ಬೆಳಗಾವಿ(ಡಿ.21): ಸರ್ಕಾರಿ ಶಾಲೆಯ ಕುಡಿಯುವ ನೀರಿನ ಟ್ಯಾಂಕ್‌ಗೆ ವಿಷ ಮಿಶ್ರಣವಾಗಿದೆ ಎಂಬ ಶಂಕೆ ವ್ಯಕ್ತವಾದ ಹಿನ್ನಲೆಯಲ್ಲಿ ಟ್ಯಾಂಕ್‌ನಲ್ಲಿನ ನೀರು ಕುಡಿದ ಇಬ್ಬರು ಅಡುಗೆ ಸಿಬ್ಬಂದಿ, ಇಬ್ಬರು ವಿದ್ಯಾರ್ಥಿಗಳು ಸೇರಿ ನಾಲ್ವರು ಆಸ್ಪತ್ರೆಗೆ ದಾಖಿಲಿಸಿ ಚಿಕಿತ್ಸೆ ಕೊಡಿಸಿದ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಗೊರಮನಕೊಳ್ಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದಿದೆ. 

ಅಡುಗೆ ಸಿಬ್ಬಂದಿ ಮಂಗಳಾ ವಿಭೂತಿ(58), ಲೀಲಾವತಿ ಭೋವಿ(25), 4ನೇ ತರಗತಿ ವಿದ್ಯಾರ್ಥಿಗಳಾದ ಅಮೀನಾ ನದಾಫ್(10), ಈರಪ್ಪ ಮಾಯಪ್ಪನವರ(10) ಅಸ್ವಸ್ಥಗೊಂಡವರಾಗಿದ್ದಾರೆ. 

ಶುಕ್ರವಾರ ಶಾಲೆಗೆ ಹೋದಾಗ ಅಡುಗೆ ಮ‌‌ನೆ ಛಾವಣಿಯ ಸಿಮೆಂಟ್ ತಗಡು ಒಡೆದಿತ್ತು, ಸಿಮೆಂಟ್ ಛಾವಣಿ ತಗಡು ಒಡೆದದ್ದು ನೋಡಿದ ಸಿಬ್ಬಂದಿ ಗಾಬರಿಗೊಂಡಿದ್ದರು. ಆಹಾರ ಮತ್ತು ನೀರಿಗೆ ವಿಷ ಹಾಕಿರಬೇಕು ಎಂದು ಸಂಶಯಗೊಂಡಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನೀರು ಕುಡಿದ ಇಬ್ಬರು ಅಡುಗೆ ಸಿಬ್ಬಂದಿ, ಇದಕ್ಕೂ‌ ಮುನ್ನ ಇದೇ ನೀರು ಸೇವಿಸಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ತಲೆಸುತ್ತು ಬಂದಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಅವರನ್ನ ಧಾರವಾಡದ ಸಿವಿಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. 
ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ವೈದ್ಯರು ಸದ್ಯ ಅಸ್ವಸ್ಥ ನಾಲ್ವರು ಅರಾಮಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಸವದತ್ತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.