Uttara Kannada Rainfall; ಮಲಗಿದ್ದವರ ಮೇಲೆ ಮನೆ ಕುಸಿದು 4 ಮಂದಿ ದುರ್ಮರಣ

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸುರಿದ ಭಾರೀ ಮಳೆಗೆ ಹಲವೆಡೆ ಅನಾಹುತ ಸಂಭವಿಸಿದೆ.  ಭಟ್ಕಳದಲ್ಲಿ ಗುಡ್ಡ ಜರಿದು ಮನೆ ಮೇಲೆ ಬಿದ್ದು ಮನೆಯಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

four dead after landslide due to heavy rain in Uttara Kannada gow

ಕಾರವಾರ (ಆ.2): ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸುರಿದ ಭಾರೀ ಮಳೆಗೆ ಹಲವೆಡೆ ಅನಾಹುತ ಸಂಭವಿಸಿದೆ. ಕಾರಾವಾರದ ಭಟ್ಕಳದಲ್ಲಿ ಗುಡ್ಡ ಜರಿದು ಮನೆ ಮೇಲೆ ಬಿದ್ದು ಮನೆಯಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮಿಕ್ಕಂತೆ ಮುಂಡಗೋಡ, ಜೋಯಿಡಾ ಹಾಗೂ ಭಟ್ಕಳಗಳಲ್ಲಿ ವಿಪರೀತ ಮಳೆಯಾಗಿದೆ. ಮುಂಡಗೋಡದಲ್ಲಿ ಸುಮಾರು 2 ಗಂಟೆಗಳ ಕಾಲ ಭಾರೀ ಪ್ರಮಾಣದಲ್ಲಿ ಮಳೆಯಾಗಿದ್ದು, ಹಲವು ಕಡೆ ಅನಾಹುತಗಳು ನಡೆದಿದೆ. ಜಿಲ್ಲೆಯ ಉಳಿದೆಡೆ ಆಗಾಗ ಜಿಟಿಜಿಟಿ ಮಳೆ ಬಿದ್ದಿದೆ. ಭಟ್ಕಳ ತಾಲೂಕಿನ ಹಲವೆಡೆ ನೆರೆ ನಿರ್ಮಾಣವಾಗಿದೆ. ನದಿ ಹಾಗೂ ಹಳ್ಳಗಳ ಬಳಿಯ ತಗ್ಗು  ಪ್ರದೇಶಗಳು, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕಶಾಲೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮುಂತಾದ ಶೈಕ್ಷಣಿಕ ಸಂಸ್ಥೆಗಳಿಗೆ ರಜೆ  ಘೋಷಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶ ಹೊರಡಿಸಿದ್ದಾರೆ. ಸಾರದಹೊಳೆ, ಮುಟ್ಟೋಳಿ, ಮುಂಡೋಳಿ ಸೇರಿ ಹಲವು  ಪ್ರದೇಶಗಳು ಜಲಾವೃತವಾಗಿದ್ದು, ಭಾರೀ ಮಳೆಯ ಕಾರಣ ಮುಟ್ಟೋಳಿಯಲ್ಲಿ ಗುಡ್ಡ ಕುಸಿತವಾಗಿದೆ.

ಕಾರ್ಯಾಚರಣೆಗೆ ಮಳೆ ಅಡ್ಡಿ, ನಾಲ್ವರು ದುರ್ಮರಣ: ಕಾರವಾರದಲ್ಲಿ ಭಾರೀ ಮಳೆಯ ಹಿನ್ನೆಲೆ ಮನೆಯ ಮೇಲೆ ಗುಡ್ಡ ಕುಸಿತವಾಗಿದೆ. ಮನೆಯಲ್ಲಿ ಮಲಗಿದ್ದವರ ಮೇಲೆ ಮನೆ ಉರುಳಿ ಬಿದ್ದಿದ್ದು, ಮನೆಯೊಳಗೆ ನಾಲ್ಕು ಮಂದಿ ಸಿಲುಕಿಕೊಂಡಿದ್ದರು. ಬುಲ್ಡೋಝರ್ ಸ್ಥಳಕ್ಕೆ ತೆರಳಲು ಸಾಧ್ಯವಾಗದ್ದರಿಂದ ಸ್ಥಳೀಯರಿಂದಲೇ ತೆರವು ಕಾರ್ಯಾಚರಣೆ ಆರಂಭವಾಗಿತ್ತು. ಆದರೆ ದುರಾದೃಷ್ಟಾವಶಾತ್ ಮನೆಯೊಳಗೆ ಸಿಲುಕಿ ಬಿದ್ದಿರುವ ಮನೆ ಯಜಮಾನಿ ಲಕ್ಷ್ಮೀ ನಾರಾಯಣ ನಾಯ್ಕ (60),‌ ಮಗಳು ಲಕ್ಷ್ಮೀ ನಾರಾಯಣ ನಾಯ್ಕ (45), ಮಗ ಅನಂತ ನಾರಾಯಣ ನಾಯ್ಕ (38), ಹಾಡುವಳ್ಲಿ ಬಡಬಾಗಿಲಿನ ತಂಗಿ ಮಗ ಪ್ರವೀಣ್ ರಾಮಕೃಷ್ಣ ನಾಯ್ಕ (16) ಅವರು ಮೃತಪಟ್ಟಿದ್ದಾರೆ.

ಇನ್ನು ಶಿರಾಲಿ, ರಂಗಿನಕಟ್ಟೆ, ಮುಂಡಳ್ಳಿ, ಸಾರ್ದೊಳೆ, ಹೆಬ್ಬಾಳೆ, ಭಟ್ಕಳದ ನಗರ ಭಾಗ ಸೇರಿದಂತೆ ಹಲವು ಪ್ರದೇಶ ಜಲಾವೃತವಾಗಿದೆ. ತೋಟಗಳು, ಮನೆಗಳು ಹಾಗೂ ವಾಹನಗಳೂ ಕೂಡಾ ಮುಳುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಸುನೀಲ್ ನಾಯ್ಕ್ ಜನರ ರಕ್ಷಣೆಗಾಗಿ ಎನ್‌ಡಿಆರ್‌ಎಫ್ ತಂಡವನ್ನು ಬರಲು ಹೇಳಿದ್ದಾರೆ. ಶಾಸಕರ ಸೂಚನೆಯಂತೆ ಭಟ್ಕಳಕ್ಕೆ ಎನ್‌ಡಿಆರ್‌ಎಫ್ ತಂಡ ಆಗಮಿಸಿದೆ.

ವಾರವಿಡೀ ಭಾರಿ ಮಳೆ ಮುನ್ಸೂಚನೆ: ವಿವಿಧ ಜಿಲ್ಲೆಗಳಿಗೆ ಆರೆಂಜ್‌, ಯೆಲ್ಲೋ ಅಲರ್ಟ್‌

ವಿವಿಧ ಜಿಲ್ಲೆಗಳಿಗೆ ಆರೆಂಜ್‌, ಯೆಲ್ಲೋ ಅಲರ್ಚ್‌ : ಬೆಂಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ರಾಮನಗರ, ಚಾಮರಾಜನಗರ, ಮೈಸೂರು, ಮಂಡ್ಯ, ಯಾದಗಿರಿ ಸೇರಿದಂತೆ ರಾಜ್ಯದ 9ಕ್ಕೂ ಹೆಚ್ಚು ಜಿಲ್ಲೆಗಳ್ಲಲಿ ಉತ್ತಮ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೆ ಆ.6 ಶನಿವಾರದವರೆಗೂ ಅತಿ ಭಾರಿ ಮಳೆಯ ‘ಆರೆಂಜ್‌ ಅಲರ್ಚ್‌’ ಘೋಷಿಸಲಾಗಿದೆ. ಉಳಿದಂತೆ ಮಂಗಳವಾರದಿಂದ ಬುಧವಾರ ಬೆಳಗ್ಗೆ 8.30ರ ತನಕ ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು ಮತ್ತು ಚಾಮರಾಜನಗರ ಜಿಲ್ಲೆಗೆ ‘ಯೆಲ್ಲೋ ಅಲರ್ಚ್‌’ ಘೋಷಿಸಲಾಗಿದೆ. 

Karnataka Rain; ರಾಜ್ಯದಲ್ಲಿ ಇನ್ನೂ 5 ದಿನ ಮುಂದುವರೆಯಲಿದೆ ಮಳೆ!

ಬುಧವಾರದಿಂದ ಗುರುವಾರದವರೆಗೆ ಕಲಬುರಗಿ, ವಿಜಯಪುರ, ಬಾಗಲಕೋಟೆ, ತುಮಕೂರು, ಮೈಸೂರು, ಚಾಮರಾಜನಗರ ಜಿಲ್ಲೆಗೆ ‘ಯೆಲ್ಲೋ ಅಲರ್ಚ್‌’ ನೀಡಲಾಗಿದೆ. ಗುರುವಾರದಿಂದ ಶುಕ್ರವಾರದವರೆಗೆ ತುಮಕೂರು ಮತ್ತು ರಾಮನಗರ ಜಿಲ್ಲೆಗೆ ‘ಆರೆಂಜ್‌ ಅಲರ್ಚ್‌’ ಪ್ರಕಟಿಸಲಾಗಿದ್ದು ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗೆ ‘ಯೆಲ್ಲೋ ಅಲರ್ಚ್‌’ ಇರಲಿದೆ.

Latest Videos
Follow Us:
Download App:
  • android
  • ios