ಖಾನಾಪುರ(ಡಿ.12): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಮಕ್ಕಳಿಗೆ ಮಧ್ಯಾಹ್ನದ ಪೌಷ್ಟಿಕ ಆಹಾರ ಯೋಜನೆಯಡಿ ಉಣಬಡಿಸಲು ತಯಾರಿಸಿದ್ದ ಬಿಸಿ ಸಾರು (ಸಾಂಬಾರು) ಬಿದ್ದು ಮೈಮೇಲೆ ಸಿಡಿದ ಪರಿಣಾಮ ಮೂವರು ಅಂಗನವಾಡಿ ವಿದ್ಯಾರ್ಥಿಗಳು ಹಾಗೂ ಅಡುಗೆ ಸಹಾಯಕ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಹೋಬಳಿಯ ಗೋಲ್ಯಾಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.  

ಗೋಲ್ಯಾಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಎಂದಿನಂತೆ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ವಿತರಿಸಲು ಅನ್ನ ಮತ್ತು ಸಾರು ಸಿದ್ಧಪಡಿಸಲಾಗಿತ್ತು. ಅಡುಗೆಮನೆಯಿಂದ ಸಾರು ತುಂಬಿದ ಪಾತ್ರೆಯನ್ನು ಎತ್ತಿಕೊಂಡು ಬರುತ್ತಿದ್ದ ಅಂಗನವಾಡಿ ಸಹಾಯಕಿ ಲೀಲಾವತಿ (55) ಎಂಬುವರಿಗೆ ತಲೆಸುತ್ತು(ಚೆಕ್ಕರ್) ಬಂದು, ಪ್ರಜ್ಞೆ ತಪ್ಪಿದಂತಾಗಿದೆ. ಹೀಗಾಗಿ ಅವರು ಸಾರು ಹಿಡಿದಿದ್ದ ಪಾತ್ರೆಯನ್ನು ಕೈಬಿಟ್ಟಿದ್ದಾರೆ. ಆಗ ಬಿಸಿ ಸಾರು ಅಂಗನವಾಡಿ ಕೇಂದ್ರದಲ್ಲಿ ಕುಳಿತಿದ್ದ ವಿದ್ಯಾರ್ಥಿಗಳ ಮೇಲೆ ಹರಿದಿದೆ. ಪರಿಣಾಮ ಒಂದೇ ಕುಟುಂಬಕ್ಕೆ ಸೇರಿದ ಸಂಜನಾ ಗುರವ, ಸಮೀಕ್ಷಾ ಗುರವ ಮತ್ತು ಸಾನ್ವಿ ಗುರವ ಎಂಬ ಮೂವರು ವಿದ್ಯಾರ್ಥಿಗಳಿಗೆ ಕಾಲು ಕೈಗೆ ಗಂಭೀರ ಗಾಯಗಳಾಗಿವೆ. ಜೊತೆಗೆ ಅಡುಗೆ ಸಹಾಯಕಿ ಲೀಲಾವತಿ ಅವರ ಮೇಲೂ ಸಾರು ಬಿದ್ದು ಅವರ ಕೈ, ಹಣೆಗೆ ಗಾಯಗಳಾಗಿವೆ. ಕೂಡಲೇ ಸಮಯಪ್ರಜ್ಞೆ ಮೆರೆದ ಅಂಗನವಾಡಿ ಕಾರ್ಯಕರ್ತೆ ಭಾರತಿ ಗುರವ ಎಲ್ಲ ಮಕ್ಕಳನ್ನು ಅಂಗನವಾಡಿ ಕೇಂದ್ರದಿಂದ ಹೊರಗೆ ಸಾಗಿಸಿ ಸ್ಥಳೀಯರ ನೆರವಿ ನಿಂದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಳಿಕ ಆಂಬ್ಯುಲೆನ್ಸ್ ವಾಹನಕ್ಕೆ ಕರೆ ಮಾಡಿ ಗಂಭೀರವಾಗಿ ಗಾಯಗೊಂಡಿದ್ದ ಅಂಗನವಾಡಿ ಸಹಾಯಕಿ ಮತ್ತು ಮೂವರು ಮಕ್ಕಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ. ಗಾಯಾಳು ಮಕ್ಕಳಿಗೆ ಮತ್ತು ಅಂಗನವಾಡಿ ಸಹಾಯಕಿಗೆ ಚಿಕಿತ್ಸೆ ನೀಡಿರುವ ವೈದ್ಯರು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ. 

ಆಕಸ್ಮಿಕವಾಗಿ ನಡೆದ ಈ ಘಟನೆಯ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಖಾನಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪರ್ವೀನ ಶೇಖ್ ಅವರು ತಿಳಿಸಿದ್ದಾರೆ.