಿಲ್ದಾಣದಿಂದ ಕೆಐಎ ವಿಮಾನ ನಿಲ್ದಾಣ ಸುಮಾರು ಐದು ಕಿ.ಮೀ. ಅಂತರದಲ್ಲಿದೆ. ಹೀಗಾಗಿ ನಗರದಿಂದ ಹಾಲ್ಟ್‌ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳಲು ಫೀಡರ್‌ ಬಸ್‌ ಬಳಸುವುದು ಅನಿವಾರ್ಯವಾಗಿದೆ. 

ಈ ಹಿನ್ನೆಲೆಯಲ್ಲಿ ಕೆಐಎ ವಿಮಾನ ನಿಲ್ದಾಣದ ನಿರ್ವಹಣೆ ಮಾಡುತ್ತಿರುವ ಬೆಂಗಳೂರು ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌(ಬಿಐಎಎಲ್‌) ಪ್ರಯಾಣಿಕರ ಅನುಕೂಲಕ್ಕಾಗಿ ತನ್ನದೇ ಬಸ್‌ಗಳನ್ನು ಬಳಸಿಕೊಂಡು ತಾತ್ಕಾಲಿಕವಾಗಿ ಉಚಿತ ಫೀಡರ್‌ ಸೇವೆ ನೀಡಲು ಮುಂದಾಗಿದೆ. ಇದರಿಂದ ಈ ಮಾರ್ಗದಲ್ಲಿ ಫೀಡರ್‌ ಬಸ್‌ ಸೇವೆ ಆರಂಭಿಸಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ಬಿಎಂಟಿಸಿಗೆ ಭಾರೀ ನಿರಾಸೆಯಾಗಿದೆ.

ವಿದ್ಯಾರ್ಥಿಗೆ ಸ್ಕೂಲ್‌ಗೆ ಲೇಟ್ ಆಗುತ್ತೆ ಅಂತ ಬಸ್ ಟೈಮಿಂಗ್ ಬದಲಿಸಿದ್ರು! .

ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಹಾಗೂ ವಿಮಾನ ನಿಲ್ದಾಣ ಸಿಬ್ಬಂದಿ ಅನುಕೂಲಕ್ಕಾಗಿ ನೈಋುತ್ಯ ರೈಲ್ವೆ ಹಾಗೂ ಬಿಐಎಎಲ್‌ ಸಹಯೋಗದಲ್ಲಿ ಸುಮಾರು .3 ಕೋಟಿ ವೆಚ್ಚದಲ್ಲಿ ಯಲಹಂಕ- ದೇವನಹಳ್ಳಿ ನಡುವೆ ಸುಸಜ್ಜಿತ ಹಾಲ್ಟ್‌ ರೈಲು ನಿಲ್ದಾಣ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ನಿತ್ಯ ಐದು ಜೊತೆ ಡೆಮು ರೈಲುಗಳ ಸಂಚಾರ ಆರಂಭಿಸಲಾಗಿದೆ. ಆರಂಭದಲ್ಲಿ ಬಿಎಂಟಿಸಿಯು, ಸದರಿ ಮಾರ್ಗದಲ್ಲಿ ಫೀಡರ್‌ ಬಸ್‌ ಸೇವೆಗೆ ಬಿಐಎಎಲ್‌ ಮನವಿ ಮಾಡುವ ನಿರೀಕ್ಷೆಯಲ್ಲಿತ್ತು. ಆದರೆ, ಬಿಐಎಎಲ್‌ ತನ್ನದೇ ಸಂಪನ್ಮೂಲ ಬಳಸಿಕೊಂಡು ಫೀಡರ್‌ ಬಸ್‌ ಸೇವೆ ಆರಂಭಿಸಿರುವುದಿಂದ ಬಿಎಂಟಿಸಿಯ ನಿರೀಕ್ಷೆಯ ಲೆಕ್ಕಾಚಾರ ಹುಸಿಯಾಗಿದೆ.

ಬಿಎಂಟಿಸಿ ಸೇವೆ ಅನಿವಾರ್ಯ

ಪ್ರಸ್ತುತ ಕೊರೋನಾದಿಂದ ವಿಮಾನ ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಬಿಐಎಎಲ್‌ ತನ್ನದೇ ಬಸ್‌ಗಳನ್ನು ಬಳಸಿಕೊಂಡು ಉಚಿತ ಫೀಡರ್‌ ಸೇವೆ ನೀಡುತ್ತಿದೆ. ಕೊರೋನಾ ಪರಿಸ್ಥಿತಿ ತಿಳಿಯಾಗಿ ಸಾಮಾನ್ಯ ಸ್ಥಿತಿಗೆ ಮರಳಿದರೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತದೆ. ಆಗ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಫೀಡರ್‌ ಬಸ್‌ ಸೇವೆ ನೀಡುವುದು ಬಿಐಎಎಲ್‌ಗೆ ಕಷ್ಟವಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ಬಿಎಂಟಿಸಿ ಫೀಡರ್‌ ಸೇವೆ ಅನಿವಾರ್ಯವಾಗಲಿದೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.